ಸ್ವಲ್ಪ ಎಚ್ಚರ ತಪ್ಪಿದ್ರೂ ಹಳ್ಳಕ್ಕೆ ಬೀಳುವುದು ಗ್ಯಾರಂಟಿ! ಸುಸಜ್ಜಿತ ರಸ್ತೆಗೆ ಜನರ ಡಿಮ್ಯಾಂಡ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಂಗಳಾಯಿ ಗ್ರಾಮದ ಜನರ ಕಷ್ಟ ಒಂದ ಎರಡಾ ಅನ್ನೂ ಹಾಗಾಗಿದೆ. ನಮಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಸುಸಜ್ಜಿತ ರಸ್ತೆ ನೀಡಿ. ಎತ್ತರ ಪ್ರದೇಶದಿಂದ ಕೂಡಿರುವ ಇಲ್ಲಿ ಯಾರೇ ಅಸೌಖ್ಯಕ್ಕೊಳಗಾದರೆ ಎತ್ತಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಈ ಪ್ರದೇಶದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಪ್ರದೇಶ ಯಾವುದೇ ದಟ್ಟಾರಣ್ಯ, ಗ್ರಾಮೀಣ ಪ್ರದೇಶದ ಜನರ ಬೇಡಿಕೆಯಲ್ಲ. ಬದಲಾಗಿ ನಗರದ ಸರಹದ್ದಿನಲ್ಲಿರುವ ಪ್ರದೇಶ. ಹೌದು ನಗರದ ದರ್ಬೆಯಲ್ಲಿ ಮುಖ್ಯರಸ್ತೆಯಿಂದ […]

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಂಗಳಾಯಿ ಗ್ರಾಮದ ಜನರ ಕಷ್ಟ ಒಂದ ಎರಡಾ ಅನ್ನೂ ಹಾಗಾಗಿದೆ. ನಮಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಸುಸಜ್ಜಿತ ರಸ್ತೆ ನೀಡಿ. ಎತ್ತರ ಪ್ರದೇಶದಿಂದ ಕೂಡಿರುವ ಇಲ್ಲಿ ಯಾರೇ ಅಸೌಖ್ಯಕ್ಕೊಳಗಾದರೆ ಎತ್ತಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಈ ಪ್ರದೇಶದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಪ್ರದೇಶ ಯಾವುದೇ ದಟ್ಟಾರಣ್ಯ, ಗ್ರಾಮೀಣ ಪ್ರದೇಶದ ಜನರ ಬೇಡಿಕೆಯಲ್ಲ. ಬದಲಾಗಿ ನಗರದ ಸರಹದ್ದಿನಲ್ಲಿರುವ ಪ್ರದೇಶ. ಹೌದು ನಗರದ ದರ್ಬೆಯಲ್ಲಿ ಮುಖ್ಯರಸ್ತೆಯಿಂದ ಕೇವಲ ನೂರು ಮೀಟರ್ ದೂರದಲ್ಲಿರುವ ಪಾಂಗಳಾಯಿ ಎಂಬ ಹೆಸರಿನ ಪ್ರದೇಶ. ಮುಖ್ಯರಸ್ತೆಯಿಂದ ಸುಮಾರು 100 ಮೀಟರ್ ದೂರಕ್ಕೆ ಮಣ್ಣಿನ ರಸ್ತೆಯಿಂದ ಕೂಡಿದೆ. ಆದರೆ ಈ ರಸ್ತೆಗೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ.

ಎಚ್ಚರ ತಪ್ಪಿದ್ರೆ ಹಳ್ಳಕ್ಕೆ ಬೀಳೋದು ಗ್ಯಾರಂಟಿ: ಸ್ವಲ್ಪ ಎಚ್ಚರ ತಪ್ಪಿದರೂ ಚಲಿಸುವ ವಾಹನವಾಗಲಿ, ಪಾದಚಾರಿಗಳಾಗಲಿ ರಸ್ತೆ ಬದಿಯ ತೋಡಿಗೆ ಬೀಳುವುದು ಗ್ಯಾರಂಟಿ. ನೂರು ಮೀಟರ್ ರಸ್ತೆಯ ಕೊನೆಯಲ್ಲಿ ಕಾಲುಸೇತುವೆಯೊಂದನ್ನೂ ನಿರ್ಮಿಸಲಾಗಿದೆ. ಈ ಕಾಲುಸೇತುವೆಗೂ ಯಾವುದೇ ರಕ್ಷಣಾ ಬೇಲಿಯಿಲ್ಲದೆ ಪ್ರದೇಶವನ್ನು ಸಂಪರ್ಕಿಸುವಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.
ಈ ಕಾಲು ಸೇತುವೆಯಿಂದ ದಾಟಿದರೆ ಮುಂದಕ್ಕೆ ಸಿಗುವುದೇ ಪಾಂಗಳಾಯಿ. ಸುಮಾರು 13ಕ್ಕೂ ಅಧಿಕ ಮನೆಗಳಿರುವ ಈ ಪ್ರದೇಶ ಸರಿಯಾದ ರಸ್ತೆಯಿಲ್ಲದೆ 40 ವರ್ಷಗಳಿಂದ ಹಾಗೆಯೇ ಇದೆ. ಈ ಪ್ರದೇಶವನ್ನು ತಲುಪುತ್ತಿದ್ದಂತೆ ಏರು ರಸ್ತೆಯಿಂದ ಕೂಡಿದೆ. ಬಹಳ ಇಕ್ಕಟ್ಟಾದ ರಸ್ತೆಯ ಒಂದು ಭಾಗದಲ್ಲಿ ಯಾವುದೇ ತಡೆಗೋಡೆಯಿಲ್ಲದ ತೋಡೊಂದು ಗಿಡಗಂಟಿಗಳಿಂದ ಆವೃತವಾಗಿದೆ. ಈ ಪ್ರದೇಶಕ್ಕೆ ತೆರಳುವುದೆಂದರೆ ಬೆಟ್ಟವನ್ನು ಹತ್ತಿದಂತಾಗುತ್ತದೆ. ನಾಲ್ಕು ಚಕ್ರದ ವಾಹನವಂತೂ ಚಲಿಸಲು ಇಲ್ಲಿ ಅಸಾಧ್ಯ. ದ್ವಿಚಕ್ರ ವಾಹನ ಸವಾರರು ಅತೀ ಜಾಗರೂಕತೆಯಿಂದ ಚಲಿಸುವಂತಾಗಿದೆ. ಆದರೆ ಮಳೆಗಾಲದಲ್ಲಿ ಅಸಾಧ್ಯ.
ಮನವಿ ನೀಡಿದರೂ ಪ್ರಯೋಜನವಿಲ್ಲ: ಈ ರಸ್ತೆಯನ್ನು ಸರಿಪಡಿಸುವಂತೆ ಕಳೆದ 40 ವರ್ಷಗಳಿಂದಲೂ ಈ ಪ್ರದೇಶದ ಜನತೆ ಜನಪ್ರತಿನಿಧಿಗಳಿಗೆ, ಪುರಸಭೆ, ನಗರಸಭೆಗೆ, ಶಾಸಕರಿಗೆ, ಸ್ಥಳೀಯ ನಗರಸಭಾ ಸದಸ್ಯರಿಗೆ ಮನವಿಯನ್ನೂ ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಓಟು ಕೇಳಲು ಮಾತ್ರ ಬರುವ ಜನಪ್ರತಿನಿಧಿಗಳು ಚುನಾವಣೆ ಕಳೆದ ನಂತರ ಇತ್ತ ತಲೆಹಾಕುತ್ತಲೂ ಇಲ್ಲ. ಈ ಭಾಗದ ನಗರಸಭೆ ಸದಸ್ಯರಂತೂ ಈ ಪ್ರದೇಶಕ್ಕೆ ಬರುತ್ತಲೇ ಇಲ್ಲ. ಈ ಹಿಂದೆ ಕೇವಲ ಭರವಸೆಯನ್ನಷ್ಟೇ ನೀಡಿದ್ದಾರೆ. ರಸ್ತೆ ನಿರ್ಮಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಈ ಪ್ರದೇಶದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.





