ದಾವಣಗೆರೆ ಜಿಲ್ಲೆಗೆ ಒಲಿದ ಸಂವಿಧಾನ ಜಾಗೃತಿ ಜಾಥಾ ಪ್ರಶಸ್ತಿ; ಸಿಎಂ ಸಿದ್ದರಾಮಯ್ಯರಿಂದ 1 ಲಕ್ಷ ರೂ. ಬಹುಮಾನ ವಿತರಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 24, 2024 | 2:34 PM

ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಜನವರಿ 26 ರಿಂದ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅತ್ಯಂತ ಯಶಸ್ವಿಯಾಗಿ ಜಾಥಾ ನಡೆಸಿದ ದಾವಣಗೆರೆ ಜಿಲ್ಲೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಶಸ್ವಿ ಅನುಷ್ಠಾನ ಪ್ರಶಸ್ತಿ ನೀಡಿದರು.

ದಾವಣಗೆರೆ ಜಿಲ್ಲೆಗೆ ಒಲಿದ ಸಂವಿಧಾನ ಜಾಗೃತಿ ಜಾಥಾ ಪ್ರಶಸ್ತಿ; ಸಿಎಂ ಸಿದ್ದರಾಮಯ್ಯರಿಂದ 1 ಲಕ್ಷ ರೂ. ಬಹುಮಾನ ವಿತರಣೆ
ದಾವಣಗೆರೆ ಜಿಲ್ಲೆಗೆ ಒಲಿದ ಸಂವಿಧಾನ ಜಾಗೃತಿ ಜಾಥಾ ಪ್ರಶಸ್ತಿ
Follow us on

ದಾವಣಗೆರೆ, ಫೆ.24: 75 ನೇ ಗಣರಾಜ್ಯೋತ್ಸವ ಅಮೃತಕಾಲದ ಸಂವಿಧಾನ ಜಾಗೃತಿ ಜಾಥಾ (Sanvidhan Jagruti Jatha) ಯಶಸ್ವಿ ಅನುಷ್ಠಾನಕ್ಕಾಗಿ ದಾವಣಗೆರೆ ಜಿಲ್ಲೆಗೆ ಪ್ರಶಸ್ತಿ ಒದಗಿ ಬಂದಿದೆ. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ(Siddaramaiah) ಅವರು ದಾವಣಗೆರೆ ಜಿಲ್ಲಾಧಿಕಾರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ವಿತರಣೆ ಮಾಡಿದರು. ಗಣರಾಜ್ಯೋತ್ಸವದ ಅಮೃತಕಾಲದ ಅಂಗವಾಗಿ ಸಂವಿಧಾನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಜನವರಿ 26 ರಿಂದ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅತ್ಯಂತ ಯಶಸ್ವಿಯಾಗಿ ಜಾಥಾ ನಡೆಸಿದ ದಾವಣಗೆರೆ ಜಿಲ್ಲೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಶಸ್ವಿ ಅನುಷ್ಠಾನ ಪ್ರಶಸ್ತಿ ನೀಡಿದರು.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅವರು ಸ್ವೀಕರಿಸಿದರು, ಇದು ಒಂದು ಲಕ್ಷ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇವರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಕೆ.ನಾಗರಾಜ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಸಂವಿಧಾನ ರಕ್ಷಣೆಯಾದರೆ ಉಳಿಯುತ್ತೇವೆ, ಧಕ್ಕೆಯಾದರೆ ಅಪಾಯಕ್ಕೆ ಸಿಲುಕುತ್ತೇವೆ: ಸಿದ್ದರಾಮಯ್ಯ

ಸಂವಿಧಾನ ಜಾಗೃತಿ ಜಾಥಾವನ್ನು ದಾವಣಗೆರೆ ಜಿಲ್ಲೆಯಲ್ಲಿ ಜನವರಿ 26 ರಿಂದ ಆರಂಭವಾಗಿ ಫೆಬ್ರವರಿ 23 ರವರೆಗೆ ಜಿಲ್ಲೆಯ ಎಲ್ಲಾ 194 ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನ, 7 ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜಾಥಾ ಏರ್ಪಡಿಸುವ ಮೂಲಕ ಸಂವಿಧಾನ ನೀಡಿರುವ ಅವಕಾಶಗಳು, ವರ್ಗ ರಹಿತ ಸಮ ಸಮಾಜದ ನಿರ್ಮಾಣ, ಜಾತ್ಯಾತೀತ ನಿಲುವುಗಳು, ಸಮಾನತೆ, ಭ್ರಾತೃತ್ವ ಕುರಿತಂತೆ ಸಂವಿಧಾನದ ಪ್ರಸ್ತಾವನೆ ಪ್ರತಿಜ್ಞೆ ಕುರಿತು ಜಾಗೃತಿ ಮೂಡಿಸಲಾಯಿತು. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರನ್ನು ಜಾಥಾ ಸಂದರ್ಭದಲ್ಲಿ ತೊಡಗಿಸಿಕೊಳ್ಳುವಂತೆ ಜನ ಜಾಗೃತಿ ಮೂಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ