ಮಂಗಳೂರು, ಅ.24: ದಸರಾ ಹಬ್ಬದ ಸಮಯದಲ್ಲಿ ಮಂಗಳಾದೇವಿ ದೇವಸ್ಥಾನದ (Mangaladevi Temple) ಮುಂದೆ ನಡೆಯುವ ಹುಲಿ ಕುಣಿತಕ್ಕೇ (Tiger Dance) ಅದರದೇ ಆದ ಖ್ಯಾತಿ ಇದೆ. ಆದರೆ ನಿನ್ನೆ ನಡೆದ ಹುಲಿವೇಷ ಕುಣಿತದ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕ ಗಾಯಗೊಂಡಿದ್ದಾನೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ದೇವರ ಎದುರು ಹುಲಿವೇಷ ಧರಿಸಿ ಪ್ರದರ್ಶನ ನೀಡುತ್ತಿದ್ದ ವೇಳೆ ಘಟನೆ ನಡೆದಿದೆ.
ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಯುವಕನ ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಯುವಕನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಸಣ್ಣ ಗಾಯಗಳೊಂದಿಗೆ ಯುವಕ ಪ್ರಯಾಪಾಯದಿಂದ ಪಾರಾಗಿದ್ದಾನೆ.
ಈ ಯುವಕ ನಿರಂತರ ಅಭ್ಯಾಸದ ಜೊತೆಗೆ ಹಲವು ವರ್ಷಗಳಿಂದ ಹುಲಿವೇಷ ಕಸರತ್ತು ಮಾಡುತ್ತಿದ್ದ. ಹರಕೆಯ ಕಾರಣಕ್ಕೆ ಮಂಗಳಾದೇವಿ ದೇವರ ಎದುರು ಕಸರತ್ತು ಮಾಡಿದ್ದ. ಈ ವೇಳೆ ಗಾಯಗೊಂಡಿದ್ದಾನೆ. ನವರಾತ್ರಿ ಹಿನ್ನೆಲೆ ಹುಲಿವೇಷ ಧರಿಸಿ ಕುಣಿತ ಮತ್ತು ಕಸರತ್ತು ಪ್ರದರ್ಶಿಸುವ ಸಂಪ್ರದಾಯ ಈ ಹಿಂದಿನಿಂದಲೂ ಇದೆ.
ಇದನ್ನೂ ಓದಿ: Viral Video: ಹುಲಿವೇಷದವರ ಜೊತೆ ಸೇರಿ ಡ್ಯಾನ್ಸ್ ಮಾಡಿದ ಉಡುಪಿಯ ಬಾಲಕಿ; ಈ ಮುದ್ದಾದ ವಿಡಿಯೋ ಮಿಸ್ ಮಾಡಬೇಡಿ
ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿದರೆ ದೇವಿಯನ್ನೇ ಹೊತ್ತು ಮೆರೆದಷ್ಟು ಸಂತಸ, ದೇವಿಯೂ ಪ್ರಸನ್ನಳಾಗಿ ಹರಸುತ್ತಾಳೆ ಎಂಬ ನಂಬಿಕೆ ಕರಾವಳಿ ಜನರಲ್ಲಿದೆ. ಆ ಕಾರಣಕ್ಕಾಗಿಯೇ ಪ್ರತಿ ವರ್ಷ ನೂರಾರು ಮಂದಿ ಹರಕೆ ಹೊತ್ತು, ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿಯುತ್ತಾರೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ನವರಾತ್ರಿ ಸಂದರ್ಭದ ವಿಶೇಷಗಳಲ್ಲಿ ಹುಲಿವೇಷವೂ ಒಂದಾಗಿದೆ. ಇನ್ನು ಈ ಹುಲಿವೇಷ ಹುಟ್ಟುಕೊಂಡಿದ್ದೇ ಮಂಗಳಾದೇವಿ ಸಾನಿಧ್ಯದಲ್ಲಿ.
ಒಮ್ಮೆ ಮಂಗಳಾದೇವಿಗೆ ರಥೋತ್ಸವ ನಡೆಯುವ ದಿನ, ತಾಯಿಯೊಬ್ಬಳು ತನ್ನ ಅಂಗವಿಕಲ ಮಗುವಿನೊಂದಿಗೆ ರಥದ ಮುಂದೆ ಬಂದು ಮೊಣಕಾಲೂರಿ, ತಾಯಿ, ನನ್ನ ಮಗುವಿಗೆ ಕಾಲು ಸರಿ ಇಲ್ಲ, ಚರ್ಮರೋಗವಿದೆ. ನಡೆದಾಡಲು ಆಗುತ್ತಿಲ್ಲ, ಮಾತೂ ಬರುವುದಿಲ್ಲ, ಮಗುವನ್ನು ಆಶೀರ್ವದಿಸಿ ಆರೋಗ್ಯವಂತನನ್ನಾಗಿಸಿದರೆ, ಮುಂದಿನ ವರ್ಷ ರಥೋತ್ಸವದ ಸಂದರ್ಭದಲ್ಲಿ ನಿನ್ನ ರಥದ ಮುಂದೆ ಆತನನ್ನು ಕುಣಿಸುತ್ತೇನೆ’ಎಂದು ಹರಕೆ ಕಟ್ಟಿದ್ದಳಂತೆ. ಬಳಿಕ ಮಗು ಗುಣಮುಖವಾಗಿದ್ದು ಹರಕೆಯಂತೆ ರಥೋತ್ಸವದ ದಿನ ಮಗುವಿಗೆ ಹುಲಿವೇಷ ಹಾಕಿಸಿ, ಮಂಗಳಾದೇವಿಯ ರಥದ ಮುಂದೆ ಕುಣಿಸಿದ್ದಳಂತೆ. ಹೀಗಾಗಿ ಹರಕೆ ಕಟ್ಟಿ ಹುಲಿವೇಷ ಹಾಕುವ ಪದ್ಧತಿ ಮುಂದುವರೆದಿದೆ.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:50 am, Tue, 24 October 23