ಮಂಗಳೂರು, ಜುಲೈ 18: ಆಡಳಿತದ ಅನುಕೂಲಕ್ಕಾಗಿ ಕನ್ನಡ ಕಲಿಯಲು ಪ್ರಯತ್ನಿಸುವಂತೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸಲಹೆ ನೀಡಿದ್ದಾರೆ. ಮಂಗಳೂರಿನಲ್ಲಿ ರೈಲ್ವೆ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾಗಿದ್ದೆ. ಆದರೆ ಈಗ ನನಗೆ ಹಿಂದಿಯ ಮಹತ್ವ ಅರಿವಾಗಿದೆ. ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಏಳುತ್ತೇನೆ ಮತ್ತು ಹಿಂದಿಯಲ್ಲಿ ವರ್ಣಮಾಲೆ ಬರೆಯಲು ಕಲಿಯುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಆರು ತಿಂಗಳಲ್ಲಿ ಹಿಂದಿಯಲ್ಲಿ ಪತ್ರ ಬರೆಯುವುದನ್ನು ಕಲಿತು ಸಂಸತ್ತಿನಲ್ಲಿ ಭಾಷಣ ಮಾಡುತ್ತೇನೆ ಎಂದು ಸೋಮಣ್ಣ ಹೇಳಿದ್ದಾರೆ. ಕನ್ನಡ ಕಲಿಯುವುದು ಕಷ್ಟವಲ್ಲ, ಹಾಗಾಗಿ ಭಾಷೆ ಕಲಿಯಲು ರೈಲ್ವೆ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಸ್ಥಳೀಯ ಶಾಸಕರಿಗೆ ಸೋಮಣ್ಣ ತಿಳಿಸಿದರು.
ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ರೈಲ್ವೆ ಅಧಿಕಾರಿಗಳು ಹೊರಗಿನವರು ಕೆಲಸ ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಹೋಗಲಾಡಿಸಲು ಕನ್ನಡ ಕಲಿಯುವ ಅಗತ್ಯವಿದೆ ಎಂದು ಸಂಸದ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಬಲ್ಲ ಅನೇಕ ಅಧಿಕಾರಿಗಳಿದ್ದಾರೆ. ಒಂದೋ ಹುದ್ದೆ ಕೊಡಬೇಕು ಇಲ್ಲವೇ ಇಲ್ಲಿ ಕೆಲಸ ಮಾಡುವವರು ಕನ್ನಡ ಕಲಿಯಬೇಕು ಎಂದು ಅವರು ಹೇಳಿದ್ದಾರೆ.
ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ವಿ ಸೋಮಣ್ಣ, ಫ್ಲ್ಯಾಟ್ಫಾರಂ, ವಿಶ್ರಾಂತಿ ಕೊಠಡಿ, ಕ್ಯಾಂಟೀನ್ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದರೊಂದಿಗೆ, ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ರೈಲ್ವೆ ಇಲಾಖೆ ಸಚಿವರೊಬ್ಬರು ಸಭೆ ನಡೆಸಿದಂತಾಗಿದೆ.
Hon’ble Union Minister of State for Railways, Shri @VSOMANNA_BJP , held a meeting on railway-related matters in Mangaluru today. pic.twitter.com/cpCl0WMeGt
— South Western Railway (@SWRRLY) July 17, 2024
ಕರಾವಳಿಯ ರೈಲ್ವೆ ಬೇಡಿಕೆಗಳ ಕುರಿತಂತೆ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಿದ್ದಾರೆ. ರೈಲ್ವೆ ಅಧಿಕಾರಿಗಳು, ದಕ್ಷಿಣಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
ಉತ್ತರಕನ್ನಡದ ಶಿರೂರು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ರೈಲ್ವೆ ಮಾರ್ಗಗಳ ಮೇಲೂ ಗುಡ್ಡ ಕುಸಿತದ ಆತಂಕ ವ್ಯಕ್ತವಾಯಿತು.
ಇದನ್ನೂ ಓದಿ: ಕನ್ನಡಿಗರಿಗೆ ಮೀಸಲಾತಿ: ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಸೂದೆಯನ್ನು ತಡೆಹಿಡಿದ ಸರ್ಕಾರ
ಈ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ರೈಲ್ವೆ ಇಲಾಖೆಯಿಂದ ನಮ್ಮದೆ ಆದ ವ್ಯವಸ್ಥೆಯಲ್ಲಿ ಪಾಕೃತಿಕ ವಿಕೋಪ ನಿರ್ವಹಣೆ ಮಾಡ್ತೇವೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಯಾವ ರೀತಿ ಇದೆಯೋ ಅದಕ್ಕಿಂತ ವಿಭಿನ್ನವಾಗಿ ನಮ್ಮ ಇಲಾಖೆಯಲ್ಲಿ ವ್ಯವಸ್ಥೆಗಳಿವೆ. ಇದಕ್ಕಾಗಿ ವಾರ್ ರೂಂ ಮಾಡಿದ್ದೇವೆ. ಪ್ರತಿಯೊಂದು ಕಡೆಗಳಲ್ಲೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ