ಚಂದ್ರಶೇಖರ್ ಸಾವು: ಹೊನ್ನಾಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲು, ಕೊಲೆ, ಸಾಕ್ಷ್ಯನಾಶದ ಕಲಂಗಳು ಉಲ್ಲೇಖ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 04, 2022 | 9:53 AM

ಕೈಕಾಲುಗಳನ್ನು ಕಟ್ಟಿಹಾಕಿ, ಕಿವಿಗಳಿಗೆ ಹಲ್ಲೆ ಮಾಡಲಾಗಿದೆ. ತಲೆಗೆ ಆಯುಧದಿಂದ ಹೊಡೆಯಲಾಗಿದೆ ಎಂದು ಕುಟುಂಬ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ್ ಸಾವು: ಹೊನ್ನಾಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲು, ಕೊಲೆ, ಸಾಕ್ಷ್ಯನಾಶದ ಕಲಂಗಳು ಉಲ್ಲೇಖ
ಮೃತ ಚಂದ್ರಶೇಖರ್
Follow us on

ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ (Honnali  ಎಫ್​ಐಆರ್ ದಾಖಲಾಗಿದೆ. ಎಫ್​ಐಆರ್​ನಲ್ಲಿ ಪೊಲೀಸರು ಐಪಿಸಿ 302 (ಕೊಲೆ), 201 (ಸಾಕ್ಷ್ಯನಾಶ) ಮತ್ತು 427 (ವಾಹನ ಜಖಂ) ಕಲಂಗಳನ್ನು ದಾಖಲಿಸಲಾಗಿದೆ. ಮೃತ ಚಂದ್ರಶೇಖರ್ ಅವರ ತಂದೆ ರಮೇಶ್ ನೀಡಿರುವ ದೂರಿನ ಅನ್ವಯ ಎಫ್​ಐಆರ್ ದಾಖಲಿಸಲಾಗಿದೆ. ಈ ಮೊದಲು ವ್ಯಕ್ತಿ ನಾಪತ್ತೆ ಎಂದು ಎಫ್​ಐಆರ್ ದಾಖಲಿಸಲಾಗಿತ್ತು. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತುಂಗಾ ನಾಲೆಯಲ್ಲಿ ಪತ್ತೆಯಾದ ಕಾರಿನ ಹಿಂಬದಿಯ ಸೀಟ್​ನಲ್ಲಿ ಚಂದ್ರಶೇಖರ್ ಮೃತ ದೇಹ ಇತ್ತು. ಕೈಕಾಲುಗಳನ್ನು ಕಟ್ಟಿಹಾಕಿ, ಕಿವಿಗಳಿಗೆ ಹಲ್ಲೆ ಮಾಡಲಾಗಿದೆ. ತಲೆಗೆ ಆಯುಧದಿಂದ ಹೊಡೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದೂರಿನಲ್ಲಿ ಏನಿದೆ?

ಎಂ.ಪಿ.ರೇಣುಕಾಚಾರ್ಯ ಕುಟುಂಬಸ್ಥರು ನೀಡಿದ ದೂರಿನ ಸಾರಾಂಶ ಹೀಗಿದೆ. ‘ಚಂದ್ರಶೇಖರ್​ ಮೃತದೇಹ ಕಾರಿನ ಹಿಂದಿನ ಸೀಟ್​ನಲ್ಲಿತ್ತು. ಅಷ್ಟೇ ಅಲ್ಲದೇ ಚಂದ್ರಶೇಖರ್​ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದರು. ನಂತರ ಕಿವಿ, ತಲೆಗೆ ಆಯುಧದಿಂದ ಹಲ್ಲೆ ಸಹ ಮಾಡಲಾಗಿತ್ತು. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೃತದೇಹವನ್ನು ಕಾರಿನಲ್ಲಿಟ್ಟು ತುಂಗಾ ಕಾಲುವೆಗೆ ದೂಡಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಿ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾಪತ್ತೆಯಾದ ದಿನ ಏನೆಲ್ಲಾ ಆಗಿತ್ತು?

ಮೃತ ಚಂದ್ರಶೇಖರ್ ಅವರು ಅಕ್ಟೋಬರ್ 30ರಂದು ನಾಪತ್ತೆಯಾಗಿದ್ದರು. ಅಂದು ಸಂಜೆಯಿಂದ ಅವರು ಏನೆಲ್ಲಾ ಮಾಡಿದರು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅ 30ರಂದು ಮಹರ್ಶಿ ವಾಲ್ಮೀಕಿಜಯಂತಿಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ್, ಸಂಜೆ 6.28ಕ್ಕೆ ಮನೆಗೆ ಬಂದು ತಂದೆ ರಮೇಶ್​​ಗೆ ಕಾಲ್ ಮಾಡಿದ್ದರು. ನಂತರ ಚಿಕ್ಕಮಗಳೂರಿನ ಗೌರಿ ಗದ್ದೆಗೆ ಹೋಗುತ್ತೆನೆ ಎಂದು ಹೇಳಿ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಶಿವಮೊಗ್ಗಕ್ಕೆ ತೆರಳಿ ಗೆಳೆಯ ಕಿರಣ್​ನನ್ನು ಜೊತೆಗೆ ಕರೆದುಕೊಂಡಿದ್ದರು.

ಗೌರಿಗದ್ದೆಯಿಂದ ರಾತ್ರಿ 11.15ಕ್ಕೆ ಶಿವಮೊಗ್ಗಕ್ಕೆ ಬಂದು ಕಿರಣ್​ನನ್ನು ಇಳಿಸಿದ್ದರು. ಶಿವಮೊಗ್ಗದಿಂದ ಹೊನ್ನಾಳಿ ಕಡೆ ಹೊರಟ ಬಗ್ಗೆ ಉಷಾ ನರ್ಸಿಂಗ್​ ಹೋಂ ಸಿಸಿಟಿವಿಯಲ್ಲಿ ಫೂಟೇಜ್ ಸಿಕ್ಕಿದೆ. ನ್ಯಾಮತಿ ಸಮೀಪದ ಸುರವನ್ನೆಯಲ್ಲಿ ಕಾರ್ ದಾಟಿರುವ ದೃಶ್ಯವಿದೆ. ಅ 31ರ ಬೆಳಿಗ್ಗೆ 6.15ಕ್ಕೆ ಫೋನ್ ಆಫ್ ಆಗಿದೆ. ನ್ಯಾಮತಿಯಿಂದ 10 ಕಿಮೀ ದೂರದ ನಂತರ ಚಂದ್ರ ಅವರ ಫೋನ್​ನ ಲೊಕೇಶನ್ ಮತ್ತು ಕಾರು ಪತ್ತೆಯಾಗಿಲ್ಲ. ಆತಂಕದಿಂದ ಚಂದ್ರು ಅವರನ್ನು ಕುಟುಂಬ ಸದಸ್ಯರು ಹುಡುಕಲು ಆರಂಭಿಸಿ, ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಕಾಲ್ ಡಿಟೇಲ್ ನೋಡಿದಾಗ ಕಿರಣ್​ ನಂಬರ್ ಪತ್ತೆಯಾಗಿತ್ತು. ಅವರು ನಾವಿಬ್ಬರೂ ಗೌರಿಗದ್ದೆಗೆ ಹೋಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಇದೀಗ ಕಿರಣ್​ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕ ರೇಣುಕಾಚಾರ್ಯ ತಮ್ಮನ ಮಗ ಸಾವು; ಇಂದು ಅಂತ್ಯಸಂಸ್ಕಾರ, ತನಿಖೆ ಚುರುಕು, ರಾಜಕೀಯ ದ್ವೇಷದ ಶಂಕೆ ವ್ಯಕ್ತಪಡಿಸಿದ ಕುಟುಂಬ

ಚಂದ್ರಶೇಖರ್ ಸಾವಿನ ಕುರಿತು ದಾಖಲಾಗಿರುವ ಎಫ್​ಐಆರ್

ಚಂದ್ರು-ಕಿರಣ್ ಗೆಳೆತನ

ಚಂದ್ರಶೇಖರ್ ಅವರಿಗೆ ಕಿರಣ್ ಎಂಬಾತ ಗೌರಿಗದ್ದೆಯಲ್ಲಿ 9 ತಿಂಗಳ ಹಿಂದೆ ಪರಿಚಯಾಗಿದ್ದ. ನಂತರದ ದಿನಗಳಲ್ಲಿ ಓಡನಾಟ ಬೆಳೆದಿತ್ತು. ವಿನಯ್ ​​ಗುರುಜೀ ಅವರನ್ನು ಭೇಟಿಯಾಗಲು ಹೋಗುವಾಗ ಕಿರಣ್ ಅವರನ್ನೂ ಚಂದ್ರಶೇಖರ್ ಜೊತೆಗೆ ಕರೆದೊಯ್ಯುತ್ತಿದ್ದರು. ಈತ ಶಿವಮೊಗ್ಗ ಕೋರ್ಟ್​ನಲ್ಲಿ ಡಿ ದರ್ಜೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ.

ಈವರೆಗಿನ ಮಾಹಿತಿ ಇಷ್ಟು

ಅ 30ರ ರಾತ್ರಿ ಬಿಳಿ ಬಣ್ಣದ ಕಾರಿನಲ್ಲಿ ಚಂದ್ರಶೇಖರ್ ಶಿವಮೊಗ್ಗದಿಂದ ಹೊನ್ನಾಳಿಗೆ ಬರುತ್ತಿದ್ದರು. ಈ ವೇಳೆ ಹೊನ್ನಾಳಿ-ಶಿವಮೊಗ್ಗ ಮುಖ್ಯರಸ್ತೆಯ ತುಂಗಾ ನಾಲೆಗೆ ಕಾರು ಉರುಳಿದೆ. ನಾಲೆಗೆ ಬೀಳುವ ಮೊದಲು ರಸ್ತೆಯ ಬಲ‌ಭಾಗದಲ್ಲಿರುವ ಸಣ್ಣ ಕಲ್ಲು ಕಂಬಕ್ಕೆ ಕಾರ್ ಗುದ್ದಿದೆ. ನಂತರ ಇತರ ಉದ್ದನೆಯ ಕಂಬಗಳಿಗೆ ಕಾರ್ ಗುದ್ದಿದೆ. ಬಳಿಕ ತುಂಗಾ ನಾಲೆಗೆ ಉರುಳಿದೆ. ಕಾರ್ ಬಂದಿರುವ ರಭಸಕ್ಕೆ ರಸ್ತೆ ಬದಿ ಹಾಕಿದ್ದ ಎರಡು ಕಲ್ಲು ಕಂಬಗಳ ಮುರಿದಿವೆ.

ಗೃಹ ಸಚಿವರ ಭರವಸೆ

ಚಂದ್ರಶೇಖರ್ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ಮಾಡಿದ್ದರು. ಎಲ್ಲ ಆಯಾಮಗಳಿಂದ ತನಿಖೆ ನಡೆಸುವ ಭರವಸೆ ಕೊಟ್ಟಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ಹತ್ತಾರು ಅನುಮಾನ

ಕ್ರೇಟಾ ಕಾರು ಗ್ಲೋಬಲ್ ಸೇಫ್ಟಿ ಟೆಸ್ಟಿಂಗ್​ನಲ್ಲಿ 3 ಸ್ಟಾರ್ ರೇಟಿಂಗ್ ಪಡೆದಿದೆ. ಬಿಎಸ್ 6 ಮಾಡೆಲ್​ನ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ ಏರ್ ಬ್ಯಾಗ್ ಓಪನ್ ಆಗುವುದಿಲ್ಲ. ಹೀಗಿರುವಾಗ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರೂ ಶವ ಹಿಂಬದಿ ಸೀಟಿನಲ್ಲಿ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾರ್ ಪತ್ತೆ ಮಾಡಿದ್ದು ಡ್ರೋಣ್

ಐದು ದಿನಗಳಿಂದ ಚಂದ್ರಶೇಖರ್ ನಾಪತ್ತೆ ಪ್ರಕರಣವು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಹೊನ್ನಾಳಿ ತಾಲ್ಲೂಕಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ತಂಡವೂ ಶೋಧಕ್ಕೆ ಕೈಹಾಕಿತ್ತು. ಶಿವಮೊಗ್ಗದಿಂದ ಡ್ರೋನ್ ಪಡೆದುಕೊಂಡು ಶೋಧ ಕಾರ್ಯಾಚರಣೆಗೆ ಬಳಸಿದರು. ಮೊದಲು ಕಾರ್ ಬಿಡಿ ಭಾಗ ಪತ್ತೆಯಾಗಿತ್ತು, ನಂತರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಕಾರ್ ಮೇಲೆತ್ತಿಸಿದರು. ಹಿಂಭಾಗದ ಸೀಟ್​ನಲ್ಲಿ ಚಂದ್ರು ಮೃತದೇಹ ಪತ್ತೆಯಾಗಿತ್ತು.

ರೇಣುಕಾಚಾರ್ಯ ನಿವಾಸಕ್ಕೆ ಅಭಿಮಾನಿಗಳ ದಂಡು

ಚಂದ್ರಶೇಖರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಶಾಸಕರ ನಿವಾಸಕ್ಕೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ದಂಡು ಆಗಮಿಸುತ್ತಿದೆ. ಅಂತಿಮ ದರ್ಶನಕ್ಕಾಗಿ ನಿವಾಸದ ಪಕ್ಕದಲ್ಲಿಯೇ ಸಿಬ್ಬಂದಿ ವ್ಯವಸ್ಥೆ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಿವಾಸದಿಂದ ಪಕ್ಕದ ಜಾಗಕ್ಕೆ ಮೃತ ದೇಹವನ್ನು ಸ್ಥಳಾಂತರ ಮಾಡಲಾಗುವುದು. ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಮದ್ಯಾಹ್ನ 2 ಗಂಟೆಯ ಬಳಿಕ ಹುಟ್ಟೂರು ಕೂಲಂಬಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ. ಅಲ್ಲಿಯೇ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಲಿದೆ.

Published On - 9:24 am, Fri, 4 November 22