ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ, ಕೇಸರಿನಾಡಾಗಿ ಕಂಗೊಳಿಸಿದ ಕಾಫಿನಾಡು !
ಡಿಸೆಂಬರ್ 27 ಅನುಸೂಯ ಜಯಂತಿ, 28 ಸಾಂಕೇತಿಕ ಶೋಭಾಯಾತ್ರೆ ಹಾಗೂ 29 ರಂದು ದತ್ತಪೀಠದಲ್ಲಿ ದತ್ತಜಯಂತಿ ಹಾಗೂ ದತ್ತಪಾದುಕೆ ದರ್ಶನ ನಡೆಯಲಿದೆ. ಹಾಗಾಗಿ, ದತ್ತಾತ್ರೇಯನ ಭಕ್ತರು ಇಡೀ ಚಿಕ್ಕಮಗಳೂರು ನಗರವನ್ನು ಕೇಸರಿಮಯವಾಗಿಸಿ, ನಗರದ ಪ್ರಮುಖ ಬೀದಿಗಳನ್ನು ಸುಂದರವಾಗಿಸಿದ್ದಾರೆ.
ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆಯಂದೇ ಖ್ಯಾತಿಯಾಗಿರೋ ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ದತ್ತಜಯಂತಿಯ ಸಂಭ್ರಮ ಮೇಳೈಸಿರುವುದರಿಂದ ಸಂಘ ಪರಿವಾರದ ಕಾರ್ಯಕರ್ತರು ಇಡೀ ನಗರವನ್ನು ಕೇಸರಿಮಯವಾಗಿಸಿದ್ದಾರೆ. ಈಗಾಗಲೇ ದತ್ತ ಜಯಂತಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಡಿಸೆಂಬರ್ 19ರಂದೇ ಮಾಲೆ ಧರಿಸಿರೋ ದತ್ತಭಕ್ತರು ವ್ರತದಲ್ಲಿದ್ದಾರೆ.
ಡಿಸೆಂಬರ್ 27 ಅನುಸೂಯ ಜಯಂತಿ, 28 ಸಾಂಕೇತಿಕ ಶೋಭಾಯಾತ್ರೆ ಹಾಗೂ 29 ರಂದು ದತ್ತಪೀಠದಲ್ಲಿ ದತ್ತಜಯಂತಿ ಹಾಗೂ ದತ್ತಪಾದುಕೆ ದರ್ಶನ ನಡೆಯಲಿದೆ. ಹಾಗಾಗಿ, ದತ್ತಾತ್ರೇಯನ ಭಕ್ತರು ಇಡೀ ಚಿಕ್ಕಮಗಳೂರು ನಗರವನ್ನು ಕೇಸರಿಮಯವಾಗಿಸಿ, ನಗರದ ಪ್ರಮುಖ ಬೀದಿಗಳನ್ನು ಸುಂದರವಾಗಿಸಿದ್ದಾರೆ.
ಮಹಿಳಾ ಸೆಲಬ್ರಿಟಿಸ್ ಡಿ.27ರಂದು ಅನುಸೂಯ ಪೂಜೆ ಅಂಗವಾಗಿ ಅಂದು ಬೆಳಿಗ್ಗೆ 9.30ಕ್ಕೆ ಮಹಿಳೆಯರಿಂದ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಜಿಲ್ಲೆಯ ಪ್ರಸಿದ್ಧ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.
ಡಿ.28ರಂದು ಮಧ್ಯಾಹ್ನ 2 ಘಂಟೆಗೆ ನಗರದ ರತ್ನಗಿರಿ ರಸ್ತೆಯಲ್ಲಿರುವ ಕಾಮಧೇನು ಗಣಪತಿ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆ ಆರಂಭಗೊಂಡು ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಆಜಾದ್ಪಾರ್ಕ್ ವೃತ್ತದಲ್ಲಿ ಮಹಾ ಆರತಿಯ ಕಾರ್ಯಕ್ರಮ ಮೂಲಕ ಕೊನೆಗೊಳ್ಳಲಿದೆ.
ಡಿ.29ರಂದು ದತ್ತಭಕ್ತರು ಹಾಗೂ ಮಾಲಾಧಾರಿಗಳು ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ಭಜನೆಯೊಂದಿಗೆ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಬಳಿಕ ದತ್ತಪೀಠದಲ್ಲಿ ಗಣಪತಿ ಹೋಮ, ದತ್ತಹೋಮ, ಧನ್ವಂತರಿ ಹೋಮ ಕಾರ್ಯಕ್ರಮ ನಡೆಯಲಿವೆ.