ದಾವಣಗೆರೆ ಮಹಿಳಾ ವಸತಿ ನಿಲಯದಲ್ಲಿ ಮೂವರು ಹೆಣ್ಣುಮಕ್ಕಳ ಕಲ್ಯಾಣ; ಅಂತರ್‌ಧರ್ಮೀಯ ವಿವಾಹದ ಮೂಲಕ ಕೋಮು ಸೌಹಾರ್ದತೆ ಸಂದೇಶ
ದಾವಣಗೆರೆಯಲ್ಲಿ ಮೂವರು ಅನಾಥ ಯುವತಿಯರಿಗೆ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೆತ್ತವರಾಗಿ ವಿವಾಹ ನೆರವೇರಿಸಿದ್ದಾರೆ. ಸರ್ಕಾರಿ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ನಡೆದ ಈ ಸಂಭ್ರಮದ ಮದುವೆ, ಅಂತರ್‌ಧರ್ಮೀಯ ವಿವಾಹದ ಮೂಲಕ ಕೋಮು ಸೌಹಾರ್ದತೆಯ ಸಂದೇಶ ಸಾರಿತು. ಅಧಿಕಾರಿಗಳ ಮಾನವೀಯ ಕಾರ್ಯದಿಂದ ಯುವತಿಯರಿಗೆ ಹೊಸ ಬಾಳು ಸಿಕ್ಕಿದೆ.

ದಾವಣಗೆರೆ, ನ.13: ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದ ಮೂವರು ಅನಾಥ ಯುವತಿಯರ ಬಾಳಿನಲ್ಲಿ ಇಂದು ಹೊಸ ಬೆಳಕು ಮೂಡಿದೆ. ದಾವಣಗೆರೆ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಹೆತ್ತವರ ಸ್ಥಾನದಲ್ಲಿ ನಿಂತು, ಸಂಪ್ರದಾಯಬದ್ಧವಾಗಿ ಮೂವರು ಯುವತಿಯರಿಗೆ ಕಂಕಣಭಾಗ್ಯ ಕರುಣಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ನಗರದ ಶ್ರೀರಾಮನಗರದಲ್ಲಿರುವ ಸರ್ಕಾರಿ ರಾಜ್ಯ ಮಹಿಳಾ ವಸತಿ ನಿಲಯದ (State Home for Women) ಆವರಣದಲ್ಲಿ ಇಂದು ಸಂಭ್ರಮದ ಮದುವೆ ನಡೆಯಿತು. ವಿಶೇಷವೆಂದರೆ, ಈ ವಿವಾಹ ಮಹೋತ್ಸವದಲ್ಲಿ ಅಂತರ್‌ಧರ್ಮೀಯ ವಿವಾಹವೂ ನೆರವೇರಿದ್ದು, ಸಮಾಜಕ್ಕೆ ಕೋಮು ಸೌಹಾರ್ದತೆಯ ಸಂದೇಶ ಸಾರಿದೆ. ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಮದುವೆ ಮಂಟಪದಲ್ಲಿ ಮುನ್ನಾದಿನವೇ ಮೆಹಂದಿ ಹಾಗೂ ಬಳೆಶಾಸ್ತ್ರ ನೆರವೇರಿಸಲಾಗಿತ್ತು. ಇಂದು ಪುರೋಹಿತರ ವೇದಮಂತ್ರಗಳು ಮತ್ತು ಗಟ್ಟಿಮೇಳದ ನಡುವೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ಷತೆ ಹಾಕಿ ನವಜೋಡಿಗಳನ್ನು ಹರಸಿದರು. ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾದ ವಸತಿ ನಿಲಯದ ಸಿಬ್ಬಂದಿಯ ಕಣ್ಣಾಲಿಗಳು ಆನಂದಭಾಷ್ಪದಿಂದ ತುಂಬಿದ್ದವು.
ನಿಲಯದಲ್ಲಿ ಆಶ್ರಯ ಪಡೆದಿದ್ದ ಕೆ. ಪೂಜಾ (22) – ಆರ್.ಎಸ್. ಸುರೇಶ್, ಸುಪ್ರಿಯಾ ಚಳಗೇರಿ (20) – ಮಧುಸೂದನ್ ಹಾಗೂ ಅಖಿಲಾ ಸಬಾನ (21) – ಸುರೇಶ್ ಎಂ. ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ವತಃ ಜಿಲ್ಲಾ ಪಂಚಾಯಿತಿ ಸಿಇಓ ಸಾಹಿತ್ಯ ಆಲದಕಟ್ಟಿ ಅವರು ವಿವಾಹ ಸಮಾರಂಭಕ್ಕೆ ಆಗಮಿಸಿ ನವಜೋಡಿಗಳಿಗೆ ಶುಭ ಹಾರೈಸಿದರು ಹಾಗೂ ಅನಾಥ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ ವಸತಿ ನಿಲಯದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಸಿಡಿದೆದ್ದ ಜೈನ ಮುನಿ: ಡಿ.4ರಿಂದ ದೇಹತ್ಯಾಗದ ಹೋರಾಟ ಆರಂಭ
ಮೂಲತಃ ಬಾಗಲಕೋಟೆಯ 21 ವರ್ಷದ ಅಖಿಲಾ ಸಬಾನ ಕಳೆದ 8 ವರ್ಷಗಳಿಂದ ವಸತಿ ನಿಲಯದಲ್ಲಿ ಆಶ್ರಯ ಪಡೆದು, ಅಲ್ಲಿಯೇ ಅಡುಗೆ ಕೆಲಸ ಮಾಡುತ್ತಾ ವೃದ್ಧರ ಸೇವೆ ಮಾಡುತ್ತಿದ್ದರು. ಇವರನ್ನು ರಾಣೇಬೆನ್ನೂರಿನ ಆಂಜನೇಯ ಬಡಾವಣೆಯ 29 ವರ್ಷದ ಸುರೇಶ್ ಮತ್ತೂರ (ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್) ವಿವಾಹವಾಗುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. “ವಿವಾಹವಾಗಲು ವಧುವನ್ನು ಹುಡುಕುತ್ತಿದ್ದಾಗ ಪರಿಚಯಸ್ಥರೊಬ್ಬರು ರಾಜ್ಯ ಮಹಿಳಾ ನಿಲಯದ ಬಗ್ಗೆ ಮಾಹಿತಿ ನೀಡಿದರು. ಕುಟುಂಬದವರೊಂದಿಗೆ ಬಂದು ವಧು ನೋಡುವ ಶಾಸ್ತ್ರ ಮುಗಿಸಿ, ಪರಸ್ಪರ ಒಪ್ಪಿಗೆಯಿಂದ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದೇವೆ” ಎಂದು ವರ ಸುರೇಶ್ ಸಂತಸ ಹಂಚಿಕೊಂಡರು.
1977ರಿಂದ ಕಾರ್ಯನಿರ್ವಹಿಸುತ್ತಿರುವ ಈ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ 2025ರವರೆಗೆ 46 ಅನಾಥ ಯುವತಿಯರಿಗೆ ಮದುವೆ ಮಾಡಿಸಲಾಗಿತ್ತು. ಇಂದಿನ ಮೂರು ವಿವಾಹಗಳೊಂದಿಗೆ ಒಟ್ಟು 49 ಯುವತಿಯರು ಈ ನಿಲಯದಿಂದ ಹೊಸ ಬದುಕು ಕಟ್ಟಿಕೊಂಡಂತಾಗಿದೆ. ಈ ಹಿಂದೆ ಇಲ್ಲಿಂದ ಮದುವೆಯಾಗಿ ಹೋದ ಹಳೆಯ ಸದಸ್ಯೆಯರೂ ಇಂದಿನ ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಹರಸಿದ್ದು ವಿಶೇಷವಾಗಿತ್ತು. ವಸತಿ ನಿಲಯದ ಯುವತಿಯರನ್ನು ಮದುವೆಯಾಗಲು ಇಚ್ಛಿಸುವ ಯುವಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಬಳಿಕ ಅಧಿಕಾರಿಗಳು ಯುವಕರ ಪೂರ್ವಾಪರ ಮಾಹಿತಿ ಕಲೆಹಾಕಿ, ವೈದ್ಯಕೀಯ ಪರೀಕ್ಷೆ ಹಾಗೂ ಪೊಲೀಸ್ ಪರಿಶೀಲನೆ ನಡೆಸಿದ ನಂತರವಷ್ಟೇ ವಿವಾಹಕ್ಕೆ ಒಪ್ಪಿಗೆ ನೀಡಲಾಗುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
