ಕಾಫಿನಾಡಲ್ಲಿ ಮಂಗಗಳ ಕಾಟ: ಹಣ್ಣಿನ ಕೊಯ್ಲು ಮಾಡುತ್ತಿರುವ ವಾನರಸೇನೆ !
ಕಾಫಿ ಬೆಳೆಗಾರರಿಗೆ ಕೋತಿಗಳ ಈ ಕಿತಾಪತಿ ಸಿಟ್ಟು ತರಿಸಿದ್ರೆ, ಮತ್ತೊಂದೆಡೆ ಪ್ರಾಣಿಪ್ರಿಯರು ಈ ಮಂಗಗಳು ಕಾಫಿ ತೋಟಗಳಲ್ಲಿ ಮೊಕ್ಕಾಂ ಹೂಡಿ, ಕಾಫಿ ಹಣ್ಣನ್ನ ತಿನ್ನುವುದನ್ನು ನೋಡಿ ಖುಷಿಪಡುತ್ತಿದ್ದಾರೆ. ಆದರೆ ಕೂಡ ನೂರಾರು ಕೋತಿಗಳ ಗ್ಯಾಂಗ್ ಮೂಟೆಗಟ್ಟಲೇ ಕಾಫಿ ಹಣ್ಣನ್ನ ತಿಂದು ತೇಗುತ್ತಿದ್ರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಇದೀಗ ಕಾಫಿ ಕೊಯ್ಲು. ಎಲ್ಲಿ ನೋಡಿದರೂ ಜನರು ಕಾಫಿ ಕೊಯ್ಲಿನಲ್ಲಿ ಫುಲ್ ಬಿಜಿಯಾಗಿದ್ದಾರೆ. ಹಾಗಂತ ಜನರು ಮಾತ್ರ ಕಾಫಿ ಕೊಯ್ಲಿನಲ್ಲಿ ನಿರತರಾಗಿಲ್ಲ, ಅದೊಂದು ಗುಂಪು ಕೂಡ ಕಾಫಿ ಹಣ್ಣಿನ ಕೊಯ್ಲಿನಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದೆ.
ಈ ಗ್ಯಾಂಗ್ ಬರೀ ಕಾಫಿ ಹಣ್ಣನ್ನ ಕೊಯ್ಲು ಮಾಡುತ್ತಿಲ್ಲ, ಬದಲಾಗಿ ಕಾಫಿ ಗಿಡದ ಮೇಲೆ ಕುಳಿತುಕೊಂಡು ಕಾಫಿ ಹಣ್ಣನ್ನು ಗುಳುಂ ಸ್ವಾಹಾ ಮಾಡುತ್ತಿದೆ. ಹೋಗ್ಲಿ ತಿಂದು ಹೋಗುತ್ತಿದ್ದಾವೆ ಎಂದು ಸುಮ್ಮನಾದರೆ , ಅವುಗಳು ತಿನ್ನೋದಕ್ಕಿಂತ ಜಾಸ್ತಿ ಹಾಳು ಮಾಡುತ್ತಿವೆ. ಈ ಗ್ಯಾಂಗ್ ಅಟ್ಟಹಾಸಕ್ಕೆ ಕಾಫಿನಾಡೇ ನಲುಗಿ ಹೋಗಿದೆ.. ಹಾಗಿದ್ರೆ ಇದ್ಯಾವ ಗುಂಪು ಅಂತೀರಾ ನೀವೇ ನೋಡಿ..
ಕಾಫಿನಾಡಲ್ಲಿ ಕೋತಿಗಳ ಅಟ್ಟಹಾಸಕ್ಕೆ ಜನ ಕಂಗಾಲು! ಚಿಕ್ಕಮಗಳೂರು ತಾಲೂಕು ಸೇರಿ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್ ಪುರ ತಾಲೂಕಿನಾದ್ಯಂತ ಇದೀಗ ಕಾಫಿ ಕೊಯ್ಲಿನ ಸಮಯ. ಹೀಗಾಗಿ ಜನರು ಕಾಫಿ ಕೊಯ್ಲಿನಲ್ಲಿ ಫುಲ್ ಬಿಜಿಯಾಗಿದ್ದಾರೆ. ಕೆಲಕಡೆಯಂತೂ ಕಾಫಿ ಕೊಯ್ಲು ಮಾಡುವುದಕ್ಕೆ ಜನರೇ ಸಿಗ್ತಿಲ್ಲ. ಡೋಂಟ್ ವರಿ, ಜನರು ಸಿಕ್ಕಿಲ್ಲ ಅಂದರೆ ಏನು? ನಾವು ಕಾಫಿ ಕೊಯ್ಲು ಮಾಡ್ತೀವಿ ಎಂದು ಕಾಫಿ ತೋಟಗಳಲ್ಲಿ ಕಾಲು ಇಟ್ಟಿದ್ದಾವೆ ಈ ಕೋತಿಗಳ ಗುಂಪು.
ಅದರಲ್ಲೂ ಮೂಡಿಗೆರೆ ತಾಲೂಕಿನಾದ್ಯಂತ ಬಹುತೇಕ ಕಾಫಿ ತೋಟಗಳಲ್ಲಿ ಈ ವಾನರಸೇನೆ ಮಾಡ್ತಿರೋ ಕಿತಾಪತಿ ಅಂತಿಂಥದ್ದಲ್ಲ. ಬರೀ ಕಾಫಿ ಕೊಯ್ಲು ಮಾಡ್ತಿಲ್ಲ, ಈ ಕೋತಿಗಳ ಗ್ಯಾಂಗ್ ಇಡೀ ಕಾಫಿ ತೋಟವನ್ನೇ ಗುಡಿಸಿ ಗುಂಡಾಂತರ ಮಾಡುತ್ತಿವೆ. ಒಂದೊಂದು ಮಂಗಗಳು ಒಂದೊಂದು ಕಾಫಿ ಗಿಡ ಏರಿ ಕುಳಿತು ಕಾಫಿ ಹಣ್ಣನ್ನು ಹಾಳು ಮಾಡುತ್ತಿರುವುದು ಕಾಫಿ ಬೆಳೆಗಾರರಲ್ಲಿ ಅತೀವ ಬೇಸರ ತರಿಸಿದೆ.
ಲಗ್ಗೆ ಇಡುತ್ತಿವೆ ಹಿಂಡು ಹಿಂಡು ಮಂಗಗಳು ಒಂದು ಕಡೆ ಕಾಫಿ ಕೊಯ್ಲಿಗೆ ಜನರು ಸಿಗುತ್ತಿಲ್ಲ, ಹೀಗಾಗಿ ಎಲ್ಲಾ ಕಡೆ ಒಮ್ಮೆಲೇ ಕಾಫಿ ಕೊಯ್ಲು ಮಾಡುವುದು ಕೂಡ ಕಷ್ಟಸಾಧ್ಯವಾಗಿದೆ. ಈ ಮಧ್ಯೆ ಅಂತಹ ಕಾಫಿ ತೋಟಗಳನ್ನ ಆ ಮಾಡಿ, ಕೋತಿಗಳ ಗ್ಯಾಂಗ್ ಕಾಫಿ ತೋಟಗಳಲ್ಲಿ ಅಟ್ಟಹಾಸ ಮಾಡುತ್ತಿದ್ದು, ಕಾಫಿ ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ವರ್ಷವಿಡೀ ಕಾಫಿ ಗಿಡಗಳನ್ನ ಮಕ್ಕಳಂತೆ ಪೋಷಿಸಿ, ಬೆಳೆಸಿ ಕಾಪಾಡಿಕೊಂಡ ಬಂದ ಬೆಳೆಯನ್ನು ಮಂಗಗಳು ತಿನ್ನುತ್ತಿರುವುದು ಕಾಫಿ ಬೆಳೆಗಾರರಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಫಿ ತೋಟಗಳಿಗೆ ನೂರಾರು ಮಂಗಗಳು ಲಗ್ಗೆಯಿಟ್ಟು, ಫಸಲನ್ನ ತಿನ್ನುತ್ತಿದ್ದು ಕೋತಿಗಳ ಕಿತಾಪತಿಗೆ ಕಡಿವಾಣ ಹಾಕುವುದಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ.

ಕಾಫಿ ತೋಟಗಳಲ್ಲಿ ಕೋತಿಗಳು
ನಾಡಿನತ್ತ ಮುಖ ಮಾಡುತ್ತಿರುವ ವಾನರಸೇನೆ! ಕಾಫಿ ಬೆಳೆಗಾರರಿಗೆ ಕೋತಿಗಳ ಈ ಕಿತಾಪತಿ ಸಿಟ್ಟು ತರಿಸಿದ್ರೆ, ಮತ್ತೊಂದೆಡೆ ಪ್ರಾಣಿಪ್ರಿಯರು ಈ ಮಂಗಗಳು ಕಾಫಿ ತೋಟಗಳಲ್ಲಿ ಮೊಕ್ಕಾಂ ಹೂಡಿ, ಕಾಫಿ ಹಣ್ಣನ್ನ ತಿನ್ನುವುದನ್ನು ನೋಡಿ ಖುಷಿಪಡುತ್ತಿದ್ದಾರೆ. ನೂರಾರು ಕೋತಿಗಳ ಗ್ಯಾಂಗ್ ಮೂಟೆಗಟ್ಟಲೇ ಕಾಫಿ ಹಣ್ಣನ್ನ ತಿಂದು ತೇಗುತ್ತಿದ್ರೂ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅರಣ್ಯಗಳಲ್ಲಿ ಅಕೇಶಿಯಾ, ನೀಲಗಿರಿಯಂತಹ ವಾಣಿಜ್ಯ ಮರಗಳನ್ನ ಬೆಳೆಯುತ್ತಿದ್ದು, ಮಂಗಗಳು ನಾಡಿನ ಕಡೆ ಮುಖ ಮಾಡಲು ಪ್ರಮುಖ ಕಾರಣ. ಇನ್ನಾದ್ರೂ ಹಲಸು, ಮಾವು, ನೇರಳೆ ಸೇರಿದಂತೆ ಇನ್ನಿತರ ಹಣ್ಣುಗಳ ಮರಗಳನ್ನ ಕಾಡಲ್ಲಿ ಬೆಳೆಯಬೇಕು ಎಂದು ಪ್ರಾಣಿ ಪ್ರಿಯರು ಅರಣ್ಯ ಇಲಾಖೆಗೆ ಸಲಹೆ ನೀಡಿದ್ದಾರೆ.

ಕಾಫಿ ನಾಡಿನಲ್ಲಿ ಮಂಗಗಳ ಗುಂಪು
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ! ಕಾಫಿತೋಟಗಳಿಗೆ ಒಂದೆರಡು ಮಂಗಗಳು ಬಂದರೆ ಅಯ್ಯೋ ಹೋಗ್ಲಿ ಬಿಡಿ ಎನ್ನಬಹುದು. ಈ ಮಂಗಗಳು ಎಷ್ಟು ತಿನ್ನಬಹುದು, ಸ್ವಲ್ಪ ತಿಂದು ಹೋಗುತ್ತದೆ ಎಂದು ಸುಮ್ಮನಾಗಬಹುದು. ಆದ್ರೆ ನೂರಾರು ಮಂಗಗಳು ಗ್ಯಾಂಗ್ ಕಟ್ಕೊಂಡ್ ಬಂದು ಇಡೀ ತೋಟವನ್ನೇ ಸಂಪೂರ್ಣವಾಗಿ ಖಾಲಿ ಮಾಡುತ್ತಿವೆ. ಇದು ಕಾಫಿನಾಡಿಗರ ಮುನಿಸಿಗೆ ಕಾರಣವಾಗಿದೆ. ವರ್ಷವಿಡೀ ಬೆವರು ಸುರಿಸಿ, ಇನ್ನೇನು ಕೈಗೆ ಫಲ ಸಿಗುತ್ತೆ ಎನ್ನುವಷ್ಟರಲ್ಲಿ ಕಾಫಿ ಫಸಲು ವಾನರಸೇನೆ ಪಾಲಾಗುತ್ತಿರುವುದು ಒಂದು ರೀತಿಯ ವಿಪರ್ಯಾಸ. ಒಟ್ಟಿನಲ್ಲಿ ಇನ್ನೂ ಒಂದು ತಿಂಗಳವರೆಗೂ ಕಾಫಿ ಕೊಯ್ಲು ಕಾಫಿನಾಡಿನಲ್ಲಿ ನಡೆಯುತ್ತಲೇ ಇರುತ್ತದೆ. ಅಷ್ಟರಲ್ಲಿ ಈ ಮಂಗಗಳ ಹೊಟ್ಟೆಗೆ ಮತ್ತೆಷ್ಟು ಕಾಫಿ ಹಣ್ಣಿನ ಫಸಲು ಸೇರುತ್ತೋ ಆ ದೇವರೇ ಬಲ್ಲ.

ಆಹಾರ ಹುಡುಕುತ್ತಾ ಬಂದ ಮಂಗಗಳಿಗೆ ಸಿಕ್ಕಿದ್ದು ಕಾಫಿ ಹಣ್ಣು

ಕಾಫಿ ತೋಟಗಳಲ್ಲಿ ಕೋತಿಗಳ ಕಾಟ
30 ಜನರಿಗೆ ಕಚ್ಚಿ ಗಾಯಗೊಳಿಸಿದ ಮಂಗ ಬಲೆಯನ್ನೂ ಕತ್ತರಿಸಿ ಪರಾ ರಿ! ಆತಂಕದಲಿ ಜನ



