15 ಸಾವಿರ ಅಪಾಯಕಾರಿ ವಿದ್ಯುತ್ ಸರಬರಾಜು ಸ್ಥಳಗಳನ್ನು ಗುರುತಿಸಿದ ಬೆಸ್ಕಾಂ

ಬೆಂಗಳೂರಿನಲ್ಲಿ ತುಂಡಾದ ವಿದ್ಯುತ್ ತಂತಿ ತುಳಿದು ತಾಯಿ ಮಗು ಸಾವನ್ನಪ್ಪಿದ ದುರಂತದ ನಂತರ ಎಚ್ಚೆತ್ತ ಬೆಸ್ಕಾಂ, ತನ್ನ ವ್ಯಾಪ್ತಿಯಲ್ಲಿರುವ 15 ಸಾವಿರಕ್ಕೂ ಅಧಿಕ ಅಪಾಯಕಾರಿ ವಿದ್ಯುತ್ ಸರಬರಾಜು ಸ್ಥಳಗಳನ್ನು ಗುರುತಿಸಿ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ದಾವಣಗೆರೆಯಲ್ಲಿ ಇಂದು ನಡೆದ ಬೆಸ್ಕಾಂ ಕುಂದುಕೊರತೆ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ಧೆಶಕ ಮಹಾಂತೇಶ ಬೀಳಗಿ ಈ ಬಗ್ಗೆ ಮಾಹಿತಿ ನೀಡಿದರು.

15 ಸಾವಿರ ಅಪಾಯಕಾರಿ ವಿದ್ಯುತ್ ಸರಬರಾಜು ಸ್ಥಳಗಳನ್ನು ಗುರುತಿಸಿದ ಬೆಸ್ಕಾಂ
ದಾವಣಗೆರೆಯಲ್ಲಿ ಇಂದು ನಡೆದ ಬೆಸ್ಕಾಂ ಕುಂದುಕೊರತೆ ಸಭೆ
Updated By: Rakesh Nayak Manchi

Updated on: Jan 07, 2024 | 9:05 PM

ದಾವಣಗೆರೆ, ಜ.7: ಬೆಂಗಳೂರಿನಲ್ಲಿ ತುಂಡಾದ ವಿದ್ಯುತ್ ತಂತಿ ತುಳಿದು ತಾಯಿ ಮಗು ಸಾವನ್ನಪ್ಪಿದ ದುರಂತದ ನಂತರ ಎಚ್ಚೆತ್ತ ಬೆಸ್ಕಾಂ, ತನ್ನ ವ್ಯಾಪ್ತಿಯಲ್ಲಿರುವ 15 ಸಾವಿರಕ್ಕೂ ಅಧಿಕ ಅಪಾಯಕಾರಿ ವಿದ್ಯುತ್ ಸರಬರಾಜು ಸ್ಥಳಗಳನ್ನು ಗುರುತಿಸಿ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ದಾವಣಗೆರೆಯಲ್ಲಿ (Davanagere) ಇಂದು ನಡೆದ ಬೆಸ್ಕಾಂ (BESCOM) ಕುಂದುಕೊರತೆ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ಧೆಶಕ ಮಹಾಂತೇಶ ಬೀಳಗಿ ಈ ಬಗ್ಗೆ ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ಇಂದು ನಡೆದ ಬೆಸ್ಕಾಂ ಕುಂದುಕೊರತೆ ಸಭೆಯಲ್ಲಿ ವಿದ್ಯುತ್ ಅವಘಡಗಳ ಕುರಿತು ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ತಾಯಿ ಮಗುವಿನ ದುರಂತ ಸಾವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಅಪಾಯಕಾರಿಯಾಗಿರುವ 15 ಸಾವಿರ ಸ್ಥಳಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಇದನ್ನೂ ಓದಿ: Tv9 Impact: ಟಿವಿ9ನಲ್ಲಿ ಸುದ್ದಿ ಬಿತ್ತರಿಸಿದ 24 ಗಂಟೆಗಳಲ್ಲೇ ಡೆಡ್ಲಿ ಸ್ಪಾಟ್, ಟ್ರಾನ್ಸ್ಫಾರ್ಮರ್​ ಸರಿಪಡಿಸಿದ ಬೆಸ್ಕಾಂ

ರೈತರ ಕೃಷಿ ಪಂಪ್ ಸೆಟ್​ಗಳಿಗೆ ನೀಡುತ್ತಿರುವ 7 ಗಂಟೆ ನಿರಂತರ ವಿದ್ಯುತ್ ಪೂರೈಕೆಯ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಸಿಗೆ ದಿನಗಳಲ್ಲಿ ಕೂಡ ಇದೇ ಅವಧಿಯ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು. ಸರ್ಕಾರದ ಸೂಚನೆಯಂತೆ ಬೆಸ್ಕಾಂ ರೈತರ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಬದ್ದವಾಗಿದ್ದು, ಮಳೆಯ ಕೊರತೆಯ ನಡುವೆ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದರು.

ಈ ವರ್ಷ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು ರೈತರು ಪಂಪ್‍ಸೆಟ್‍ಗಳ ಮೇಲೆಯೇ ಜೂನ್ ತಿಂಗಳಿನಿಂದಲೂ ಅವಲಂಭಿತವಾಗಿದ್ದರಿಂದ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸಬೇಕಾಗಿದೆ. ಕೊರತೆಯನ್ನು ನೀಗಿಸಲು ಈಗಾಗಲೇ ಜಿಂದಾಲ್, ಸಕ್ಕರೆ ಕಾರ್ಖಾನೆಗಳು, ಯು.ಪಿ.ಸಿ.ಎಲ್, ಸೋಲಾರ್, ವಿಂಡ್‍ಮಿಲ್ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಈಗ ಯಾವುದೇ ವಿದ್ಯುತ್ ಕೊರತೆಯಾಗದಂತೆ ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಆರಂಭವಾಗುತ್ತಿದ್ದು ಈ ದಿನಗಳಲ್ಲಿ ಇನ್ನಷ್ಟು ವಿದ್ಯುತ್ ಅಭಾವವಾಗಬಹುದೆಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು ಬೇಸಿಗೆಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದರು.

ಕಾಲಮಿತಿಯಲ್ಲಿ ಟಿಸಿ ಬದಲಾವಣೆಗೆ ಸೂಚನೆ

ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಳೀಯವಾಗಿ ಟಿಸಿ ರಿಪೇರಿ ಕೇಂದ್ರಗಳಿದ್ದು ರೈತರಿಗೆ ಕಾಲಮಿತಿಯಲ್ಲಿ ಸುಟ್ಟ ಟಿಸಿಗಳನ್ನು ಬದಲಾಯಿಸಬೇಕು ಎಂದು ಮಹಾಂತೇಶ ಬೀಳಗಿ ಹೇಳಿದರು. ಈ ವೇಳೆ ನವಿಲೆಹಾಳ್‍ನಲ್ಲಿ ಕಳೆದ 10 ದಿನಗಳಿಂದ ಸುಟ್ಟ ಟಿಸಿ ಬದಲಾವಣೆ ಮಾಡಿಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಟಿಸಿ ಸುಟ್ಟಾಗ ತಕ್ಷಣ ಬದಲಾವಣೆ ಮಾಡಬೇಕು. ಟಿ.ಸಿ.ಬ್ಯಾಂಕ್‍ನಲ್ಲಿ 150 ಟಿ.ಸಿ.ಗಳು ದಾಸ್ತಾನಿದ್ದರೂ ಬದಲಾಯಿಸದಿರಲು ಕಾರಣವೇನು ಎಂದು ಬೆಸ್ಕಾಂ ಎಇಇ ಗೆ ಪ್ರಶ್ನಿಸಿದ ಮಹಾಂತೇಶ ಅವರು, ಮುಂದಿನ ದಿನಗಳಲ್ಲಿ ಈ ರೀತಿಯ ದೂರುಗಳು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಸೋಲಾರ್ ಪಂಪ್‍ಸೆಟ್‍ಗೆ ಆದ್ಯತೆ

ರೈತರ ಪಂಪ್‍ಸೆಟ್‍ಗಳ ಅಕ್ರಮ ಸಕ್ರಮ ಯೋಜನೆಯನ್ನು 2023 ರ ಸೆಪ್ಟೆಂಬರ್ 22 ಕ್ಕೆ ನೊಂದಣಿಯನ್ನು ಸ್ಥಗಿತಗೊಳಿಸಲಾಗಿದೆ. 500 ಮೀಟರ್ ವ್ಯಾಪ್ತಿಯ ಒಳಗೆ ಇರುವ ಪಂಪ್ ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಸಕ್ರಮ ಮಾಡಲಾಗುತ್ತದೆ. 500 ಮೀಟರ್‍ಗಿಂತ ಹೆಚ್ಚಿದ್ದಲ್ಲಿ ಸೋಲಾರ್ ಪಂಪ್‍ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಪಿಎಂ ಕುಸುಮ.ಬಿ ಯೋಜನೆಯಡಿ ಅವಕಾಶ ಇದ್ದು ಫಲಾನುಭವಿ ವಂತಿಗೆ ಶೇ 20 ರಷ್ಟು ಪಾವತಿಸಬೇಕು ಎಂದರು.

ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಸಾವಿರ ಅಡಿ ಆಳ, ಎರಡು ಕಿ.ಮೀ ದೂರದವರೆಗೆ 7.5 ಹೆಚ್‍ಪಿ ಸೋಲಾರ್ ಪಂಪ್‍ಸೆಟ್ ನಿರಂತರವಾಗಿ ನೀರನ್ನು ತಳ್ಳುತ್ತದೆ. ಈ ಸ್ಥಳಗಳನ್ನು ಬೆಸ್ಕಾಂ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

2023 ರ ಸೆಪ್ಟೆಂಬರ್ 22 ರೊಳಗಾಗಿ ಅಕ್ರಮ ಸಕ್ರಮದಲ್ಲಿ ನೊಂದಾಯಿಸಿದ ರೈತರ ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಲು ಈಗಾಗಲೇ ಟೆಂಡರ್ ಕರೆದು ಅನುಮೋದನೆ ನೀಡಿ ಜಿಲ್ಲೆಯಲ್ಲಿ ನೊಂದಾಯಿಸಿದ ಹರಪನಹಳ್ಳಿ ಮತ್ತು ತೆಲಗಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 15615 ಪಂಪ್‍ಸೆಟ್‍ಗಳ ಸಕ್ರಮಕ್ಕಾಗಿ 310 ಕೋಟಿ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.

ಹೊಸ ಸ್ಟೇಷನ್, ಹಳೆ ಸ್ಟೇಷನ್ ಮೇಲ್ದರ್ಜೆಗೇರಿಸಲು ಕ್ರಮ

ರೈತರಿಗೆ ಮತ್ತು ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಹೊಸ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಈಗಿರುವ ಕೇಂದ್ರಗಳನ್ನು 12.5 ಮೆಗಾವ್ಯಾಟ್‍ನಿಂದ 20 ಮೆಗಾವ್ಯಾಟ್‍ಗೆ ಹೆಚ್ಚಿಸಲು ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್ ಮನವಿ ಸಲ್ಲಿಸಿದರು.

ಆನಗೋಡು, ಮೆಳ್ಳೆಕಟ್ಟೆ, ಅತ್ತಿಗಟ್ಟೆ ಇವುಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಕಬ್ಬೂರು, ತೋಳಹುಣಸೆ ಹೊಸಸ್ಟೇಷನ್ ಬೇಗ ಆರಂಭಿಸಬೇಕು, ಹೊನ್ನಾಳಿ ತಾ; ನ್ಯಾಮತಿ, ಕ್ಯಾಸಿನಕೆರೆ ಸ್ಟೇಷನ್, ಚೀಲೂರು ಹೊಸ ಮಾರ್ಗ ನಿರ್ಮಾಣ, ಹರಪನಹಳ್ಳಿಯಲ್ಲಿ ಈಗಿರುವ ಸ್ಟೇಷನ್‍ಗಳನ್ನು ಮೇಲ್ದರ್ಜೆಗೇರಿಸಿ ಹೊಸದಾಗಿ ಕನಿಷ್ಠ 4 ಕಡೆ ಸ್ಟೇಷನ್ ಆರಂಭಿಸಲು ಮನವಿ ಮಾಡಿ ವಿದ್ಯುತ್ ಪೂರೈಕೆ ಬೆಸ್ಕಾಂಗೆ ಹರಪನಹಳ್ಳಿ ಬರಲಿದ್ದು ಕೆಪಿಟಿಸಿಎಲ್ ಗುಲ್ಬರ್ಗಕ್ಕೆ ಬರುತ್ತದೆ. ಇದನ್ನ ಸರಿಪಡಿಸಲು ಲತಾ ಮಲ್ಲಿಕಾರ್ಜುನ್ ಮನವಿ ಮಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಹೊಸದಾಗಿ ಅಲ್ಲಲ್ಲಿ ಗುಚ್ಚ ಮನೆ ಮತ್ತು ರಸ್ತೆ ಬದಿಯಲ್ಲಿ ತಮ್ಮ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಇಂತಹ ಜನವಸತಿ ಪ್ರದೇಶಕ್ಕೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮೀಕ್ಷೆ ಮಾಡಿ ಅಂದಾಜು ಪಟ್ಟಿ ನೀಡಲು ಬೆಸ್ಕಾಂ ಇಂಜಿನಿಯರ್​ಗಳಿಗೆ ಬೆಸ್ಕಾಂ ಎಂಡಿ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ