ದಾವಣಗೆರೆ, ಜೂ.20: ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮ, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ವಿದ್ಯಾವಂತರು, ಬುದ್ದಿವಂತರು ಜೊತೆಗೆ ಅಡಿಕೆ, ತೆಂಗು ಸೇರಿದಂತೆ ವಾಣಿಜ್ಯ ಬೆಳೆ ಬೆಳೆಯುವ ರೈತರು ಇಲ್ಲಿದ್ದಾರೆ. ಬಹುತೇಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಇಂತಹ ಗ್ರಾಮದ ಗ್ರಾಮಸ್ಥರ ನೆಮ್ಮದಿ ಇದೀಗ ನೋಣಗಳಿಂದ ಹಾಳಾಗಿದೆ. ಹೌದು, ಎಲ್ಲಿ ನೋಡಿದರಲ್ಲಿ ನೊಣಗಳು ತುಂಬಿಕೊಂಡಿವೆ. ಪ್ರತಿವರ್ಷ ಮಳೆಗಾಲ ಬಂದರೆ ಸಾಕು ಮೂರರಿಂದ ಐದು ತಿಂಗಳುಗಳ ಕಾಲ ಗ್ರಾಮದ ಜನರು ಹಿಂಸೆ ಅನುಭವಿಸಬೇಕು. ಎಲ್ಲಿ ಹೋದರೂ ನೊಣಗಳು ತುಂಬಿಕೊಂಡು ಜನರನ್ನು ಕಾಡುತ್ತಿವೆ. ಇದೀಗ ಬೇಸತ್ತ ಈ ಗ್ರಾಮದ ಜನರು ಆ ಸಮಸ್ಯೆಯನ್ನು ಬಗೆಹರಿಸಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಗ್ರಾಮದಲ್ಲಿ ಈ ರೀತಿಯ ನೋಣ ಕಂಡು ಬಂದಿದ್ದು 2014ರಲ್ಲಿ. ಇದಕ್ಕೆ ಕಾರಣವೇ ಗ್ರಾಮದ ಅಕ್ಕ-ಪಕ್ಕದಲ್ಲಿ ನಿರ್ಮಾಣವಾದ ಕೋಳಿ ಫಾರ್ಮಗಳು. ಬಹುತೇಕರು ಆಂಧ್ರಪ್ರದೇಶ ಮೂಲದವರು ಹತ್ತಾರು ವರ್ಷಗಳಿಂದ ಇಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದಾರೆ. ಇವರು ಪ್ರಭಾವಿಗಳಾಗಿದ್ದು, ಯಾರಿಗೆ ಭೇಟಿ ಆಗಬೇಕು ಅವರಿಗೆ ಭೇಟಿ ಆದರೆ ಸಾಕು ಕೆಲಸ ಆಗುತ್ತದೆ ಎಂದು ಹೋರಾಟ ಮಾಡುವ ಗ್ರಾಮಸ್ಥರಿಗೆ ಬೆದರಿಸುತ್ತಿದ್ದಾರೆ. ಆಯಾ ಕಾಲಕ್ಕೆ ಇದ್ದ ತಹಶೀಲ್ದಾರ್ರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದ್ರೆ ಕ್ರಮ ಮಾತ್ರ ಆಗಿಯೇ ಇಲ್ಲ.
ಇದನ್ನೂ ಓದಿ:ನೊಣಗಳ ಕಾಟದಿಂದ ಬೇಸತ್ತಿದ್ದೀರಾ?; ಹೀಗೆ ಮಾಡಿ ನೋಡಿ
ಇದೀಗ ಮತ್ತೆ ಮಳೆಗಾಲ ಶುರುವಾಗಿದೆ. ಗ್ರಾಮದಲ್ಲಿ ಇರುವುದೇ ಕಷ್ಟದ ಕೆಲಸವಾಗಿದೆ. ಈ ಸಲ ಇದಕ್ಕೊಂದು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂವಿ ವೆಂಕಟೇಶ್ ಸ್ಪಷ್ಟ ಪಡಿಸಿದ್ದಾರೆ. ಹೀಗೆ ನೊಣಗಳ ಕಾಟಕ್ಕೆ ನಿರಂತರವಾಗಿ ಬಳಲುತ್ತಿರುವ ಗ್ರಾಮದ ಬಹುತೇಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕೂಲಿ ನಾಲಿ ಮಾಡಿ ಬದುಕುವ ಜನರು ಸಹ ಇಲ್ಲಿದ್ದಾರೆ. ಮನೆ ನಿರ್ವಹಣೆಗಾಗಿ ದುಡಿದ ಹಣವನ್ನೆಲ್ಲ ಆಸ್ಪತ್ರೆಗೆ ಹಾಕುವುದರ ಜೊತೆಗೆ ಅನಾರೋಗ್ಯದ ಹಿನ್ನೆಲೆ ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಇಂತಹ ಗಂಭೀರ ವಿಚಾರವನ್ನ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ