ಜ 14ರಂದು ಮುಖ್ಯಮಂತ್ರಿಯಿಂದ ತುಂಗಾ ಆರತಿಗೆ ಶಂಕುಸ್ಥಾಪನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2021 | 7:21 PM

ಉತ್ತರ ಭಾರತದಲ್ಲಿ ಈಗಾಗಲೇ ನಿತ್ಯ ಗಂಗಾ ಆರತಿ ಪ್ರಸಿದ್ಧವಾಗಿದೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ತುಂಗಭದ್ರೆಗೆ ನಿತ್ಯ ಆರತಿ ಆರಂಭಿಸಲಾಗುವುದು ಎಂದರು.

ಜ 14ರಂದು ಮುಖ್ಯಮಂತ್ರಿಯಿಂದ ತುಂಗಾ ಆರತಿಗೆ ಶಂಕುಸ್ಥಾಪನೆ
ಕಾಶಿಯ ಗಂಗಾ ಆರತಿ
Follow us on

ದಾವಣಗೆರೆ: ಗಂಗಾ ಆರತಿ ಮಾದರಿಯಲ್ಲಿ ತುಂಗೆಗೆ ನಿತ್ಯ ಆರತಿ ಮಾಡುವ ಆಲೋಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನವರಿ 14ರಂದು ಚಾಲನೆ ನೀಡಲಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರದ ತುಂಗಭದ್ರಾ ನದಿ ದಡದಲ್ಲಿ ಯೋಜನೆಗೆ ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ದಾವಣಗೆರೆ ಹನಗವಾಡಿಯ ಪಂಚಮಸಾಲಿ ಗುರುಪೀಠದಲ್ಲಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಈಗಾಗಲೇ ನಿತ್ಯ ಗಂಗಾ ಆರತಿ ಪ್ರಸಿದ್ಧವಾಗಿದೆ. ಇದೇ ರೀತಿ ದಕ್ಷಿಣ ಭಾರತದಲ್ಲಿ ತುಂಗಭದ್ರೆಗೆ ನಿತ್ಯ ಆರತಿ ಆರಂಭಿಸಲಾಗುವುದು ಎಂದರು. ತುಂಗಾ ಆರತಿಗಾಗಿ ರಾಜ್ಯ ಸರ್ಕಾರವು ₹ 30 ಕೋಟಿ ಅನುದಾನ ನೀಡಲು ತೀರ್ಮಾನಿಸಿದೆ. 2022ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಹರಿಹರ ನಗರದ ಪಕ್ಕದಲ್ಲಿಯೇ ತುಂಬಾ ನದಿ ಹರಿಯುತ್ತಿದೆ. ಜನವರಿ 14, 2022ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಶಿಲಾನ್ಯಾಸ ನೆರವೇರಿಸಿದರೆ, ಒಂದು ವರ್ಷದ ನಂತರ, ಅಂದರೆ ಜನವರಿ 14, 2023ರಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.

ತುಂಗಾತಟದಲ್ಲಿ 108 ಮಂಟಪಗಳು
ಉತ್ತರ ಪ್ರದೇಶದ ಕಾಶಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿಯೇ ಕರ್ನಾಟದಲ್ಲಿ ತುಂಗಾ ಆರತಿ ಆರಂಭಿಸುವ ಈ ಯೋಜನೆಯು ವಚನಾನಂದ ಶ್ರೀಗಳ ಕನಸಿನ ಕೂಸು. ಹರಿಹರದ ತುಂಗಭದ್ರಾ ನದಿ ತಟದಲ್ಲಿನ ರಾಘವೇಂದ್ರ ಶ್ರೀಗಳ ದೇವಸ್ಥಾನದಿಂದ ಹರಿಹರೇಶ್ವರ ದೇವಸ್ಥಾನದ ಮಧ್ಯದಲ್ಲಿ ತುಂಗಾ ಮಂಟಪಗಳನ್ನು ನಿರ್ಮಿಸುವ ಯೋಜನೆಯಿದು. ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಂದೂಗೂಡಿಸುವ ಮಹತ್ವದ ಯೋಜನೆ ಇದು ಎಂದು ವಚನಾನಂದ ಶ್ರೀಗಳು ಈ ಹಿಂದೆ ಹೇಳಿದ್ದರು.

ಸರ್ಕಾರಕ್ಕೆ ಲೈಫ್​ಲೈನ್: ವಚನಾನಂದ ಶ್ರೀ
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ತುಸು ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹರಿಹರದಲ್ಲಿ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದು ತುಸು ತಡವಾಗಬಹುದು. ಆದರೆ ಸರಿಯಾದ ರೀತಿಯಲ್ಲಿ ಈ ಕೆಲಸ ಆಗಬೇಕಿದೆ. ಸರ್ಕಾರ ಒಂದು ವೇಳೆ ತರಾತುರಿಯಲ್ಲಿ ಮೀಸಲಾತಿ ಘೋಷಿಸಿದರೆ ಸಮಸ್ಯೆಯಾಗಬಹುದು. ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಮೀಸಲಾತಿ ನಿರ್ಧಾರ ಊರ್ಜಿತವಾಗುವಂತಿರಬೇಕು. ಹೀಗಾಗಿ, ವಿಳಂಬವಾದರೂ ಪರವಾಗಿಲ್ಲ. ಸಮರ್ಪಕ ರೀತಿಯಲ್ಲಿ ಮೀಸಲಾತಿ ದೊರೆಯಬೇಕು ಎಂದು ಅವರು ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಒದಗಿಸಲು ಸರ್ಕಾರಕ್ಕೆ ನಾವು ಗಡುವು ನೀಡುವುದಿಲ್ಲ. ಬದಲಿಗೆ ಲೈಫ್​​ಲೈನ್​ ನೀಡುತ್ತೇವೆ. ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಸಮೀಕ್ಷೆ ಆರಂಭವಾಗಿದೆ. ಸ್ವಲ್ಪ ವಿಳಂಬವಾದರೂ ಪರವಾಗಿಲ್ಲ. ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ನುಡಿದರು.

ಇದನ್ನೂ ಓದಿ: ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ: ಸರ್ಕಾರದ ಮೇಲೆ ಒತ್ತಡ ಹೇರಲು ಮೂರು ನಿರ್ಣಯ
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: ಸಿಎಂ ಭರವಸೆ ಒಪ್ಪಿದ ಬಸವ ಜಯಮೃತ್ಯುಂಜಯಶ್ರೀ