ಮಂಗಳೂರು: ಮಂಗಳೂರಿನ ಸುರತ್ಕಲ್ ಟೋಲ್(Surathkal Gate) ಗೇಟ್ ಕಿತ್ತೆಸೆಯಲು ಇಂದು ‘ನೇರ ಕಾರ್ಯಾಚರಣೆ’ಗೆ ಕರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಭದ್ರತೆ ಏರ್ಪಡಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಸುರತ್ಕಲ್‍ನ ಎನ್‍ಐಟಿಕೆ (NITK) ಬಳಿ ಇರುವ ಟೋಲ್ ಗೇಟ್ ಅಕ್ರಮವಾಗಿ ಕಟ್ಟಲಾಗಿದೆ. ಹೀಗಾಗಿ ಅದನ್ನು ತೆರವುಗೊಳಿಸಬೇಕೆಂದು ಈ ಹಿಂದೆ ಸಾಕಷ್ಟು ಹೋರಾಟಗಳು ನಡೆದಿತ್ತು. ಆದ್ರೆ ಈವರೆಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತೆರವಿಗೆ ಪ್ರಯತ್ನಪಟ್ಟಿಲ್ಲ. ಹೀಗಾಗಿ ಇಂದು ಸಾವಿರಾರು ಹೋರಾಟಗಾರರೇ ಬೃಹತ್ ಪ್ರತಿಭಟನೆಯ ಮೂಲಕ ಟೋಲ್ ಗೇಟನ್ನು ಕಿತ್ತೆಸೆಯಲು ಮುಂದಾಗಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಸ್ಥಳದಲ್ಲಿ 300ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ
ಸುರತ್ಕಲ್ ಟೋಲ್ ತೆರವಿಗೆ ಇವತ್ತು ಪ್ರತಿಭಟನೆಗೆ ಸಂಘಟನೆಗಳು ನಿರ್ಧರಿಸಿವೆ. ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಭದ್ರತೆ ಏರ್ಪಡಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಮಸ್ಯೆ ಆಗಬಾರದು. ಅಗತ್ಯ ಅನಿಸುವಷ್ಟು ನಾವು ಪೊಲೀಸರನ್ನ ಭದ್ರತೆಗೆ ಹಾಕಿದ್ದೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳ ಪೊಲೀಸರನ್ನ ಭದ್ರತೆಗೆ ಹಾಕಿದ್ದೇವೆ. ಬಹುತೇಕ 300ಕ್ಕೂ ಅಧಿಕ ಪೊಲೀಸರು, ಕೆಎಸ್ಆರ್ಟಿಸಿ ಸಿಬ್ಬಂದಿ ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಟೋಲ್ ಸಂಸ್ಥೆ ರಕ್ಷಣೆ ಕೇಳಿದ್ದಾರೆ. ಹೀಗಾಗಿ ನಾವು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಭದ್ರತೆ ಹಾಕಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಕಾರ್ಯಾಚರಣೆ ಅಂತ ಪೋಸ್ಟ್ ಹಾಕಲಾಗಿತ್ತು. ಹೀಗಾಗಿ ಹಲವು ಹೋರಾಟಗಾರರಿಗೆ ನಾವು ನೋಟೀಸ್ ನೀಡಿದ್ದೇವೆ. ಇದರಲ್ಲಿ ಕೆಲವರ ಮನೆಗೆ ರಾತ್ರಿ ನೋಟಿಸ್ ಕೊಡಲು ಹೋದಾಗ ತಡವಾಗಿದೆ. ಆದರೆ ನಿಯಮ ಪ್ರಕಾರವೇ ನಾವು ನೋಟಿಸ್ ಕೊಟ್ಟಿದ್ದೇವೆ.
ಹೋರಾಟದ ಪ್ರಮುಖ ಮುಖಂಡರು ಶಾಂತಿಯುತ ಪ್ರತಿಭಟನೆ ಅಂತ ಹೇಳಿದ್ದಾರೆ. ಈ ಹಿಂದೆಯೂ ಇವರ ಪ್ರತಿಭಟನೆ ಶಾಂತಿಯುತವಾಗಿ ಇತ್ತು. ಹೀಗಾಗಿ ಇವತ್ತು ಕೂಡ ಶಾಂತಿಯುತ ಪ್ರತಿಭಟನೆ ಮಾಡಬಹುದು. ಈ ಹೆದ್ದಾರಿ ಅತ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಆಗಿದೆ. ಹೀಗಾಗಿ ಇಲ್ಲಿ ಯಾವುದೇ ವಾಹನ ಮತ್ತು ಜನ ಸಂಚಾರಕ್ಕೆ ಸಮಸ್ಯೆ ಆಗಬಾರದು ಎಂದರು. ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುವ ಕಾರ್ಯಾಚರಣೆ ಬೇಡ: ನಳಿನ್ ಕುಮಾರ್ ಕಟೀಲ್ ರೆಡ್ ಸಿಗ್ನಲ್
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಇಂದು ಪ್ರತಿಭಟನೆ
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಸಮಾನ ಮನಸ್ಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ. ಈ ಟೋಲ್ ಗೇಟ್ 2015 ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಂಭಗೊಂಡಿದೆ. ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪವಿದೆ. ಸುರತ್ಕಲ್ ಟೋಲ್ ನಿಂದ ಹೆಜಮಾಡಿ ಟೋಲ್ ಪ್ಲಾಜಾ ದೂರ ಕೇವಲ 17 ಕಿ.ಮೀ. ಸುರತ್ಕಲ್ ಟೋಲ್ ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಆದರೆ ಮುಚ್ಚುವ ಬದಲು ಹೊಸ ಗುತ್ತಿಗೆದಾರನಿಗೆ ಟೋಲ್ ವಹಿಸಲು ಟೆಂಡರ್ ನೀಡಲಾಗಿದೆ. ಹೀಗಾಗಿ ನಿರ್ಣಾಯಕ ಹೋರಾಟಕ್ಕೆ ಸಂಘಟನೆಗಳು ಮುಂದಾಗಿವೆ.
Published On - 9:53 am, Tue, 18 October 22