ರೇಣುಕಾಚಾರ್ಯ ಸಹೋದರನ ಪುತ್ರನ ಶವ ಪತ್ತೆ ಪ್ರಕರಣ: ಓರ್ವ ವಶಕ್ಕೆ

ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಪತ್ತೆಯಾಗಿದ್ದು, ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಅದರಂತೆ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ರೇಣುಕಾಚಾರ್ಯ ಸಹೋದರನ ಪುತ್ರನ ಶವ ಪತ್ತೆ ಪ್ರಕರಣ: ಓರ್ವ ವಶಕ್ಕೆ
ರೇಣುಕಾಚಾರ್ಯ ಸಹೋದರನ ಪುತ್ರನ ಶವ ಪತ್ತೆ ಪ್ರಕರಣ ಸಂಬಂಧ ಓರ್ವ ವಶಕ್ಕೆ
Updated By: Rakesh Nayak Manchi

Updated on: Nov 03, 2022 | 7:15 PM

ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ (M.P.Renukacharya) ಸಹೋದರನ ಪುತ್ರ ಚಂದ್ರಶೇಖರ್‌(24) ಶವ ಪತ್ತೆಯಾದ ನಂತರ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಅದರಂತೆ ಸಿಸಿಟಿವಿಗಳ ಪರಿಶೀಲನೆ ವೇಳೆ ಚಂದ್ರಶೇಖರ್ ಓಡಾಟದ ದೃಶ್ಯಾವಳಿಗಳು ಸೆರೆಯಾಗಿವೆ. ಇದನ್ನು ಆಧರಿಸಿ ಕಿರಣ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾಣೆ ಆರಂಭಿಸಿದ್ದಾರೆ. ಕಾಲುವೆಗೆ ಬೀಳುವ ದಿನದಂದು ಚಂದ್ರಶೇಖರ್, ವಿನಯ್​ ಗುರುಜಿ ಆಶ್ರಮಕ್ಕೆ ಹೋಗಿರುವುದು ತಿಳಿದುಬಂದಿದೆ.

ಅಕ್ಟೋಬರ್ 30 ಚಂದ್ರಶೇಖರ್ ಚಿಕ್ಕಮಗಳೂರಿನ ಗೌರಿ ಗದ್ದೆಯಲ್ಲಿರುವ ವಿನಯ್​ ಗುರೂಜಿ ಆಶ್ರಮಕ್ಕೆ ಹೋಗಿದ್ದಾನೆ. ಗೌರಿ ಗದ್ದೆಯಲ್ಲಿ ಪೂಜೆಗೆ ಹೋಗಿದ್ದ ಚಂದ್ರಶೇಖರ್, ಪೂಜೆ ಮುಗಿದ ನಂತರ ಭಕ್ತರಿಗೆ ಊಟ ಬಡಿಸಿದ್ದಾರೆ. ಈ ವೇಳೆ ಕಿರಣ್ ಎಂಬ ಯುವಕ ಚಂದ್ರಶೇಖರ್ ಜೊತೆಗಿರುವುದು ತಿಳಿದುಬಂದಿದೆ. ಕಿರಣ್​​ ಚಂದ್ರಶೇಖರ್ ಜೊತೆಗೆ ಇದ್ದಿದ್ದಲ್ಲದೆ ಒಟ್ಟಿಗೆ ವಾಪಸ್ ಆಗಿದ್ದಾನೆ. ಆದರೆ ಕಿರಣ್ ಶಿವಮೊಗ್ಗದಲ್ಲೇ​ ಇಳಿದಿದ್ದಾನೆ. ನ್ಯಾಮತಿಯ ಬಳಿ ಸಿಕ್ಕಿರುವ ಸಿಸಿಟಿವಿಯಲ್ಲಿ ಚಂದ್ರಶೇಖರ್​ ಮಾತ್ರ ಇದ್ದ. ಹೆಚ್ಚಿನ ತನಿಖೆಗಾಗಿ ಕಿರಣ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?

ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಇಂದು ಚಂದ್ರಶೇಖರ್ ಶವ ಪತ್ತೆ ಕಾರಿನ ಏರ್‌ಬ್ಯಾಗ್ ಓಪನ್ ಆಗಿರುವುದು ಕಂಡುಬಂದಿತ್ತು. ಅಲ್ಲದೆ  ಕಾರಿನ ಹಿಂಭಾಗದ ಸೀಟಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಚಂದ್ರಶೇಖರ್ ನಾಪತ್ತೆಯಾದಾಗಿನಿಂದ ಅನೇಕ ಶಂಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. “ಎಲ್ಲ ಠಾಣೆಗಳನ್ನು ಅಲರ್ಟ್ ಮಾಡಿ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ. ಈ ನಡುವೆ ಕೆಲವು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಎಲ್ಲವನ್ನೂ ಕೂಡ ಈಗಲೇ ಹೇಳಲು ಸಾಧ್ಯವಿಲ್ಲ. ನನಗೂ ದಿನಕ್ಕೆ ಎರಡು ಮೂರು ಸಲ ರೇಣುಕಾಚಾರ್ಯ ಫೋನ್ ಮಾಡುತ್ತಾ ಇದ್ದರು” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Thu, 3 November 22