ನದಿ, ಸಮುದ್ರಗಳು ನೈಸರ್ಗಿಕವಾಗಿ ಇದ್ದರಷ್ಟೇ ಚಂದ. ಆದ್ರೆ ಕಡಲನಗರಿ ಮಂಗಳೂರಿನಲ್ಲಿ ಸರ್ಕಾರಿ ಯೋಜನೆ ಹೆಸರಲ್ಲಿ ನದಿ ಒತ್ತುವರಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪರಿಸರ ನಾಶದ ಜೊತೆ ನಮ್ಮ ತೆರಿಗೆ ಹಣ ಪೋಲಾಗುತ್ತಿದೆ ಎಂದು ಜನ ರೊಚ್ಚಿಗೆದ್ದಿದ್ದಾರೆ. ಕಡಲನಗರಿ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಗಳಲ್ಲಿ ಒಂದಾಗಿರುವ ನೇತ್ರಾವತಿ ರಿವರ್ ಫ್ರಂಟ್ ಯೋಜನೆಗೆ ಹಲವು ಅಪಸ್ವರಗಳು ಕೇಳಿಬಂದಿದೆ. ನದಿ ಒತ್ತುವರಿ ಮಾಡಿ ನಿಯಮ ಉಲ್ಲಂಘನೆ ಮಾಡುತ್ತಿರುವ ಜೊತೆ ಜನರ ತೆರಿಗೆ ಹಣವನ್ನು ಅಧಿಕಾರಿಗಳು ಪೋಲು ಮಾಡುತ್ತಿರುವ ಆರೋಪ ವ್ಯಕ್ತವಾಗಿದೆ.
ನಗರದ ಜಪ್ಪು ಬಳಿಯ ನೇತ್ರಾವತಿ ಸೇತುವೆಯ ಭಾಗದಿಂದ ಬೋಳಾರ ಭಾಗದವರೆಗೆ ನದಿ ತಟದಲ್ಲಿ ಸುಮಾರು 2.1 ಕಿ.ಮೀ ಉದ್ದದಲ್ಲಿ ವಾಕಿಂಗ್ ಹಾಗೂ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದೆ. ಆದ್ರೆ ಇಲ್ಲಿ ಟ್ರ್ಯಾಕ್ ನಿರ್ಮಾಣಕ್ಕಾಗಿ ಖಾಸಗಿ ಜಮೀನು ಇರುವ ಭಾಗದಲ್ಲಿ ನದಿಗೆ ಮಣ್ಣು ಹಾಕಿ ತಡೆಗೋಡೆ ನಿರ್ಮಿಸಿ ಸಿ.ಆರ್.ಝೆಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ಜೊತೆ ಈ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಚರ್ಚಿಸಿಲ್ಲ ಎಂದು ಆರೋಪಿಸಲಾಗಿದೆ.
ಇನ್ನು ಈ ಯೋಜನೆಗೆ ಸುಮಾರು 70 ಕೋಟಿ ವ್ಯಯಿಸಲಾಗುತ್ತಿದೆ. ಆದ್ರೆ ಇದಕ್ಕೆ ಇಷ್ಟು ಮೊತ್ತ ಬೇಕೆ ಎಂದು ರಾಜ್ಯ ನಗರಾಭಿವೃದ್ದಿ ಸಚಿವ ಬಿ.ಎಸ್.ಸುರೇಶ್ ಅವರೇ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ಯೋಜನೆ ಆರಂಭಕ್ಕೆ ಮೊದಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಹೀಗಿದ್ದರೂ ಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
Also Read: ಕಲಬುರಗಿ ಬಹಮನಿ ಸುಲ್ತಾನರ ಕೋಟೆ ಒತ್ತುವರಿ ತೆರವಿಗೆ ಚಾಟಿ ಬೀಸಿದ ಹೈಕೋರ್ಟ್, ಏನಿದು ಬೆಳವಣಿಗೆ?
ಇದರ ಜೊತೆ ಮಾಹಿತಿ ಹಕ್ಕಿನ ಮೂಲಕ ಯೋಜನೆಯ ದಾಖಲೆಗಳನ್ನು ಕೇಳಿದ್ರು ಸಬೂಬು ಹೇಳಿ ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈವರೆಗೂ ಯೋಜನೆಯ ಯಾವುದೇ ನಕ್ಷೆ ಮಾಡದೇ ಗುತ್ತಿಗೆದಾರರು ಮಾಡಿದ ಪ್ಲ್ಯಾನ್‌ನಂತೆ ಅವರಿಗೆ ಬೇಕಾದ ಹಾಗೆ ಕಾಮಗಾರಿ ನಡೆಸಲಾಗುತ್ತಿದೆಯಂತೆ.
ಈ ಯೋಜನೆಯಿಂದಾಗಿ ಸ್ಥಳೀಯ ಮೀನುಗಾರರಿಗೂ ತೊಂದರೆಯಾಗಿದ್ದು ಮೀನುಗಾರರು ಯೋಜನೆಯನ್ನು ವಿರೋಧಿಸಿದ್ದಾರೆ. ತಡೆಗೋಡೆ ಕಟ್ಟುವುದರಿಂದ ಬೋಟ್ ಎಳೆದು ಮೀನು ಅನ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂದು ದೂರಿದ್ದಾರೆ. ಒಟ್ಟಿನಲ್ಲಿ ಜನರ ತೆರಿಗೆ ಹಣದಲ್ಲಿ ಜನರಿಗೆ ಉಪಯೋಗ ಆಗುವ ಯೋಜನೆ ಬರಬೇಕೆ ಹೊರತು ಅಧಿಕಾರಿಗಳು, ಜನಪ್ರತಿನಿಧಿಗಳ ಕಿಸೆ ತುಂಬಿಸಿಕೊಳ್ಳುವ ಯೋಜನೆಯಾಗಬಾರದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Tue, 9 January 24