ದಾವಣಗೆರೆ: ರಾತ್ರಿ ಊಟ ಸೇವಿಸಿದ ಮಕ್ಕಳು ಬೆಳಿಗ್ಗೆ ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಸ್ವಸ್ಥರಾಗಿರುವ ಮಕ್ಕಳ ಆರೋಗ್ಯವನ್ನು ಶಾಸಕರು ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲೇ ಇದ್ದು ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ರೇಣುಕಾಚಾರ್ಯ ಸೂಚನೆ ನೀಡಿದ್ದಾರೆ.
ಈ ಹಿಂದೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿ 81 ಮಕ್ಕಳು ಅಸ್ವಸ್ಥರಾಗಿದ್ದರು. ಹಲ್ಲಿ ಬಿದ್ದಿದ್ದ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದರು. ವಾಂತಿ ಭೇದಿಯಿಂದ 81 ಮಕ್ಕಳು ಅಸ್ವಸ್ಥಗೊಂಡಿದ್ದರು.
ನವೋದಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿರುವ ನವೋದಯ ವಿದ್ಯಾಲಯ ಶಾಲೆಯ ಸುಮಾರು 32 ಮಕ್ಕಳು, ಓರ್ವ ಶಿಕ್ಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 10 ಮಕ್ಕಳಿಗೆ ತಳಕಲ್ಲಿನ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳನ್ನ ಶಾಲೆಯ ಹಾಸ್ಟೆಲ್ನಲ್ಲಿ ಐಸೋಲೇಷನ್ ಮಾಡಲಾಗಿದೆ. ಕಳೆದ 2 ದಿನಗಳ ಹಿಂದೆ ನವೋದಯ ಶಾಲೆಯಲ್ಲಿ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನಿನ್ನೆ ಮತ್ತೆ 20 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.
ನವೋದಯ ವಿದ್ಯಾಲಯದಲ್ಲಿ 550 ವಿದ್ಯಾರ್ಥಿಗಳು ಸೇರಿ 618 ಜನರಿದ್ದಾರೆ. 618 ಜನರ ಆರ್ಟಿಪಿಸಿಆರ್ ವರದಿ ಬಂದಿದ್ದು, ಅದರಲ್ಲಿ 33 ಜನರಿಗೆ ಕೊರೊನಾ ದೃಢಪಟ್ಟಿದೆ.
ಇದನ್ನೂ ಓದಿ
Mysuru Zoo: ಮೈಸೂರಿನ ಮೃಗಾಲಯದ ಗೊರಿಲ್ಲಾಗೆ ಹುಟ್ಟುಹಬ್ಬದ ಸಂಭ್ರಮ
Published On - 9:35 am, Sat, 15 January 22