ಮಂಗಳೂರು, ಫೆಬ್ರವರಿ 16: ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಉಪ್ಪಿನಂಗಡಿ (Uppinangady) ಪಟ್ಟಣ ಬಳಿಯ ನೆಕ್ಕಿಲಾಡಿ ಕುರ್ವೇಲುನ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಫೀಜಾ (17) ಮೃತ ದುರ್ದೈವಿ. ಉಪ್ಪಿನಂಗಡಿ ನಿವಾಸಿ, ಉದ್ಯಮಿ ದಾವೂದ್ ಎಂಬವರ ಪುತ್ರಿ ಹಫೀಜಾ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ (ಫೆ.15) ಹಫೀಜಾ ತಡರಾತ್ರಿವರೆಗೂ ವಿದ್ಯಭ್ಯಾಸ ಮಾಡಿ, ಮಲಗಿದ್ದಾರೆ. ಆದರೆ ಬೆಳಿಗ್ಗೆ ಏಳಲೇ ಇಲ್ಲ. ಮಲಗಿದ ಸ್ಥಿತಿಯಲ್ಲೆ ಮೃತಪಟ್ಟಿದ್ದಾರೆ.
ರಾಯಚೂರು: ಸಿಂಧನೂರು ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಬಾತ್ ರೂಂನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಜಳ್ಳಿ ಗ್ರಾಮದ ನಿವಾಸಿ ಹುಸೇನಪ್ಪ (18) ಮೃತ ದುರ್ದೈವಿ. ಹಾಸ್ಟೇಲ್ಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಮಂಗಳೂರು: ದೈವ ನರ್ತನ ಮುಗಿಸ್ತಿದ್ದಂತೆ ಹೃದಯಾಘಾತದಿಂದ ನರ್ತಕ ಸಾವು
ದಾವಣಗೆರೆ: ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಜಗಳೂರು ತಾಲೂಕಿನ ಅಣಬೂರು ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಜಗಳೂರು ಪಟ್ಟಣದ ಗಾಂಧಿನಗರದ ನಿವಾಸಿ ಡಾಕ್ಯಾ ನಾಯ್ಕ್ (65) ಮೃತದುರ್ದೈವಿ. ಅರಣ್ಯ ಇಲಾಖೆ ಸಿಬ್ಬಂದಿ ಶಾಂತಕುಮಾರ್ ನೀಡಿದ ದೂರಿನ ಮೇರೆಗೆ ಪೋಲಿಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಕೊಲೆ ಮಾಡಿ ಹೂತಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಧಿ ವಿಜ್ಞಾನ ತಂಡದ ಸಿಬ್ಬದ್ದಿಗಳು, ಬೆರಳಚ್ಚು ಸಿಬ್ಬಂದಿಗಳು ಹಾಗೂ ಶ್ವಾನದಳ ಸ್ಥಳ ಪರಿಶೀಲನೆ ನಡೆಸಿವೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕೆಆರ್ಪುರಂನ ಸೀಗೆಹಳ್ಳಿ ನಿವಾಸಿ ರಮೇಶ್ ಎಂಬುವರ ಮನೆಯ ಬೇಸ್ಮೆಂಟ್ ಪಾರ್ಕಿಂಗ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ನಿಂತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮೀಟರ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದಾಗಿ ಕಾರು ಭಾಗಶಃ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ಸ್ಥಳಿಯರು ಮತ್ತು ಮನೆ ಮಾಲಿಕ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಕೆಆರ್ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ