ದಾವಣಗೆರೆ: ನಾನು ಕರೆಪ್ಟ್ (corruption) ಎಂದು ನನ್ನ ವಿರುದ್ಧ ಮಾತುಗಳು ಕೇಳಿಬರುತ್ತಿವೆ. ಇಂತಹ ಆರೋಪಗಳ ಬಗ್ಗೆ ಸ್ಪಷ್ಟವಾಗಿ ನಾನು ಹೇಳೋದು ಇಷ್ಟೇ… ನಾನು ಆರೋಪಗಳನ್ನು ಆರೋಗ್ಯಕರವಾಗಿ ತೆಗೆದುಕೊಳ್ಳುತ್ತೇನೆ. ಸಮಾಜದ ನಡುವೆ ಕೆಲಸ ಮಾಡುವವನು ನಾನು. ಯಾರೋ ಕರೆಪ್ಟ್ ಅಂತಾ ಹೇಳಿದ ತಕ್ಷಣ ನಾನು ಕರೆಪ್ಟ್ ಆಗುವುದಕ್ಕೆ ಸಾಧ್ಯವಿಲ್ಲ ಎಂದು ದಾವಣಗೆರೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ (kodihalli chandrashekar) ಹೇಳಿದ್ದಾರೆ.
ನಾನು ಮಾನಸಿಕವಾಗಿ ಮೊದಲು ಕರೆಪ್ಟ್ ಆಗಬೇಕು. ನಂತರ ವ್ಯಕ್ತಿಗತವಾಗಿ ಕರೆಪ್ಟ್ ಆಗಬೇಕು. ನಾನು ಕರೆಪ್ಟ್ ಆಗದೇ ತಿಂಗಳುಗಟ್ಟಲೇ ನೀವು ಹೇಳುತ್ತಿದ್ರೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ ಅಂತಷ್ಟೇ. ಆದ್ರೆ ನಾನು ಬದುಕಿರುವವರೆಗೂ ಕರೆಪ್ಟ್ ಅಗೋಕ್ಕೆ ಸಾಧ್ಯವಿಲ್ಲ; ಪ್ರಾಮಾಣಿಕವಾಗಿ ಬದುಕಿ ಸಾಯುತ್ತೇನೆ. ಯಾವುದೋ ರಾಜಕೀಯ ಪಕ್ಷದ ಮುಖವಾಣಿಯಾಗಿ ಯಾವುದೋ ಚಾನಲ್ ಗಳು ಕೆಲಸ ಮಾಡೋದಾದ್ರೆ.. ನೀವು ಕೂಡ ನಿಮ್ಮ ದಾರಿ ಸರಿಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಬೇಕಾಗುತ್ತದೆ ನಾನು. ನಾನು ಕೂಡ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ದೂರು ಕೊಟ್ಟಿದ್ದೇನೆ. ಇದನ್ನು ಸಂಪೂರ್ಣ ತನಿಖೆ ಮಾಡಿ. ಯಾರೋ ಕರೆಪ್ಟ್ ಇದಾರೋ ಅದರ ಬಗ್ಗೆ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಿ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಿ. ಇದರಲ್ಲಿ ಸರ್ಕಾರ, ಬೇರೆ ರಾಜಕೀಯ ಪಕ್ಷಗಳ ಸ್ಟ್ರಾಟಜಿ ಇದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ.
ಏಪ್ರಿಲ್ 21 ನೇ ತಾರಿಖು ಬಸವನಗುಡಿ ಮೈದಾನದಲ್ಲಿ ನಾನು ಘೋಷಣೆ ಮಾಡಿದ ರಾಜಕೀಯ ನಿಲುವುಗಳು ಕರ್ನಾಟಕದ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿತು. ನಾವು ಭ್ರಷ್ಟಾಚಾರ ಮುಕ್ತ ಆಳ್ವಿಕೆ ನೀಡುವ ಬಗ್ಗೆ ಎಎಪಿ ಜೊತೆ ಕೈಜೋಡಿಸಿದ ನಂತರ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಭ್ರಷ್ಟನಾದವನಿಗೆ ಭಯ ಇರುತ್ತೇ, ಕ್ಲಿಯರ್ ಆಗಿರುವವನಿಗೆ ಭಯ ಇರೋದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ರೈತ ಚಳುವಳಿ 42 ವರ್ಷ ಕಳೆಯುತ್ತಿದೆ. ನವಲಗುಂದ ನರಗುಂದದಲ್ಲಿ ರೈತರ ಹುತಾತ್ಮರ ಕಾರ್ಯಕ್ರಮ ನಡೆಸುತ್ತೇವೆ. ಇದುವರೆಗೆ 154 ಜನ ರೈತರು ಹುತಾತ್ಮ ಆಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಹುತಾತ್ಮ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.