ದಾವಣಗೆರೆ: ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರು ಬಿಟ್ಟರೇ ಅತಿ ದೊಡ್ಡ ಸಮುದಾಯ ವಾಲ್ಮೀಕಿ ಸಮಾಜ. ಈ ವಾಲ್ಮೀಕಿ ಸಮಾಜಕ್ಕೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠವಿದೆ. ಪ್ರತಿ ವರ್ಷ ಫೆಬ್ರವರಿ 8 ಮತ್ತು 9 ರಂದು ವಾಲ್ಮೀಕಿ ಜಾತ್ರೆ ನಡೆಯುತ್ತದೆ. ವಾಲ್ಮೀಕಿ ಗುರುಪೀಠದ ಪ್ರಸನಾನಂದಪುರಿ ನೇತ್ರತ್ವದಲ್ಲಿ ಈ ಜಾತ್ರೆ ನಡೆಯುತ್ತಿದೆ. ಇಂತಹ ಸ್ವಾಮೀಜಿಗಳ ವಿರುದ್ಧ ಅದೇ ವಾಲ್ಮೀಕಿ ಸಮಾಜದ ನ್ಯಾಯವಾದಿ ಗುಮ್ಮನೂರು ಮಲ್ಲಿಕಾರ್ಜುನ ಕೆಲ ಆರೋಪಗಳನ್ನ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಸ್ವಾಮೀಜಿಗಳ ವಾಲ್ಮೀಕಿ ಜಾತ್ರೆಗೆ ಬಳಸಿದ್ದಾರೆ. ಇದು ಬಡ ವಾಲ್ಮೀಕಿ ಸಮಾಜದ ಮಕ್ಕಳಿಗೆ ಸಿಗಬೇಕಾಗಿತ್ತು ಎಂದು ಆರೋಪಿಸಿದ್ದಾರೆ.
ಕಾನೂನು ಬಾಹಿರವಾಗಿ ವಾಲ್ಮೀಕಿ ಶ್ರೀಗಳು ಸರ್ಕಾರದಿಂದ ಅನುದಾನ ಪಡೆದಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಿದ್ದ ಹಣವನ್ನು ಜಾತ್ರೆಗೆ ಪಡೆದುಕೊಂಡಿದ್ದಾರೆ. ದಾವಣಗೆರೆಯಲ್ಲಿ ಇಂದು (ನ.25) ಸುದ್ದಿಗೋಷ್ಠಿ ನಡೆಸಿ ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಆರೋಪ ಮಾಡಿದ್ದಾರೆ. 15 ಕೋಟಿ ರೂಪಾಯಿ ಹಣವನ್ನು ವಾಲ್ಮೀಕಿ ಜಾತ್ರೆಗೆ ಬಳಕೆ ಮಾಡಿಕೊಂಡಿದ್ದಾರೆ. ಇದೇ ಹಣದಿಂದ ಸಮಾಜದ ಬಡವರ ಅಭಿವೃದ್ಧಿಗೆ ಬಳಕೆ ಮಾಡಬೇಕಿತ್ತು. ಅದನ್ನು ಬಿಟ್ಟು ಜಾತ್ರೆ ಮಾಡಿ ಹಣ ಪೋಲು ಮಾಡಿದ್ದಾರೆ. ಬಂಡೋಳಿ ಗ್ರಾಮದಲ್ಲಿ ಸ್ವಾಮೀಜಿ ಹೆಸರಿಗೆ 17 ಎಕರೆ ಮಾಡಿಕೊಂಡಿದ್ದಾರೆ ಅಂತ ಗಂಭೀರವಾಗಿ ಆರೋಪಿಸಿದ್ದಾರೆ.
ಹೊಸಪೇಟೆಯಲ್ಲಿ 3 ಎಕರೆ ಜಮೀನನ್ನು ಸ್ವಾಮೀಜಿ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಮಠದ ಸ್ವಾಮೀಜಿ ಮಠದ ಹೆಸರಿಗೆ ಆಸ್ತಿ ಮಾಡುವ ಬದಲು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ರಾಜನಹಳ್ಳಿಯಲ್ಲಿ ಸರ್ವೇ ನಂಬರ್107/A3 ನಲ್ಲಿರುವ ಜಮೀನನ್ನು ಪರಿಶಿಷ್ಟ ಜಾತಿಗೆ ಸಮಾಜ ಕಲ್ಯಾಣ ಇಲಾಖೆಯ ಆಸ್ತಿ ಇದೆ.ಅದನ್ನು ವಾಲ್ಮೀಕಿ ಮಠದ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದನ್ನು ಜಮೀನು ಇಲ್ಲದೆ ಇರುವ ಪರಿಶಿಷ್ಟ ಪಂಗಡದ ಜನರಿಗೆ ನೀಡಬೇಕು. ಸ್ವಾಮೀಜಿಗೆ ಬೇಕಾಗುವರನ್ನು ಟ್ರಸ್ಟಿಗಳನ್ನಾಗಿ ಮಾಡಿಕೊಂಡಿದ್ದಾರೆ. ಕೂಡಲೇ ಟ್ರಸ್ಟ್ ಸೂಪರ್ ಸೀಡ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
ಅಲ್ಲದೇ ವಕೀಲ ಗುಮ್ಮನೂರು ಮಲ್ಲಿಕಾರ್ಜುನ್, ಸ್ವಾಮೀಜಿಗಳ ವಿರುದ್ಧ ಕೋರ್ಟ್ನಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಟ್ರಸ್ಟ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಧ್ಯಕ್ಷರಾಗಿದ್ದಾರೆ. ಅವರ ಗಮನಕ್ಕೂ ಈ ವಿಚಾರ ತರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ
‘ಜಂಗ್ಲಿ ಕುಲಪತಿಯ ಜಂಗೀಕಥೆ’- ಧಾರವಾಡದಲ್ಲಿ ಬಿಡುಗಡೆಯಾದ ವಿಭಿನ್ನ ಆತ್ಮಕಥೆ