ಉತ್ತರಾಧಿಕಾರಿ ನೇಮಕಕ್ಕೆ ನಿರ್ಲಕ್ಷ್ಯ ಆರೋಪ: ಸಿರಿಗೆರೆ ಸ್ವಾಮೀಜಿ ವಿರುದ್ಧ ಮುಂದುವರಿದ ವಾಗ್ದಾಳಿ
ಸ್ವಾಮೀಜಿಗೆ 76 ವರ್ಷವಾಗಿದೆ. ಉತ್ತರಾಧಿಕಾರಿ ನೇಮಕಕ್ಕಾಗಿ ಹತ್ತಾರು ಪತ್ರ ಬರೆದರೂ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ದೂರಿದರು.
ದಾವಣಗೆರೆ: ಸಿರಿಗೆರೆ ಮಠದ ಭಕ್ತರು ಎರಡು ಬಣಗಳಾಗಿ ಒಡೆದಿದ್ದು ಪೀಠದಲ್ಲಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಒಂದು ಬಣವು ಬಹಿರಂಗ ಆರೋಪ ಮಾಡುತ್ತಿದೆ. ಸ್ವಾಮೀಜಿಗೆ 76 ವರ್ಷವಾಗಿದೆ. ಉತ್ತರಾಧಿಕಾರಿ ನೇಮಕಕ್ಕಾಗಿ ಹತ್ತಾರು ಪತ್ರ ಬರೆದರೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಅವರ ಸಂಬಂಧಿಕರನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಲು ಸಂಚು ನಡೆಸುತ್ತಿದ್ದಾರೆ ಎಂದು ಒಂದು ಬಣವು ದೂರಿದೆ.
ಸ್ವಾಮೀಜಿ ಬಗ್ಗೆ ಆಕ್ಷೇಪವಿದ್ದರೆ ಮಠಕ್ಕೆ ಬಂದು ಪ್ರಶ್ನಿಸಬೇಕಿತ್ತು. ಬಹಿರಂಗವಾಗಿ ಪತ್ರಿಕಾಗೋಷ್ಠಿ ಮಾಡಿದ್ದು ತಪ್ಪು ಎಂದು ಕೆಲ ಭಕ್ತರು ಆಕ್ಷೇಪಿಸಿದರು. ಸ್ವಾಮೀಜಿ ಪೀಠತ್ಯಾಗಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಮುದೇಗೌಡ, ವೀರಭದ್ರಪ್ಪ, ಆನಗೋಡು ನಂಜುಂಡಪ್ಪ, ರುದ್ರಪ್ಪಗೌಡ, ಶಿವನಕೆರೆ ಬಸವಲಿಂಗಪ್ಪ, ಎಸ್.ಟಿ.ಶಾಂತಗಂಗಾಧರ್, ಎಂ.ಸಿದ್ದಯ್ಯ ಸ್ವಾಮೀಜಿ ವಿರುದ್ಧ ಗುರುತರ ಆರೋಪ ಮಾಡಿದರು. ಭಕ್ತರ ಸಂಪರ್ಕಕ್ಕೆ ಸ್ವಾಮೀಜಿ ಸುಲಭವಾಗಿ ಸಿಗುತ್ತಿಲ್ಲ. ಭೇಟಿಗಾಗಿ ದಿನಗಟ್ಟಲೆ ಕಾಯಬೇಕಿದೆ. ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ 1977ರ ಬೈಲಾ ನಿರ್ಲಕ್ಷಿಸಿ ಟ್ರಸ್ಟ್ ರಚಿಸಿದ್ದಾರೆ ಎಂದು ದೂರಿದರು.
ವಿದ್ಯಾಸಂಸ್ಥೆಗಳನ್ನು ನಿರ್ಲಕ್ಷಿಸುತ್ತಿರುವ ಸ್ವಾಮೀಜಿ, ಅದ್ಧೂರಿ ಮದುವೆ ಮಂಟಪ ಹಾಗೂ ದೇವಾಲಯ ಕಟ್ಟಲು ಭಕ್ತರ ಹಣ ವಿನಿಯೋಗಿಸುತ್ತಿದ್ದಾರೆ. ಟ್ರಸ್ಟ್ನ ಕೇಂದ್ರ ಸಮಿತಿಯಲ್ಲಿ ಸಮಾಜಕ್ಕೆ ಏನೂ ಕೊಡುಗೆಯನ್ನೇ ನೀಡದವರಿಗೆ ಅವಕಾಶ ಕೊಟ್ಟಿದ್ದಾರೆ. ಸ್ವಾಮೀಜಿಗೆ ಗನ್ ಮ್ಯಾನ್ ಏಕೆ ಬೇಕು? ತಮ್ಮನ್ನು ಪ್ರಶ್ನಿಸಿದವರನ್ನು ಹತ್ತಿಕ್ಕಲು ಗೂಂಡಾಗಳನ್ನು ಕಳುಹಿಸುವ ಪರಿಪಾಠವನ್ನು ಸ್ವಾಮೀಜಿ ಬೆಳೆಸಿಕೊಂಡಿದ್ದಾರೆ. ಸ್ವಾಮೀಜಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದಾರೆ ಎಂದು ಹೇಳಿದರು.
ಜಾಗೃತಿ ಸಮಿತಿಯ ಸದಸ್ಯರು ಸುದ್ದಿಗೋಷ್ಠಿ ಮುಗಿಸಿ ಹೊರಗೆ ಬಂದಾಗ ಅವರನ್ನು ಎದುರುಗೊಂಡ ಭಕ್ತರು ಪತ್ರಿಕಾಗೋಷ್ಠಿ ನಡೆಸಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನೀವು ಮಾತನಾಡುವುದಿದ್ದರೆ ಮಠಕ್ಕೆ ತೆರಳಿ ಸ್ವಾಮೀಜಿ ಅವರನ್ನು ಭೇಟಿಯಾಗಬೇಕಿತ್ತು. ಹೀಗೆ ಸುದ್ದಿಗೋಷ್ಠಿ ನಡೆಸಿದ್ದು ತಪ್ಪು ಎಂದು ಹೇಳಿದರು. ಈ ವೇಳೆ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವಕ್ಕೆ ಚಾಲನೆ: ಯಡಿಯೂರಪ್ಪ, ದೊಡ್ಡರಂಗೇಗೌಡ ಭಾಗಿ ಇದನ್ನೂ ಓದಿ: ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ