ಮಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ (Siddaramaiah) ನೀಡಿದ ನಾಯಿಮರಿ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಡಾಗ್ಫೈಟ್ಗೆ ಎಡೆ ಮಾಡಿಕೊಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿಮರಿ ರೀತಿ ಇರುತ್ತಾರೆ ಅಂತ ಟಗರು ಹೂಂಕರಿಸಿದ್ದೇ ತಡ, ಕೇಸರಿ ಪಡೆಯಲ್ಲಿ ಬಿರುಗಾಳಿ ಎದ್ದಿತ್ತು. ನಿನ್ನೆ(ಜ.04) ಇದೇ ವಿಚಾರವಾಗಿ ಒಂದು ಸುತ್ತಿನ ವಾರ್ ಕೂಡ ನಡೆದಿತ್ತು. ಆದರೆ ಮಾತಿನ ಕಾಳಗ ಇಷ್ಟಕ್ಕೆ ನಿಂತಿಲ್ಲ. ಇದರ ಮುಂದುವರೆದ ಭಾಗವಾಗಿ ಇಂದೂ ಕೂಡ ಸಿದ್ದರಾಮಯ್ಯ ವಿರುದ್ಧ ಕೇಸರಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಆದರೂ ಸಿದ್ದರಾಮಯ್ಯ ಮಾತ್ರ ತನ್ನದೇನು ತಪ್ಪಿಲ್ಲ, ನಾನು ಆಡಿದ್ದ ಮಾತು ಪ್ರಮಾದವೇನೂ ಅಲ್ಲ ಅನ್ನುವ ರೀತಿ ಸ್ಪಷ್ಟನೆ ನೀಡುತ್ತಿದ್ದಾರೆ. ಸದ್ಯ ಈ ಕುರಿತಾಗಿ ಮಂಗಳೂರಿನಲ್ಲಿ ಸಿದ್ಧರಾಮಯ್ಯ ಅವರು ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿಗೆ ನಾನು ನಾಯಿಮರಿ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿ, ಕೇಂದ್ರದಿಂದ ಅನುದಾನ ತರಲು ಧೈರ್ಯ ಬೇಕು ಅಂತಾ ಹೇಳಿದ್ದೇನೆ. ಸಿಎಂ ಬೊಮ್ಮಾಯಿ ಧೈರ್ಯವಾಗಿ ಇರಬೇಕು ಎಂದು ಹೇಳಿದ್ದೇನೆ. ನನ್ನನ್ನು ಟಗರು, ಹುಲಿಯಾ ಅಂತಾರೆ, BSYಗೆ ರಾಜಾಹುಲಿ ಅಂತಾರೆ. ಅದು ಹೇಗೆ ಅಸಂವಿಧಾನಿಕ ಪದ ಆಗುತ್ತೆ. ನಾಯಿ ನಂಬಿಕಸ್ಥ ಪ್ರಾಣಿ. ನಾಯಿ ರೀತಿ ಧೈರ್ಯವಾಗಿ ಕೇಂದ್ರದಿಂದ ನಮ್ಮ ಪಾಲಿನ ಅನುದಾನ ತರಬೇಕು ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Siddaramaiah: ನಾಯಿಮರಿ ಹೇಳಿಕೆ ಸಮರ್ಥಿಸಿಕೊಂಡು ಮುಖ್ಯಮಂತ್ರಿ ಧೈರ್ಯ ಪ್ರದರ್ಶಿಸಿದರೆ ಕೇಂದ್ರದಿಂದ ಅನುದಾನ ಸಿಗುತ್ತವೆ ಎಂದರು
ಚುನಾವಣೆಗೆ ಕ್ಷೇತ್ರ ಆಯ್ಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಅಲೆಮಾರಿ ರಾಜಕಾರಣಿ ಅಲ್ಲ. ಜನ ಕೋಲಾರ, ಬಾದಾಮಿ, ವರುಣ ಕ್ಷೇತ್ರದಿಂದ ಕರೆಯುತ್ತಾರೆ. ನಾನು ಅರ್ಜಿ ಹಾಕುವಾಗ ಹೈಕಮಾಂಡ್ಗೆ ಬಿಟ್ಟಿದ್ದು ಅಂತಾ ಹೇಳಿದ್ದೇನೆ ಎಂದರು.
ಇನ್ನು ವಿಧಾನಸೌಧದಲ್ಲಿ ಅನಧಿಕೃತವಾಗಿ 10.5 ಲಕ್ಷ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಸಾಕಷ್ಟು ಪ್ರಕರಣ ನಡೆದಿದೆ. ರಾಜ್ಯದಲ್ಲಿರುವುದು 40% ಸರ್ಕಾರವೆಂದು ಗುತ್ತಿಗೆದಾರರ ಸಂಘ ಹೇಳಿದೆ. ಕೆ.ಎಸ್.ಈಶ್ವರಪ್ಪಗೆ ಲಂಚ ಕೊಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ನನ್ನ ಸಾವಿಗೆ ಈಶ್ವರಪ್ಪ ಕಾರಣವೆಂದು ಡೆತ್ನೋಟ್ ಸಹ ಬರೆದಿಟ್ಟಿದ್ದ.
ಅದೇ ರೀತಿಯಾಗಿ ಇತ್ತೀಚಿಗೆ ತುಮಕೂರು ಜಿಲ್ಲೆ ದೇವರಾಯನದುರ್ಗದ ಐಬಿಯಲ್ಲಿ ಗುತ್ತಿಗೆದಾರ ಪ್ರಸಾದ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಗುತ್ತಿಗೆದಾರ ಶಿವಕುಮಾರ್ ಎಂಬುವರು ದಯಾಮರಣ ಕೇಳಿದ್ದಾರೆ. ಇವೆಲ್ಲ ನೋಡುತ್ತಿದ್ದರೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ. ಅಧಿಕಾರಿಗಳ ವರ್ಗಾವಣೆ, ಪೋಸ್ಟಿಂಗ್ಗೆ ಹಣ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Thu, 5 January 23