ದಾವಣಗೆರೆ, ನವೆಂಬರ್ 22: ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು ಎನ್.ಡಿ.ಆರ್.ಎಫ್ ಮಾನದಂಡದಡಿ 13 ಸಾವಿರ ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ನವೆಂಬರ್ ಅಂತ್ಯದೊಳಗೆ ಅನುಮೋದನೆ ನಿರೀಕ್ಷಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣ ಫ್ರೂಟ್ಸ್ ತತ್ರಾಂಶದ ಮೂಲಕ ನೇರವಾಗಿ ರೈತರಿಗೆ ಬರ ಪರಿಹಾರವನ್ನು ನೀಡಲಾಗುತ್ತದೆ ಎಂದು ಕೃಷಿ ಸಚಿವರಾದ ಎನ್.ಚೆಲುವನಾರಾಯಣಸ್ವಾಮಿ (chaluvaraya swamy)
ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಕೃಷಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಪರಿಹಾರ ವಿತರಣೆಗೆ ಶೇ 75 ರಷ್ಟು ನೊಂದಣಿಯಾಗಿ ಸಿದ್ದತೆಯನ್ನು ಪೂರ್ಣಗೊಳಿಸಲಾಗಿದೆ. ಮತ್ತು ಶೇ 95 ರಷ್ಟು ಬೆಳೆ ಸಮೀಕ್ಷೆ ಮಾಡಿದ್ದು ಇ.ಕೆವೈಸಿ ಶೇ 90 ರಷ್ಟು ಪೂರ್ಣಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವರು ನವೆಂಬರ್ 23 ರಂದು ಭೇಟಿಗೆ ಸಮಯ ನೀಡಿದ್ದು ಕಂದಾಯ ಸಚಿವರೊಂದಿಗೆ ಭೇಟಿ ಮಾಡಲಾಗುತ್ತಿದೆ ಎಂದರು.
2013 ರಿಂದ 2018 ರ ವರೆಗೆ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ನಂತರ ಈ ಯೋಜನೆ ಸ್ಥಗಿತವಾಗಿದ್ದು ಮರುಚಾಲನೆ ನೀಡಲಾಗಿದೆ. ಈ ವರ್ಷ 30 ಸಾವಿರ ಕೃಷಿಹೊಂಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ರಾಷ್ಟ್ರೀಯ ವಿಪತ್ತು ನಿಧಿಯಡಿ 100 ಕೋಟಿಯನ್ನು ಇದಕ್ಕಾಗಿ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ;ಇಲ್ಲಿದೆ ವಿವರ
ಎನ್.ಡಿ.ಆರ್.ಎಫ್ ಮಾನದಂಡದಡಿ 18 ಸಾವಿರ ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ರೈತರಿಗೆ ನೇರವಾಗಿ ನೀಡುವ ಪರಿಹಾರ 13 ಸಾವಿರ ಕೋಟಿಯಾಗಿದೆ. ಇದಲ್ಲದೇ 9 ಸಾವಿರ ಕೋಟಿ ಕುಡಿಯುವ ನೀರು, ಮೇವಿಗಾಗಿ ಪ್ರಸ್ತಾವಿಸಲಾಗಿದೆ. ರೈತರಿಗೆ ನೀಡುವ ಪರಿಹಾರವನ್ನು ಫ್ರೂಟ್ಸ್ ಐಡಿ ಮೂಲಕವೇ ಪಾವತಿಸಲಾಗುತ್ತಿದ್ದು ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 100 ಕಡೆ ಕಬ್ಬು ಮತ್ತು ಭತ್ತದ ಹಾರ್ವೆಸ್ಟಿಂಗ್ ಹಬ್‍ಗಳನ್ನು ಡಿಸೆಂಬರ್ ಒಳಗಾಗಿ ಪ್ರಾರಂಭಿಸಲಾಗುತ್ತಿದೆ. ಇದರಿಂದ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವುದರ ಜೊತೆಗೆ ಸಮಯ, ಗುಣಮಟ್ಟ ಕಾಪಾಡಲು ಅನುಕೂಲವಾಗಲಿದೆ ಎಂದರು.
ಭತ್ತ, ಮೆಕ್ಕೆಜೋಳ, ರಾಗಿ ಹಾಗೂ ಇನ್ನಿತರೆ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ತೇವಾಂಶ, ನೀರು ಬಳಕೆ ಮತ್ತು ಕನಿಷ್ಠ ನಿರ್ವಹಣೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಬರಗಾಲದಲ್ಲಿಯು ಮಿತ ನೀರಿನ ಬಳಕೆ ಮೂಲಕ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಲು ಸಂಶೋಧನೆ ಕೈಗೊಳ್ಳಲು ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳ ಸೇವೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೃಷಿ ವಿಜ್ಞಾನಿಗಳನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪೂರ್ವ ಮುಂಗಾರು ಸಮಯದಲ್ಲಿ ಭತ್ತದ ಬೆಳೆಯು ಅಧಿಕ ಮಳೆಗೆ ಹಾನಿಯಾಗಿದ್ದು ಹಾನಿಯಾದ ಬೆಳೆಗಳ ಸಮೀಕ್ಷೆ ಮಾಡಿದ ವೇಳೆ ಚನ್ನಗಿರಿ ತಾಲ್ಲೂಕಿನಲ್ಲಿ ನೀರಾವರಿ ಆಶ್ರಿತ ಇದ್ದರೂ ಸಹ ಮಳೆಯಾಶ್ರಿತ ಎಂದು ಮತ್ತು ಎಕರೆ ನಷ್ಟವಾಗಿದ್ದರೂ 10 ಗುಂಟೆ ಎಂದು ಒಂದೇ ಪ್ಲಾಟಿನಲ್ಲಿ ಕೆಲವರಿಗೆ ಹೆಚ್ಚು ಪರಿಹಾರ ಮತ್ತು ಕೆಲವರಿಗೆ ಕಡಿಮೆ ಪರಿಹಾರ ಬಂದಿದ್ದು ಇದನ್ನು ಇಲಾಖೆ ನೋಡಲ್ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ. ಈ ವೇಳೆ ಚನ್ನಗಿರಿ ಶಾಸಕರಾದ ಬಸವರಾಜ ವಿ.ಶಿವಗಂಗ ಅವರು ಪ್ರಸ್ತಾಪಿಸಿ ನಷ್ಟವಾದ ಭತ್ತದ ತಾಕುಗಳಿಗೆ ಖುದ್ದು ಭೇಟಿ ನೀಡಿದ್ದು ಭೇಟಿ ನೀಡಿದ ಜಮೀನಿನ ರೈತರಿಗೆ ಕಡಿಮೆ ಪರಿಹಾರ ಮತ್ತು ಭತ್ತವನ್ನು ಕಟಾವು ಮಾಡಿದ ರೈತರಿಗೆ ಹೆಚ್ಚು ಪರಿಹಾರ ಬಂದಿದೆ. ಈ ತಾರತಮ್ಯ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಿದಾಗ ಆಯುಕ್ತರಿಂದ ಪರಿಶೀಲನೆ ನಡೆಸಲು ಸಚಿವರು ಸೂಚನೆ ನೀಡಿದ್ದಾರೆ.
ಈಗಾಗಲೇ ಮೆಕ್ಕೆಜೋಳ, ಭತ್ತ ಕಟಾವಿಗೆ ಬಂದಿದ್ದು ರೈತರ ಮನೆ ಬಾಗಿಲಿಗೆ ಖರೀದಿದಾರರು ಬಂದು ಖರೀದಿಸುತ್ತಿದ್ದಾರೆ. ಆದರೆ ಖರೀದಿ ಮಾಡಿ ರೈತರಿಗೆ ಹಣ ನೀಡದೆ ಮೋಸ ಮಾಡುವ ಸಾಧ್ಯತೆ ಇದ್ದು ಇದಕ್ಕೆ ಬಿಗಿ ಕ್ರಮ ಕೈಗೊಳ್ಳಲು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಪ್ರಸ್ತಾಪಿಸಿದಾಗ ರಾಗಿ, ಭತ್ತ, ಜೋಳ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿಗೆ ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಇದ್ದು ಇಲ್ಲಿನ ಭತ್ತದ ಇಳುವರಿ ರಾಜ್ಯದಲ್ಲಿಯೇ ಹೆಚ್ಚಿದ್ದು ಇನ್ನೂ ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ರೈತರಿಗೆ ಅನುಕೂಲವಾಗಲು ಹೊಸ ಹೊಸ ಸಂಶೋಧನೆಗಳಿಗೆ ಮುಂದಾಗಲು ತಿಳಿಸಿ ಕೃಷಿ ಅಧಿಕಾರಿಗಳು ಕಚೇರಿಯಲ್ಲಿರದೇ ರೈತರ ತಾಕುಗಳಿಗೆ ಭೇಟಿ ನೀಡುವ ಮೂಲಕ ತಾಂತ್ರಿಕ ಸಲಹೆಗಳನ್ನು ರೈತರಿಗೆ ಮುಟ್ಟಿಸಬೇಕೆಂದರು.
ಬೆಳೆ ವಿಮೆ ಪರಿಹಾರವನ್ನು ಪಡೆಯುವ ಜಿಲ್ಲೆಯಲ್ಲಿ ಹಾವೇರಿ ಮೊದಲ ಜಿಲ್ಲೆಯಾಗಿದ್ದು ಸಿಂಹಪಾಲು ಈ ಜಿಲ್ಲೆಯದು ಇರುತ್ತದೆ. ಇದೇ ರೀತಿ ಇತರೆ ಜಿಲ್ಲೆಯವರು ಸಹ ಬೆಳೆ ವಿಮೆ ಮಾಡಿಸುವ ಮೂಲಕ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕು. ಈಗ ಬಿಡುಗಡೆಯಾಗಿರುವ ಬೆಳೆ ವಿಮೆ ಪರಿಹಾರ ರೂ.523 ಕೋಟಿಯಲ್ಲಿ ಹಾವೇರಿಗೆ ರೂ.126 ಕೋಟಿ ಬಂದಿದೆ ಎಂದರು.
ಫಸಲ್ ಬಿಮಾ ಯೋಜನೆಯ ಪರಿಹಾರ ಮಾರ್ಗಸೂಚಿಯನ್ನು ಮುಂದಿನ ವರ್ಷ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿದೆ. ಈ ವರ್ಷದ ಪರಿಹಾರ ಈ ಹಿಂದಿನ ಮಾರ್ಗಸೂಚಿಯಂತೆ ಇರುತ್ತದೆ. ಐದು ವರ್ಷಗಳ ಸರಾಸರಿ ಇಳುವರಿಯನ್ನು ಲೆಕ್ಕಹಾಕುವುದರಿಂದ ಈ ಭಾಗದ ರೈತರಿಗೆ ಪರಿಹಾರ ಕಡಿಮೆಯಾಗಲಿದೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಅಪರ ನಿರ್ದೇಶಕರಾದ ವಿ.ಜಿ.ಪಾಟೀಲ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.