AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಿಗಾಲಲ್ಲೇ ತೆರಳಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ; ಅಕ್ಷರ ಸಂತನ ಸರಳತೆ ಕಂಡು ರಾಷ್ಟ್ರಪತಿಗೂ ಅಚ್ಚರಿ

Harekala Hajabba: ನಿನ್ನೆ ವಿಮಾನದಲ್ಲಿ ದೆಹಲಿಗೆ ತೆರಳಿದ ಹಾಜಬ್ಬನವರನ್ನು ಬರಮಾಡಿಕೊಂಡ ಕೇಂದ್ರ ಗೃಹ ಸಚಿವಾಲಯದ ಸಿಬ್ಬಂದಿ ಕೂಡ ಹಾಜಬ್ಬನವರ ಉಡುಗೆ ಹಾಗೂ ಸರಳತೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು.

ಬರಿಗಾಲಲ್ಲೇ ತೆರಳಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ; ಅಕ್ಷರ ಸಂತನ ಸರಳತೆ ಕಂಡು ರಾಷ್ಟ್ರಪತಿಗೂ ಅಚ್ಚರಿ
ಬರಿಗಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ
TV9 Web
| Edited By: |

Updated on:Nov 08, 2021 | 5:24 PM

Share

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಷರ ಸಂತ ಎಂದೇ ಹೆಸರಾಗಿರುವ ಹರೇಕಳ ಹಾಜಬ್ಬ (Harekala Hajabba) ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು (Padma Shri Award) ಸ್ವೀಕರಿಸುವಾಗ ತಮ್ಮ ಚಪ್ಪಲಿಗಳನ್ನು ಕುಳಿತ ಜಾಗದಲ್ಲೇ ಬಿಚ್ಚಿಟ್ಟು ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬಿಳಿ ಶರ್ಟ್, ಬಿಳಿ ಪಂಚೆಯುಟ್ಟು ಬರಿಗಾಲಿನಲ್ಲಿ ತಮ್ಮೆದುರು ನಿಂತ ಹಾಜಬ್ಬನವರ ಸರಳತೆ ಮತ್ತು ವಿನಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಕಣ್ಣರಳಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಿನ್ನೆ ವಿಮಾನದಲ್ಲಿ ದೆಹಲಿಗೆ ತೆರಳಿದ ಹಾಜಬ್ಬನವರನ್ನು ಬರಮಾಡಿಕೊಂಡ ಕೇಂದ್ರ ಗೃಹ ಸಚಿವಾಲಯದ ಸಿಬ್ಬಂದಿ ಕೂಡ ಹಾಜಬ್ಬನವರ ಉಡುಗೆ ಹಾಗೂ ಸರಳತೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಂಸದರು, ಕೇಂದ್ರ ಸಚಿವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಮ್ಮನ್ನು ರಾಷ್ಟ್ರಪತಿಗಳು ನಿಂತ ಜಾಗಕ್ಕೆ ಕರೆದುಕೊಂಡು ಹೋಗುವವರೆಗೂ ಕೈ ಮುಗಿದುಕೊಂಡೇ ನಡೆದು ಹೋದ ಹಾಜಬ್ಬನವರು ಪ್ರಶಸ್ತಿ ಸ್ವೀಕರಿಸುವಾಗಲೂ ತಲೆ ಬಗ್ಗಿಸಿ ಕೈ ಮುಗಿದು ನಿಂತಿದ್ದರು. ರಾಷ್ಟ್ರಪತಿಗಳೇ ಅವರಿಗೆ ಕ್ಯಾಮೆರಾ ಕಡೆ ನೋಡುವಂತೆ ಸನ್ನೆ ಮಾಡಿದ ಮೇಲೆ ಅವರು ಕ್ಯಾಮೆರಾದ ಕಡೆ ನೋಡಿ ನಗು ಚೆಲ್ಲಿದರು. ಕರ್ನಾಟಕದ ಸಚಿವರು, ಕೇಂದ್ರ ಸಚಿವರು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬವನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರಾದ ಹರೇಕಳ ಹಾಜಬ್ಬ ರಸ್ತೆಯ ಬದಿಯಲ್ಲಿ ನಿಂತು ಹಣ್ಣುಗಳನ್ನು ಮಾರಿದ ಹಣದಿಂದ ತಮ್ಮೂರಲ್ಲಿ ಶಾಲೆ ಕಟ್ಟಿದ್ದಾರೆ. 64 ವರ್ಷದ ಹಾಜಬ್ಬ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಆದರೂ ಈಗ ತಮ್ಮೂರಿಗೆ ಶಾಲೆ ಕಟ್ಟಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಅಕ್ಷರ ಸಂತ ಎನ್ನಲಾಗುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 2020ರ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ಮಂಗಳೂರಿನ ಹರೇಕಳದಲ್ಲಿ ಹುಟ್ಟಿದ ಹಾಜಬ್ಬನವರದ್ದು ಬಡ ಕುಟುಂಬ. ಮನೆಯಲ್ಲಿ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದ್ದುದರಿಂದ ಶಾಲೆಗೆ ಹೋಗಿ ಶಿಕ್ಷಣ ಕಲಿಯಲು ಸಾಧ್ಯವಾಗಲಿಲ್ಲ. ಬಾಲ್ಯದಿಂದಲೇ ಬೀಡಿ ಸುತ್ತಿ ಜೀವನ ನಡೆಸುತ್ತಿದ್ದ ಅವರು ಆಮೇಲೆ ಮಂಗಳೂರಿಗೆ ಹೋಗಿ ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರತೊಡಗಿದರು. ಹಾಜಬ್ಬ ಯಾವಾಗ ಮಂಗಳೂರಿಗೆ ಹೋಗಿ ಹಣ್ಣು ವ್ಯಾಪಾರ ಶುರು ಮಾಡಿದರೋ ಆಗ ಶಿಕ್ಷಣ, ಭಾಷೆಗಳು ಗೊತ್ತಿಲ್ಲದಿದ್ದರೆ ಸಮಾಜದಲ್ಲಿ ಎಷ್ಟು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಅನುಭವಕ್ಕೆ ಬಂದಿತು. ಹೀಗಾಗಿ, ತನ್ನಂತೆ ತನ್ನೂರಿನ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ನಿರ್ಧರಿಸಿದ ಅವರು ಕಿತ್ತಳೆ ಮಾರಿದ ಹಣದಿಂದ ಬಡ ಮಕ್ಕಳಿಗಾಗಿ ಊರಿನಲ್ಲಿ ಶಾಲೆ ಕಟ್ಟಿಸಿದರು.

ದುಬಾರಿ ಹಣ ಕೊಟ್ಟು ಶಿಕ್ಷಣ ಕಲಿಯಲು ಸಾಧ್ಯವಾಗದ ಬಡ ಮಕ್ಕಳಿಗೆಂದು ತಮ್ಮೂರಲ್ಲಿ ಶಾಲೆಯೊಂದನ್ನು ಆರಂಭಿಸಬೇಕೆಂದು ಹಾಜಬ್ಬ ನಿರ್ಧರಿಸಿದರು. ಅದಕ್ಕಾಗಿ ಹಾಜಬ್ಬ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಬಿಇಓ ಕಚೇರಿಗೆ ಅಲೆದಾಡಿದರು. ಹಣ್ಣಿನ ವ್ಯಾಪಾರವನ್ನು ಬದಿಗಿಟ್ಟು ಶಾಲೆ ಕಟ್ಟಲು ಅನುಮತಿ ಪಡೆಯಲು ಓಡಾಡಿದ ಹಾಜಬ್ಬನವರಿಗೆ ಶಾಲೆಯನ್ನು ಆರಂಭಿಸಲು ಅನುಮತಿ ದೊರೆಯಲಿಲ್ಲ, ಹಣ್ಣಿನ ಮಾರಾಟದಿಂದ ಬರುತ್ತಿದ್ದ ಹಣವೂ ಇಲ್ಲದಂತಾಯಿತು. ಆದರೂ ಧೃತಿಗೆಡದ ಹಾಜಬ್ಬನವರ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು, 1999ರ ಜೂ.6ರಂದು ನ್ಯೂಪಡ್ಪು ಗ್ರಾಮದ ಮದರಸಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳೊಂದಿಗೆ ಪ್ರಾಥಮಿಕ ಶಾಲೆ ಆರಂಭಿಸಿದ್ದರು.

ತನ್ನೂರಿನ ವಿದ್ಯಾರ್ಥಿಗಳಿಗಾಗಿ ಸ್ವಂತ ಶಾಲಾ ಕಟ್ಟಡ ಕಟ್ಟಬೇಕೆಂದು ಹಠ ತೊಟ್ಟ ಹಾಜಬ್ಬ ಕಿತ್ತಳೆ ಮಾರಿ ಅದುವರೆಗೂ ಸಂಗ್ರಹಿಸಿದ್ದ 25 ಸಾವಿರ ರೂ. ಹಿಡಿದುಕೊಂಡು ಗ್ರಾಮದಲ್ಲಿ ಬೇರೆಯವರು ಅತಿಕ್ರಮಣ ಮಾಡಿದ್ದ ಸರ್ಕಾರಿ ಜಾಗವನ್ನು ಶಾಲೆಗಾಗಿ ನೀಡುವಂತೆ ಅಧಿಕಾರಿಗಳ ಮುಂದೆ ಹಠ ಹಿಡಿದರು. ಬಳಿಕ 2004ರಲ್ಲಿ ಪತ್ರಿಕೆಯೊಂದು ನೀಡಿದ ವರ್ಷದ ವ್ಯಕ್ತಿಯ 1 ಲಕ್ಷ ರೂ. ಬಹುಮಾನದ ಮೊತ್ತವನ್ನು ಶಾಲೆಯ ಕಟ್ಟಡಕ್ಕೆ ಹಾಕಿ ಪ್ರೌಢಶಾಲೆಯನ್ನೂ ಆರಂಭಿಸಲು ಅಲೆದಾಡಿದರು. ಆಗ ಶಾಸಕರಾಗಿದ್ದ ಯು.ಟಿ. ಖಾದರ್‌ ಆ ಊರಿಗೆ ಪ್ರೌಢಶಾಲೆ ಮಂಜೂರು ಮಾಡಿಸಿದರು. ಹೀಗೆ ಹರೇಕಳದಲ್ಲಿ ಶಾಲೆಯೊಂದು ತಲೆ ಎತ್ತಿತು.

ಇದಾದ ಬಳಿಕ ಹಾಜಬ್ಬನವರ ಬಗ್ಗೆ ಎಲ್ಲ ಕಡೆ ಚರ್ಚೆಯಾಗತೊಡಗಿತು. ಹಾಜಬ್ಬನವರ ಪ್ರಯತ್ನಕ್ಕೆ ಕೈಜೋಡಿಸಲು ಅನೇಕರು ಮುಂದೆ ಬಂದರು. ಹಲವು ಸಂಘ-ಸಂಸ್ಥೆಗಳು ಆ ಶಾಲಾ ಕಟ್ಟಡಕ್ಕೆ ಹಣ ಸಹಾಯವನ್ನು ಕೂಡ ಮಾಡಿದವು. ಮಾಧ್ಯಮಗಳಲ್ಲೂ ಹಾಜಬ್ಬನವರ ಹೆಸರು ಕಾಣಲಾರಂಭಿಸಿತು. ಹಣ್ಣು ಮಾರುತ್ತಲೇ ಶಾಲೆಯೊಂದನ್ನು ಕಟ್ಟಿದ ಹಾಜಬ್ಬನವರಿಗೆ ಪದ್ಮಶ್ರೀ ಪ್ರಶಸ್ತಿಯೂ ಒಲಿದು ಬಂದಿತು.

ಇದುವರೆಗೂ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವ ಹರೇಕಳ ಹಾಜಬ್ಬ ಇಂದಿಗೂ ಕಿತ್ತಳೆ ಹಣ್ಣು ಮಾರುತ್ತಾರೆ. ಹಳೆಯದೊಂದು ಪಂಚೆ ಸುತ್ತಿಕೊಂಡು, ಕಿತ್ತಳೆ ಹಣ್ಣುಗಳನ್ನು ಮಾರುತ್ತಾ ಮಂಗಳೂರಿನ ರಸ್ತೆಗಳಲ್ಲಿ ಓಡಾಡುವ ಹಾಜಬ್ಬ ಇನ್ನೂ ತಮ್ಮ ವೃತ್ತಿಯನ್ನು ಬಿಟ್ಟಿಲ್ಲ. ಅಕ್ಷರ ಸಂತ ಎಂದೇ ಕರೆಯಲ್ಪಡುವ ಹಾಜಬ್ಬನವರ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕದಲ್ಲಿ ಪಾಠವೂ ಸೇರ್ಪಡೆಯಾಗಿದೆ. ತಾವು ಶಿಕ್ಷಣ ಕಲಿಯದಿದ್ದರೂ ನೂರಾರು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹಾಜಬ್ಬ ಎಲ್ಲೆಡೆ ಮನೆಮಾತಾಗಿದ್ದಾರೆ.

ಇದನ್ನೂ ಓದಿ: Harekala Hajabba: ಪ್ರಧಾನಿ ಮೋದಿ ನನ್ನ ಕೈ ಮುಟ್ಟಿ ಮಾತಾಡಿಸಿದರು; ಖುಷಿ ಹಂಚಿಕೊಂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ

Padma Awards: ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್; ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

Published On - 5:19 pm, Mon, 8 November 21

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ