ವಾಹನ ಮಾಲೀಕರು, ತಯಾರಕರು ಗಮನಿಸಬೇಕಾದ ವಿಚಾರ ಇದು; 8 ಜನ ಪ್ರಯಾಣಿಸಬಹುದಾದ ಕಾರಿನಲ್ಲಿ ಇನ್ಮುಂದೆ 6 ಏರ್ಬ್ಯಾಗ್ಗಳು ಕಡ್ಡಾಯ
ಯಾವುದೇ ಮಾದರಿಯ ಕಾರು ಇದ್ದರೂ, ಚಾಲಕ ಮತ್ತು ಆತನ ಪಕ್ಕದ ಸೀಟ್ಗೆ ಏರ್ಬ್ಯಾಗ್ ಕಡ್ಡಾಯ ಎಂಬ ನಿಯಮವನ್ನು 2019ರ ಜುಲೈ 1ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಹಾಗೇ, 2022ರ ಜನವರಿ 1ರಿಂದ ಈ ನಿಯಮ ಕಡ್ಡಾಯವಾಗಿ ಅನ್ವಯ ಆಗಲಿದೆ ಎಂದೂ ಹೇಳಿತ್ತು.
ವಾಹನ ಚಾಲಕರ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈಗೊಂದು ಮಹತ್ವದ ಘೋಷಣೆ ಮಾಡಿದೆ. ಇನ್ನು ಮುಂದೆ 8 ಮಂದಿ ಕುಳಿತುಕೊಳ್ಳಬಹುದಾದ ಎಲ್ಲ ವಾಹನಗಳಿಗೆ ಆರು ಏರ್ಬ್ಯಾಗ್ ಕಡ್ಡಾಯಗೊಳಿಸುವ ಕರಡು ಶಾಸನಬದ್ಧ ನಿಯಮಗಳ ಅಧಿಸೂಚನೆಗೆ ಅನುಮೋದನೆ ನೀಡಿದ್ದಾಗಿ ಜನವರಿ 14ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ, 8 ಮಂದಿ ಪ್ರಯಾಣ ಮಾಡಬಹುದಾದ ವಾಹನಗಳಲ್ಲಿ ಕನಿಷ್ಠ 6 ಏರ್ಬ್ಯಾಗ್ಗಳನ್ನು ಇಡುವುದು ಕಡ್ಡಾಯ ಎಂಬ ಕರಡು ಜಿಎಸ್ಆರ್ ಅಧಿಸೂಚನೆಗೆ ಇಂದು ಅನುಮೋದನೆ ನೀಡಿದ್ದೇನೆ. ಪ್ರಯಾಣ ಮಾಡುತ್ತಿರುವ ಎಲ್ಲ ಎಂಟು ಜನರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವಾಹನದಲ್ಲಿ ಎಲ್ಲ ಕಡೆಯಿಂದಲೂ ಕವರ್ ಆಗುವಂತೆ ಏರ್ಬ್ಯಾಗ್ಗಳು ಇರುವುದರಿಂದ ತುಂಬ ಅನುಕೂಲವಾಗಲಿದೆ, ಎಷ್ಟೇ ವೆಚ್ಚದ, ಯಾವುದೇ ಕಂಪನಿ, ಮಾದರಿಯ ವಾಹನವೇ ಇರಲಿ. 8 ಜನರು ಪ್ರಯಾಣಿಸುವಷ್ಟು ದೊಡ್ಡದಿದೆ ಎಂದರೆ ಅದಕ್ಕಿನ್ನು 6 ಏರ್ಬ್ಯಾಗ್ಗಳು ಕಡ್ಡಾಯ ಎಂದು ಹೇಳಿದ್ದಾರೆ.
The Ministry had already mandated the implementation of fitment of the driver airbag w.e.f 01st July 2019 and front co-passenger airbag w.e.f 01st January 2022. #RoadSafety #SadakSurakshaJeevanRaksha
— Nitin Gadkari (@nitin_gadkari) January 14, 2022
ರಸ್ತೆ ಅಪಘಾತ ತಡೆ ಹಾಗೂ ಚಾಲಕರ ಸುರಕ್ಷತೆಗಾಗಿ ಕೇಂದ್ರ ಬಿಜೆಪಿ ಸರ್ಕಾರ ಈಗಾಗಲೇ ಹಲವು ಘೋಷಣೆಗಳನ್ನು ಮಾಡಿದೆ. ಯಾವುದೇ ಮಾದರಿಯ ಕಾರು ಇದ್ದರೂ, ಚಾಲಕ ಮತ್ತು ಆತನ ಪಕ್ಕದ ಸೀಟ್ಗೆ ಏರ್ಬ್ಯಾಗ್ ಕಡ್ಡಾಯ ಎಂಬ ನಿಯಮವನ್ನು 2019ರ ಜುಲೈ 1ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಹಾಗೇ, 2022ರ ಜನವರಿ 1ರಿಂದ ಈ ನಿಯಮ ಕಡ್ಡಾಯವಾಗಿ ಅನ್ವಯ ಆಗಲಿದೆ ಎಂದೂ ಹೇಳಿತ್ತು. ಆದರೀಗ ನಿಯಮ ಬದಲಿಸಲಾಗಿದೆ. ಕಾರು ಹಿಂಬದಿ ಅಥವಾ ಮುಂಬದಿಯಿಂದ ಅಪಘಾತಕ್ಕೀಡಾದಾಗ, ಅದರ ಮುಂದಿನ ಮತ್ತು ಹಿಂದಿನ ಸೀಟ್ಗಳಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಉಂಟಾಗುವ ಅಪಾಯವನ್ನು ತಪ್ಪಿಸಲು ಮುಂದಿನ ಎರಡು ಸೀಟ್ಗಳಿಗೆ ಏರ್ಬ್ಯಾಗ್ ಅಳವಡಿಸುವ ಜತೆ, ಹಿಂದಿನ ಸೀಟ್ಗಳಿಗೂ ಅಗತ್ಯವಾಗಿ ನಾಲ್ಕು ಹೆಚ್ಚುವರಿ ಏರ್ಬ್ಯಾಗ್ ಅಳವಡಿಸುವುದು ಇನ್ನುಮುಂದೆ ಕಡ್ಡಾಯವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇದು ಎಂ 1 ವರ್ಗದ ವಾಹನಗಳಿಗೆ, ಅಂದರೆ 8 ಅಥವಾ ಅದಕ್ಕಿಂತ ಹೆಚ್ಚು ಜನರು ಪ್ರಯಾಣ ಮಾಡಬಹುದಾದ ಕಾರುಗಳಿಗೆ ಮಾತ್ರ ಅನ್ವಯ. ಅದರ ಅನ್ವಯ ಇನ್ನು ವಾಹನ ತಯಾರಕರು ಆರು ಏರ್ಬ್ಯಾಗ್ಗಳನ್ನು ಇಡಬೇಕು. ಹಾಗೇ, ವಾಹನ ಮಾಲೀಕರೂ ಕೂಡ ಈ ಬಗ್ಗೆ ಎಚ್ಚರ ವಹಿಸಬೇಕು.
ಕಾರುಗಳ ಬೆಲೆಯಲ್ಲಿ ಹೆಚ್ಚಳ !: ಇದೀಗ 8 ಜನ ಪ್ರಯಾಣ ಮಾಡಬಹುದಾದ ದೊಡ್ಡ ಕಾರುಗಳ ಬೆಲೆ ಇನ್ನೂ ಏರುವ ಸಾಧ್ಯತೆ ಹೆಚ್ಚಾಗಿದೆ. ಕಾರುಗಳ ಮುಂಭಾಗ ಏರ್ಬ್ಯಾಗ್ ಅಳವಡಿಸಲು ಕನಿಷ್ಠ 5-8 ಸಾವಿರ ರೂ.ವೆಚ್ಚ ಆಗಲಿದೆ. ಹಾಗೇ, ಇದೀಗ ಹಿಂಬದಿಗೆ ಮತ್ತೆ ಹೆಚ್ಚವರಿ ಕರ್ಟನ್ ಏರ್ಬ್ಯಾಗ್ ಹಾಕಲು ಇನ್ನೂ ಸ್ವಲ್ಪ ಹಣ ವ್ಯಯ ಆಗುತ್ತದೆ. ಹೀಗಾಗಿ ಇನ್ನು ಮುಂದೆ ಸಣ್ಣ ಮತ್ತು ಮಧ್ಯಮ ಹಂತದ ವಿಭಾಗಗಳಲ್ಲಿ ಮಾರಾಟವಾಗುವ ಕಾರುಗಳ ಬೆಲೆ ಅಂದಾಜು 30 ಸಾವಿರ ರೂ.ದಿಂದ 50 ಸಾವಿರ ರೂ. ಹೆಚ್ಚಳವಾಗುತ್ತದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ ಎ8 ಭಾರತದಲ್ಲಿ ಲಾಂಚ್ ಆಗಿದೆ; ವೈಶಿಷ್ಟ್ಯತೆ, ಬೆಲೆ ಮತ್ತು ಇತರ ವಿವರಗಳು ಇಲ್ಲಿವೆ
Published On - 8:00 am, Sat, 15 January 22