
ದಾವಣಗೆರೆ, (ಮಾರ್ಚ್ 16): ಬಾಗಲಕೋಟೆ (Bagalkote) ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ (Davanagere South By Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಅಭ್ಯರ್ಥಿಗಳ ಟಿಕೆಟ್ ಗೆ ಜಟಾಪಟಿ ನಡೆಯುತ್ತಿದೆ. ಹೌದು.. ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಎರಡೂ ಪಕ್ಷಗಳಲ್ಲಿಯೂ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಕಾದಾಟ ಜೋರಾಗಿದೆ. ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿರೋದು, ಬೈ ಎಲೆಕ್ಷನ್ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಬಿ.ಜಿ. ಅಜಯ್ ಕುಮಾರ್, ಯಶವಂತ್ ರಾವ್ ಜಾಧವ್, ದೇವರಮನೆ ಶಿವಕುಮಾರ್, ಶ್ರೀನಿವಾಸ್ ದಾಸ್ ಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಆದರೆ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿನ ವರ್ಷಗಳ ಅಸಮಾಧಾನ ಈಗ ಮೂರನೇಯವರಿಗೆ ಲಾಭ ತಂದು ಕೊಡುವ ರೀತಿಯಲ್ಲಿ ಅಖಾಡ ಸಿದ್ಧವಾಗುತ್ತಿದೆ.
2023ರ ಪರಾಜಿತ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಪರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಮ್ ಬೆಂಬಲ ವ್ಯಕ್ತಪಡಿಸಿದ್ದರೆ, ಯಶವಂತರಾವ್ ಜಾಧವ್ ಪರ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಟೀಮ್ ಬೆಂಬಲ ಸೂಚಿಸಿದೆ. ಹೀಗಾಗಿ ಎರಡೂ ಬಣಗಳ ಕುಸ್ತಿಗೆ ಬ್ರೇಕ್ ಹಾಕಲು ಪ್ರಯತ್ನ ಪಟ್ಟು ಸುಸ್ತಾಗಿರುವ ಬಿಜೆಪಿ ನಾಯಕತ್ವ ಈಗ 2024ರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಬಗ್ಗೆಯೂ ಚಿಂತನೆ ನಡೆಸಿದೆ. ಎರಡೂ ಬಣಗಳ ಕಿತ್ತಾಟಕ್ಕೆ ಬ್ರೇಕ್ ಹಾಕಲು ವಿನಯ್ ಕುಮಾರ್ ಗೆ ಟಿಕೆಟ್ ನೀಡುವ ಬಗ್ಗೆಯೂ ಗಂಭೀರ ಚಿಂತನೆಯಲ್ಲಿದ್ದು, ಈಗಾಗಲೇ ವಿನಯಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ದೆಹಲಿ ಮಟ್ಟದ ನಾಯಕರು ಮುಗಿಸಿದ್ದಾರೆ.
ವಿಧಾನ ಪರಿಷತ್ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮೂರೂ ಟಿಕೆಟ್ ಲಿಂಗಾಯತರಿಗೆ ಘೋಷಣೆ ಮತ್ತು ಬಾಗಲಕೋಟೆ ಉಪಚುನಾವಣೆಗೆ ಲಿಂಗಾಯತ ಸಮುದಾಯದ ವೀರಣ್ಣ ಚರಂತಿಮಠಗೆ ಟಿಕೆಟ್ ಖಚಿತವಾಗಿರುವ ಕಾರಣ ದಾವಣಗೆರೆ ದಕ್ಷಿಣದಲ್ಲಿ ಜಾತಿ ಸಮೀಕರಣಕ್ಕೆ ಆಗ್ರಹ ರಾಜ್ಯ ಬಿಜೆಪಿಯಲ್ಲಿ ವ್ಯಕ್ತವಾಗಿದೆ. ಜಾತಿ ಸಮೀಕರಣ ಮಾಡುವಂತೆ ಬಿಜೆಪಿ ಕೋರ್ ಕಮಿಟಿ ಸದಸ್ಯರು ಆಗ್ರಹಿಸಿದ್ದು, ಹೀಗಾಗಿ ಕುರುಬ ಸಮುದಾಯಕ್ಕೆ ಸೇರಿದ ವಿನಯಕುಮಾರ್ ಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.
ಇನ್ನು ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ ಟಿಕೆಟ್ ಗಾಗಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪರಾಜಿತ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಸೇರಿದಂತೆ ಮೂರ್ನಾಲ್ಕು ಜನ ದೆಹಲಿಯತ್ತ ತೆರಳಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ಗಾಗಿ ರೇಣುಕಾಚಾರ್ಯ ಟೀಮ್ ಪ್ರಯತ್ನ ನಡೆಸಲು ಮುಂದಾಗಿದೆ.
ಇದೇ ವೇಳೆ ಆಡಳಿತ ಪಕ್ಷ ಕಾಂಗ್ರೆಸ್ ಗೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯೇ ಚಾಲೆಂಜ್ ಆಗಿ ಪರಿಣಮಿಸಿದೆ. ಶಾಮನೂರು ಕುಟುಂಬ ವರ್ಸಸ್ ಮುಸ್ಲಿಂ ಸಮುದಾಯದ ಫೈಟ್ ಎಂಬಂತಾಗಿದ್ದು, ತಮ್ಮ ಕುಟುಂಬಸ್ಥರಲ್ಲೇ ಒಬ್ಬರಿಗೆ ಟಿಕೆಟ್ ಬೇಕು ಅಂತ ಶಾಮನೂರು ಕುಟುಂಬ ಪಟ್ಟು ಹಿಡಿದಿದೆ. ಇತ್ತ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಬೇಕು ಎಂದು ಪಟ್ಟು ಕೂಡಾ ಜೋರಾಗಿದ್ದು, ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗುತ್ತಲೇ ಇದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪುತ್ರ ಸಮರ್ಥ್ ಶಾಮನೂರು, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಖಾಲಿದ್ ಪೈಲ್ವಾನ್, ಮುಜಿಮಲ್ ಹುಸೇನ್, ಸಾಧಿಕ್ ಪೈಲ್ವಾನ್, ಆಯೋಬ್ ಪೈಲ್ವಾನ್ ಮತ್ತು ಶಿವಗಂಗಾ ಶ್ರೀನಿವಾಸ್ ಸೇರಿದಂತೆ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡದಿದೆ.
ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಭ್ಯರ್ಥಿ ಆಯ್ಕೆಗೆ ಕೇವಲ ಎಂಟು ದಿನಗಳು ಮಾತ್ರ ಬಾಕಿ ಉಳಿದಿವೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಅಗುವವರೆಗೂ ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡದೇ ಇರಲು ತೀರ್ಮಾನಿಸಿದೆ ಎನ್ನಲಾಗಿದೆ.