ದಾವಣಗೆರೆ, ನವೆಂಬರ್ 19: ಕಂದು ಹುಳು ಕಾಟದಿಂದ ಹರಿಹರ (Harihar) ತಾಲೂಕಿನ ರೈತರು (Farmers) ರೋಸಿ ಹೋಗಿದ್ದಾರೆ. ಇಲ್ಲಿನ ರೈತರ ಮೂಲ ಬೆಳೆಯಾದ ತೆಂಗಿಗೆ ಹುಳು ಕಾಟ ಶುರುವಾಗಿದೆ. ಕಂದು ಹುಳುಗಳು ತೆಂಗಿನ ಗರಿಗಳನ್ನು ತಿಂದು ಹಾಳು ಮಾಡುತ್ತವೆ. ಇದರಿಂದ, ಕೈಗೆ ಬಂದ ಬಳೆ ಬಾಯಿಗೆ ಬರದಂತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ರೈತರಿಗೆ ಇದೇ ಬಾಧೆಯಾಗಿದೆ. ಅಲ್ಲದೇ ಈ ಕಂದು ಹುಳುಗಳು ದಿನಕ್ಕೆ ಸಾವಿರಾರು ಮೊಟ್ಟೆ ಹಾಕುವುದರಿಂದ, ಇವುಗಳ ಸಂತತಿ ಅಧಿಕವಾಗುತ್ತ ಹೋಗುತ್ತದೆ. ಇದರಿಂದ, ಬೆಳೆಗಳು ನಾಶವಾಗುತ್ತವೆ.
ಈ ಹುಳುಗಳನ್ನು ನಿಯಂತ್ರಿಸಲು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧಿ ಹಾಕಿದರೂ, ಯಾವುದೇ ಪ್ರಯೋಜನವಾಗಿಲ್ಲ. ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು, ತೋಟಗಾರಿಕಾ ಇಲಾಖೆ ಮುಂದಾಗಿ, ಕಂದು ಹುಳು ತಿಂದು ಹಾಕುವ ಮತ್ತೊಂದು ಹುಳು ಅಭಿವೃದ್ಧಿ ಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ರೈತರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಈರುಳ್ಳಿ ಬೆಲೆ ದಿಢೀರ್ ಇಳಿಕೆ, ಕ್ವಿಂಟಾಲ್ಗೆ 4000 ಇದ್ದ ದರ 2000 ರೂ.ಗೆ ಕುಸಿತ, ರೈತರು ಕಂಗಾಲು
ಹೌದು, ಕಂದು ಹುಳುಗಳನ್ನು ನಾಶಕ್ಕೆ ತೋಟಗಾರಿಕೆ ಇಲಾಖೆ ಅಭಿವೃದ್ಧಿ ಪಡಿಸಿರುವ ಹುಳವನ್ನು ಬಿಟ್ಟರೂ, ಅಷ್ಟೊಂದು ಪ್ರಯೋಜನವಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಕಂದು ಹುಳು ಕಾಟದಿಂದ 10 ಸಾವಿರ ಕಾಯಿ ಬೆಳೆಯವ ತೋಟದಲ್ಲಿ, 3 ಸಾವಿರ ಕಾಯಿ ಬೆಳೆಯುತ್ತಿವೆ. ಶೇ70ರಷ್ಟು ಇಳುವರಿಗೆ ಹೊಡೆತ ಬಿದ್ದಿದೆ.
ಹೀಗಾಗಿ ತೆಂಗು ಬೆಳೆಗಾರರು ಬಂದಷ್ಟು ಬರಲು ಅಂತ ಸುಮ್ಮನಾಗಿದ್ದಾರೆ. ಕೆಲವರು ತೆಂಗಿನ ತೋಟಗಳನ್ನ ತೆಗೆದು ಅಡಿಕೆ ಮತ್ತು ಭತ್ತ ಬೆಳೆಯುತ್ತಿದ್ದಾರೆ. ಇನ್ನೂ ಕೆಲವರು ನಗರ ಪ್ರದೇಶಕ್ಕೆ ಹತ್ತಿರವಿದ್ದ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ವಿಜ್ಞಾನ ಇಷ್ಟು ಬೆಳೆದರೂ ಕಂದು ಬಣ್ಣದ ಹುಳು ನಿಯಂತ್ರಣಕ್ಕೆ ಸಾಧ್ಯವಾಗುತ್ತಿಲ್ಲ ಎಂಬುವುದೇ ಆತಂಕದ ವಿಚಾರ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ