ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಗೇಟ್ ವಿರುದ್ಧ ನಾಳೆಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಯಲಿದ್ದು, ಟೋಲ್ ಗೇಟ್ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ನ.3ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿ ಮಾಡಿ, ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಯಾವುದೇ ಪ್ರತಿಭಟನೆ, ಧರಣಿ ನಡೆಸದಂತೆ ಕ್ರಮಕೈಗೊಳ್ಳಲಾಗಿದೆ. ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ ಸೇರಿ ಸಂಘಟನೆಗಳಿಂದ ಧರಣಿ ಮಾಡಲಾಗುತ್ತಿದೆ. ಟೋಲ್ ತೆರವಿಗೆ ಸಂಸದ ಕಟೀಲು ನ.7ರವರೆಗೆ ಮತ್ತೆ ಕಾಲಾವಕಾಶ ಕೇಳಿದ್ದಾರೆ. ಸುರತ್ಕಲ್‍ನ ಎನ್‍ಐಟಿಕೆ (NITK) ಬಳಿ ಇರುವ ಟೋಲ್ ಗೇಟ್ ಅಕ್ರಮವಾಗಿ ಕಟ್ಟಲಾಗಿದೆ. ಹೀಗಾಗಿ ಅದನ್ನು ತೆರವುಗೊಳಿಸಬೇಕೆಂದು ಈ ಹಿಂದೆ ಸಾಕಷ್ಟು ಹೋರಾಟಗಳು ನಡೆದಿತ್ತು. ಆದರೆ ಈವರೆಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತೆರವಿಗೆ ಪ್ರಯತ್ನಪಟ್ಟಿಲ್ಲ. ಹೀಗಾಗಿ ಸಾವಿರಾರು ಹೋರಾಟಗಾರರೇ ಬೃಹತ್ ಪ್ರತಿಭಟನೆಯ ಮೂಲಕ ಟೋಲ್ ಗೇಟನ್ನು ಕಿತ್ತೆಸೆಯಲು ಮುಂದಾಗಿದ್ದರು.
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಪ್ರತಿಭಟನೆ
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಸಮಾನ ಮನಸ್ಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಈ ಟೋಲ್ ಗೇಟ್ 2015 ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆರಂಭಗೊಂಡಿದೆ. ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪಿಸಲಾಗಿದೆ. ಸುರತ್ಕಲ್ ಟೋಲ್ನಿಂದ ಹೆಜಮಾಡಿ ಟೋಲ್ ಪ್ಲಾಜಾ ದೂರ ಕೇವಲ 17 ಕಿ.ಮೀ. ಸುರತ್ಕಲ್ ಟೋಲ್ ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಆದರೆ ಮುಚ್ಚುವ ಬದಲು ಹೊಸ ಗುತ್ತಿಗೆದಾರನಿಗೆ ಟೋಲ್ ವಹಿಸಲು ಟೆಂಡರ್ ನೀಡಲಾಗಿದೆ. ಹೀಗಾಗಿ ನಿರ್ಣಾಯಕ ಹೋರಾಟಕ್ಕೆ ಸಂಘಟನೆಗಳು ಮುಂದಾಗಿವೆ.
ಹೋರಾಟಗಾರರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಮನವಿ:
ಹೋರಾಟವನ್ನ ಶಾಂತಿಯುತವಾಗಿ ಮಾಡಲು ನನ್ನ ಅಭ್ಯಂತರ ಇಲ್ಲ. ಕಾನೂನು ಕೈಗೆತ್ತಿಕೊಂಡರೆ ಮುಂದಕ್ಕೆ ಆಗುವ ಅನಾಹುತಕ್ಕೆ ಅವರೇ ಹೊಣೆಯಾಗುತ್ತಾರೆ. ನಾನು ಟೋಲ್ ಗೇಟ್ ತೆಗೆಯಲು ಕಠಿಬದ್ದನಾಗಿದ್ದೇನೆ, ತೆಗೆದೇ ತೆಗೆಸ್ತೀನಿ. ಆದರೆ ಕಾನೂನು ಸಮಸ್ಯೆ ಕಾರಣ ಟೋಲ್ ಗೇಟ್ ತೆರವು ಕಷ್ಟವಾಗಿದೆ. ಹೀಗಾಗಿ 20 ದಿನಗಳ ಕಾಲ ಹೋರಾಟ ಮುಂದೂಡಿ ಅಂತ ವಿನಂತಿ ಮಾಡ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಮನವಿ ಹೋರಾಟಗಾರರಲ್ಲಿ ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:20 pm, Thu, 27 October 22