ಅಪಘಾತಕ್ಕೊಳಗಾದ ಬೈಕ್ ಎತ್ತಲು ಹೋದವರು ಯಮನ ಪಾದ ಸೇರಿದರು; ದಾವಣಗೆರೆಯಲ್ಲಿ ಭೀಕರ ಘಟನೆ

ಘಟನೆಯ ಪರಿಣಾಮವಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಸಾವು ಸಂಭವಿಸಿದ್ದು, ಓರ್ವನಿಗೆ ಗಾಯವಾಗಿದೆ. ಗಾಯಾಳುವಿಗೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

  • TV9 Web Team
  • Published On - 23:30 PM, 3 Apr 2021
ಅಪಘಾತಕ್ಕೊಳಗಾದ ಬೈಕ್ ಎತ್ತಲು ಹೋದವರು ಯಮನ ಪಾದ ಸೇರಿದರು; ದಾವಣಗೆರೆಯಲ್ಲಿ ಭೀಕರ ಘಟನೆ
ಪ್ರಾತಿನಿಧಿಕ ಚಿತ್ರ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಕ್ರಾಸ್ ಬಳಿ ಕಿರಣ್(30), ಸಿದ್ದಿಕ್(26) ಎಂಬವರು ಲಾರಿ ಹರಿದು ಮೃತಪಟ್ಟಿದ್ದಾರೆ. ಅಪಘಾತವಾಗಿದ್ದ ಬೈಕ್​ನ್ನು ಟೆಂಪೊಗೆ ಹಾಕುವಾಗ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆಟ್ಟು ನಿಂತಿದ್ದ ಕಾರಿಗೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿದ್ದ ಬೈಕ್​ನ್ನು ಟೆಂಪೊಗೆ ಹಾಕಲು ಯುವಕರು ಸಹಾಯ ಮಾಡುತ್ತಿದ್ದರು. ಪೊಲೀಸರಿಗೆ ನೆರವಾಗುತ್ತಿದ್ದ ಯುವಕರ ಮೇಲೆ ಲಾರಿ ಹರಿದಿದೆ.

ಘಟನೆಯ ಪರಿಣಾಮವಾಗಿ ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಸಾವು ಸಂಭವಿಸಿದ್ದು, ಓರ್ವನಿಗೆ ಗಾಯವಾಗಿದೆ. ಗಾಯಾಳುವಿಗೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ಬಳಿಕ ಚಾಲಕ, ಲಾರಿ ಸಮೇತ ಪರಾರಿಯಾಗಿದ್ದಾನೆ. ಚನ್ನಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳಕ್ಕೆ ಹೊರಟ ಬಸ್ ಪಲ್ಟಿ
ಖಾಸಗಿ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬೂಡುಬಾಲ್​ ಪ್ರದೇಶದಲ್ಲಿ ನಡೆದಿದೆ. ಗಾಯಗೊಂಡ 15 ಜನರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನುಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದುವೆ ನಿಮಿತ್ತ ಮೈಸೂರಿನಿಂದ ಧರ್ಮಸ್ಥಳಕ್ಕೆ ಖಾಸಗಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ನಲ್ಲಿ ತೆರಳುತ್ತಿದ್ದ ಶಿಕ್ಷಕ ಸಾವು
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಶಿಕ್ಷಕ ಮೃತಪಟ್ಟ ಘಟನೆ ವಿಜಯಪುರ ತಾಲೂಕಿನ ಶಿವಣಗಿ ‌ಗ್ರಾಮದ ಬಳಿ ಸಂಭವಿಸಿದೆ. ಬೈಕ್​ನಲ್ಲಿ ತೆರಳುತ್ತಿದ್ದ ಶಿಕ್ಷಕ ಗುರುಲಿಂಗಯ್ಯಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ವಿಜಯಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

2 ಕಾರುಗಳ ನಡುವೆ ಡಿಕ್ಕಿ- ಓರ್ವ ಮಹಿಳೆ ಸಾವು
2 ಕಾರುಗಳ ನಡುವೆ ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಬ್ಬುಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹೆಬ್ಬುಳ ಗ್ರಾಮದಲ್ಲಿ ಅಪಘಾತವಾಗಿದೆ. ಕಾರು ಓವರ್​ಟೇಕ್​ ಮಾಡುವಾಗ ಸಂಭವಿಸಿರುವ ಅಪಘಾತದಿಂದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಿವಾಸಿ ಕಮಲವ್ವ ಮಹದೇವ ಹೊಸಮನಿ(26) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10 ಜನರಿಗೆ ಗಾಯವಾಗಿದ್ದು, ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆ
ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆಯಾಗಿದೆ. ಮೈಸೂರು ರಸ್ತೆಯ ಹೊಸ ಗುಡ್ಡದಹಳ್ಳಿಯ ಪ್ರಿಯಾಂಕಾ ಗಾರ್ಡನ್ ಬಾರ್ ಬಳಿ ಶವ ಪತ್ತೆಯಾಗಿದೆ. ಆರ್.ಆರ್. ನಗರದ ನವೀನ್ (30) ಅಪಘಾತದಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೈಸೂರು ರಸ್ತೆಯಲ್ಲಿ ಮೃತ ಯುವಕನ ಬೈಕ್ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿಗಳು ಪ್ರಿಯಾಂಕ ಗಾರ್ಡನ್ ಬಾರ್ ಬಳಿ ಶವ ತಂದು ಇರಿಸಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವಪತ್ತೆ
ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಮಂಡ್ಯ ಮೂಲದ ಶಿವು (20) ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ 1 ತಿಂಗಳಿನಿಂದ ಹೋಟೆಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಶಿವು, ಹೋಟೆಲ್​ನ ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಬ್ಯಾಟರಾಯನಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿಯ ಚಿನ್ನ ದರೋಡೆ; ಕಲಬುರಗಿಯಲ್ಲಿ ಹಾಡಹಗಲೇ ದುಷ್ಕೃತ್ಯ

ಇದನ್ನೂ ಓದಿ: Viral Video: ಹೆಬ್ಬಾವನ್ನೇ‌ ನುಂಗಿದ ಬೃಹತ್ ಕಾಳಿಂಗ ಸರ್ಪ! ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ಘಟನೆ