ದಾವಣಗೆರೆ: ಅರಣ್ಯ ಪ್ರದೇಶಗಳು ಹೆಚ್ಚಿರುವ ಚಾಮರಾಜನಗರ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ (Wild animals menace) ಹೆಚ್ಚಾಗುತ್ತಿದ್ದು, ನರ ಬಲಿ, ಪ್ರಾಣಿ ಬಲಿಗಳು ನಡೆಯುತ್ತಿವೆ. ಆಹಾರ ಅರಸಿಕೊಂಡು ಆನೆಗಳು, ಚಿರತೆಗಳು, ಹುಲಿಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿದ್ದು, ಇದೀಗ ಕರಡಿಗಳು ಕೂಡ ತಾವೇನು ಕಮ್ಮಿ ಇಲ್ಲ ಎಂದು ಜನರಿಗೆ ಕಾಟ ಕೊಡಲು ಆರಂಭಿಸಿವೆ. ಹೊನ್ನಾಳಿ ತಾಲೂಕಿನಲ್ಲಿ ಮತ್ತೆ ಕರಡಿ ಕಾಟ (Bear menace) ಆರಂಭವಾಗಿದೆ. ರಾತ್ರೋರಾತ್ರಿ ಮೂರು ನಾಲ್ಕು ಕರಡಿಗಳು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶಗೊಳಿಸಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನರಸಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಅಶೋಕ ಎಂಬ ರೈತ ಬೆಳೆದ ಕಬ್ಬು, ತೆಂಗು ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳನ್ನು ಕರಡಿಗಳು ನಾಶಗೊಳಿಸಿವೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಇಲ್ಲಿಂದ ಕೆಲ ಕಿಲೋ ಮೀಟರ್ ದೂರದಲ್ಲಿ ಮಹಿಳೆಯೊಬ್ಬರನ್ನು ಕರಡಿಗಳು ಬಲಿ ಪಡೆದಿದ್ದವು.
ಇದನ್ನೂ ಓದಿ: ಹರಿಹರ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ; ಗಾಯಾಳು ಗಂಭೀರ
ಇದೀಗ ಮತ್ತೆ ಜಮೀನಿಗೆ ಕರಡಿಗಳು ಲಗ್ಗೆ ಇಟ್ಟಿವೆ. ಈಗಾಗಲೇ ಒಬ್ಬರನ್ನು ಕರಡಿಗಳು ಬಲಿ ಪಡೆದಿದ್ದು, ಇನ್ನೊಂದೆಡೆ ಜಮೀನಿಗೆ ನುಗ್ಗಿ ಬೆಳೆ ನಾಶಗೊಳಿಸುತ್ತಿವೆ. ಇದರಿಂದಾಗ ಜಮೀನಿಗೆ ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಕರಡಿ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ನಾಶಗೊಂಡ ಬೆಳೆಗೆ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಅಲ್ಲದೆ ಕರಡಿಗಳನ್ನು ಸೆರೆಹಿಡಿದು ಅರಣ್ಯಗಳಿಗೆ ಅಟ್ಟಲು ಕಾರ್ಯಾಚರಣೆ ಮಾಡುವಂತೆ ರೈತರು ವಿನಂತಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 am, Tue, 6 December 22