ಕೊಲೆ ಆರೋಪ ಕೋರ್ಟ್​ನಲ್ಲಿ ಸಾಬೀತಾದರೂ ಮಹಿಳೆ ಅಪರಾಧಮುಕ್ತ! ಮಂಗಳೂರಲ್ಲೊಂದು ಅಚ್ಚರಿಯ ತೀರ್ಪು

ಮಂಗಳೂರು ಜಿಲ್ಲಾ ನ್ಯಾಯಾಲಯದಿಂದ ಒಂದು ವಿಶೇಷ, ಅಚ್ಚರಿಯ ತೀರ್ಪು ಹೊರಬಿದ್ದಿದೆ. ಮಹಿಳೆಯೊಬ್ಬರು ಪತಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರೂ, ಆಕೆಯನ್ನು ಅಪರಾಧಮುಕ್ತಗೊಳಿಸಿ ತೀರ್ಪು ನೀಡಲಾಗಿದೆ. ಹಾಗಾದರೆ ಏನಿದು ಪ್ರಕರಣ? ಈ ತೀರ್ಪಿಗೆ ಕಾರಣವೇನು? ಅಚ್ಚರಿಯ ತೀರ್ಪು ನೀಡುವ ವೇಳೆ ನ್ಯಾಯಾಲಯ ಹೇಳಿದ್ದೇನು? ಎಲ್ಲ ವಿವರಗಳು ಇಲ್ಲಿವೆ.

ಕೊಲೆ ಆರೋಪ ಕೋರ್ಟ್​ನಲ್ಲಿ ಸಾಬೀತಾದರೂ ಮಹಿಳೆ ಅಪರಾಧಮುಕ್ತ! ಮಂಗಳೂರಲ್ಲೊಂದು ಅಚ್ಚರಿಯ ತೀರ್ಪು
ಎಲಿಯಮ್ಮ ಹಾಗೂ ಯೋಹಾನನ್
Edited By:

Updated on: Dec 24, 2025 | 11:03 AM

ಮಂಗಳೂರು, ಡಿಸೆಂಬರ್ 24: ಆಕೆ ಪತಿಯನ್ನೇ ಕೊಲೆ ಮಾಡಿದಾಕೆ. ಸಾಲದೆಂಬಂತೆ ನ್ಯಾಯಾಲಯದಲ್ಲೂ ಆರೋಪ ಸಾಬೀತಾಗಿದೆ. ಇಷ್ಟಾದರೂ ಆಕೆಗೆ ಕೋರ್ಟ್ ಶಿಕ್ಷೆ ವಿಧಿಸಿಲ್ಲ! ಅಷ್ಟೇ ಅಲ್ಲ, ಆಕೆಯನ್ನು ಅಪರಾಧಮುಕ್ತಗೊಳಿಸಿದೆ! ಹಾಗೆಂದು ಆಕೆ ಮನೆಗೆ ಮರಳುವಂತೆಯೂ ಇಲ್ಲ. ಮತ್ತೆಲ್ಲಿಗೆ ಕಳುಹಿಸುತ್ತಾರೆ? ಇದು ಹೇಗೆ ಸಾಧ್ಯ ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ಆಶ್ಚರ್ಯ ಆದರೂ ಇದು ಸತ್ಯ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ವಿಶೇಷ ತೀರ್ಪು ನೀಡಿದೆ.

ಏನಿದು ಪ್ರಕರಣ, ಆಶ್ಚರ್ಯಕರ ತೀರ್ಪು?

ಇದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022ರ ಜುಲೈ 5 ರಂದು ನಡೆದಿದ್ದ ಕೊಲೆ ಪ್ರಕರಣ. ಯೋಹಾನನ್ ಎಂಬುವವರನ್ನು ಅವರ ಪತ್ನಿ ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಪ್ರಕರಣದ ವಿಚಾರಣೆ ವೇಳೆ ಬೆಳ್ತಂಗಡಿ ಪೊಲೀಸರು‌ ಆರೋಪಿ ಎಲಿಯಮ್ಮ ಬಂಧಿಸಿದ್ದರು.

ತಪ್ಪೊಪ್ಪಿಕೊಂಡಿದ್ದ ಆರೋಪಿ ಎಲಿಯಮ್ಮ

ಬೆಳ್ತಂಗಡಿ ಪೊಲೀಸರ ವಿಚಾರಣೆ ವೇಳೆ ಆರೋಪಿ ಎಲಿಯಮ್ಮ ‘ಪರಿಯನ್ನು ಕೊಲೆ ಮಾಡಿರುವುದು ಹೌದು’ ಎಂದು ಒಪ್ಪಿಕೊಂಡಿದ್ದರು. ಹೀಗಾಗಿ ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಸಾಕ್ಷಿ ವಿಚಾರಣೆಯನ್ನು ಮುಂದುವರೆಸಿತ್ತು. ಸಾಕ್ಷಿದಾರರು ಕೂಡ ಆಕೆಯ ವಿರುದ್ಧ ಸಾಕ್ಷಿ ನುಡಿದಿದ್ದರು.

ಎಲಿಯಮ್ಮ ಬಚಾವಾಗಿದ್ಹೇಗೆ?

ಕೊಲೆ ಪ್ರಕರಣದ ವಿಚಾರಣೆಯ ಕ್ರಾಸ್ ಎಕ್ಸಾಮಿನೇಷನ್ ಹಂತದಲ್ಲಿ ಆರೋಪಿ ಪರ ವಕೀಲ ವಿಕ್ರಮ್ ರಾಜ್ ಎ. ವಾದ ಮಂಡಿಸಿದ್ದರು. ಎಲಿಯಮ್ಮ ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ ಮತ್ತು ಭ್ರಮೆಗಳಿಂದ (Delusional Disorder) ಬಳಲುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಕೃತ್ಯವು ತಪ್ಪು ಅಥವಾ ಕಾನೂನು ಬಾಹಿರ ಎಂದು ತಿಳಿಯುವ ಸ್ಥಿತಿಯಲ್ಲಿ ಆರೋಪಿ ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ ಎಂದು ವಿಕ್ರಮ್ ರಾಜ್ ಎ ವಾದ ಮಂಡಿಸಿದ್ದರು.

ಅಚ್ಚರಿಯ ತೀರ್ಪು ಪ್ರಕಟಿಸಿ ಕೋರ್ಟ್ ಹೇಳಿದ್ದೇನು?

ವಾದ-ಪ್ರತಿವಾದಗಳನ್ನು ಆಲಿಸಿ ನ್ಯಾಯಾಧೀಶರಾದ ಮೋಹನ ಜೆ.ಎಸ್. ತೀರ್ಪು ನೀಡಿದ್ದು, ಕೊಲೆ ಕೃತ್ಯ ಸಾಬೀತಾಗಿದ್ದರೂ ಆರೋಪಿ ಅಪರಾಧಿಕ ಹೊಣೆಯಿಂದ ಮುಕ್ತ ಎಂದು ಹೇಳಿದ್ದಾರೆ. ನಂತರ ಆರೋಪಿಯನ್ನು ನಿಮ್ಹಾನ್ಸ್‌ಗೆ (NIMHANS) ಕಳುಹಿಸಲು ಜೈಲು ಅಧೀಕ್ಷಕರಿಗೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಕಿಡಿಗೇಡಿಗಳಿಗೆ ಪೊಲೀಸರ ಖೆಡ್ಡಾ: ವಿದೇಶದಲ್ಲಿ ಕೂತು ಪ್ರಚೋದನಾಕಾರಿ ಪೋಸ್ಟ್ ಮಾಡಿದವರೂ ಅಂದರ್

ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆಯಿಂದ ಸಮಾಜಕ್ಕೆ ಅಥವಾ ಆಕೆಯ ಜೀವಕ್ಕೆ ಅಪಾಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಆರೋಪಿ ಪರ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ