ಮಂಗಳೂರು: ಶಕ್ತಿ ಯೋಜನೆ(Shakti Scheme) ಮೂಲಕ ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗುತ್ತಿದ್ದು ನಾರಿ ಮಣಿಗಳು ಫುಲ್ ಖುಷ್ ಆಗಿದ್ದಾರೆ. ಈ ಯೋಜನೆ ಮೂಲಕ ರಾಜ್ಯ ಪ್ರವಾಸಕ್ಕೆ ಇಳಿದಿದ್ದಾರೆ. ಶ್ರೀಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ(Dharmasthala) ಮಹಿಳಾ ಭಕ್ತರ ದಂಡು ಹರಿದು ಬರುತ್ತಿದೆ. ಈ ಹಿಂದೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಮಂಜುನಾಥ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ.
ರಾಜ್ಯದ ವಿವಿಧ ಭಾಗದಿಂದ ಬಸ್ನಲ್ಲಿ ಬಂದಿರುವ ಮಹಿಳೆಯರು ದೇವರ ದರ್ಶನ ಪಡೆದು ಕುಕ್ಕೆಗೆ ತೆರಳಲು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂದಿದೆ. ಧರ್ಮಸ್ಥಳದಿಂದ ಕುಕ್ಕೆಗೆ ತೆರಳಲು ಧರ್ಮಸ್ಥಳದಲ್ಲಿ ಜನಜಂಗುಳಿ ಉಂಟಾಗಿದ್ದು ಸರ್ಕಾರಿ ಬಸ್ ಹತ್ತಲು ಮಹಿಳೆಯರ ನೂಕುನುಗ್ಗಲಾಗಿದೆ.
ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕಲಬುರಗಿ ನಗರದಿಂದ ರಾಜ್ಯದ ಬೇರಡೆ, ವಿವಿಧ ಬಸ್ ಗಳಲ್ಲಿ ಹೆಚ್ಚಿನ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿರುವುದು ಕಂಡುಬಂತು.
ಇದನ್ನೂ ಓದಿ: Shakti Scheme: ಉಚಿತ ಬಸ್ಗೆ ಮುಗಿಬಿದ್ದ ಮಹಿಳೆಯರು; ಸಂಕಷ್ಟದಲ್ಲಿ ಖಾಸಗಿ ಬಸ್ ಮಾಲೀಕರು
ಶಕ್ತಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಮಹಿಳೆಯರು ಇದರ ಉಪಯೋಗ ಪಡೆಯಲು ಮುಂದಾಗಿದ್ದಾರೆ. ಯೋಜನೆಗೆ ಚಾಲನೆ ಸಿಕ್ಕ ದಿನದಿಂದಲೇ ಮಹಿಳೆಯರು ತಮ್ಮ ದಾಖಲೆಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದ್ರೆ ಜೂನ್ 11ರಂದು ವಯಸ್ಸಾದ ಮಹಿಳೆಯರು ಉಚಿತ ಅಂತ ಯಾವುದೇ ದಾಖಲೆ ತಾರದೇ ಬಸ್ಸಿನಲ್ಲಿ ಗೊಂದಲಕ್ಕೀಡಾಗುತ್ತಿದ್ದ ಘಟನೆಗಳು ನಡೆದಿವೆ. ಉಡುಪಿಯಲ್ಲಿ ಅಜ್ಜಿಯೊಬ್ಬರು ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳಲು ದಾಖಲೆ ತಾರದೇ, ಕೈಯಲ್ಲಿ ಹಣವೂ ಇಲ್ಲದೇ ಬಸ್ಸು ನಿಲ್ದಾಣದಲ್ಲಿ ಅಳುತ್ತಾ ಕುಳಿತ್ತಿದ್ದರು. ಬಸ್ ನಿರ್ವಾಹಕರು ದಾಖಲೆ ನೀಡದೇ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಅಂತ ಅಜ್ಜಿಗೆ ಪ್ರಯಾಣ ನಿರಾಕರಿಸಿದ್ದರು. ಕೊನೆಗೆ ಬಸ್ಸುನಿಲ್ದಾಣದಲ್ಲಿ ಇದ್ದವರೊಬ್ಬರು ಮಾನವೀಯತೆ ಮೆರೆದು ಶಿವಮೊಗ್ಗದ ಟಿಕೆಟ್ ಹಣವನ್ನು ತಾವು ನೀಡಿ ಅಜ್ಜಿಯನ್ನು ಶಿವಮೊಗ್ಗಕ್ಕೆ ಕಳುಹಿಸಿದ ಘಟನೆ ನಡೆದಿದೆ.
ಇನ್ನು ಮಹಿಳೆಯರು ನಾಲ್ಕು ನಿಗಮದ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಒರಿಜಿನಲ್ ಅಥವಾ ಡಿಜಿ ಲಾಕರ್ ನಲ್ಲಿರುವ ತಮ್ಮ ದಾಖಲೆಗಳನ್ನು ತೋರಿಸಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿತ್ತು. ಈಗ ಸಾರಿಗೆ ಇಲಾಖೆ ತನ್ನ ಆದೇಶ ತಿದ್ದುಪಡಿ ಮಾಡಿದ್ದು ಜೆರಾಕ್ಸ್ ದಾಖಲೆಗಳನ್ನು ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ನೂತನ ಆದೇಶ ಹೊರಡಿಸಿದೆ. ಈ ಮೂಲಕ ಮೂಲ/ನಕಲು/ ಡಿಜಿ ಲಾಕರ್ ( ಹಾರ್ಡ್ ಮತ್ತು ಸಾಫ್ಟ್ ಕಾಪಿ ತೋರಿಸಿ ಪ್ರಯಾಣ ಮಾಡಬಹುದು).
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ