ಬೆಂಗಳೂರು: BWSSB ವಾಲ್ ಚೇಂಬರ್ಗೆ ಬಿದ್ದಿದ್ದ ಕಾರ್ಮಿಕ ದುರ್ಮರಣನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬರದಿದ್ದಕ್ಕೆ ಕಾರ್ಮಿಕ ಸಾವನ್ನಪ್ಪಿದ್ದಾರೆ. ವಾಲ್ ಚೇಂಬರ್ಗೆ ಬಿದ್ದಿದ್ದ ಮೋಹನ್ (31) ದುರ್ಮರಣವನ್ನಪ್ಪಿದ್ದಾರೆ. ಆಟೋದಲ್ಲಿ ಬೌರಿಂಗ್ ಆಸ್ಪತ್ರೆಗೆ ಸಾಗಿಸುವಾಗ ಕಾರ್ಮಿಕ ಮೃತಪಟ್ಟಿದ್ದಾರೆ.
ಸುಮಾರು 20 ನಿಮಿಷ ಕಾದರೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂ. 6 ಬಳಿಯ ಚೇಂಬರ್ ಸಮೀಪಕ್ಕೆ ಆಂಬುಲೆನ್ಸ್ ಬಂದಿರಲಿಲ್ಲ. ಪ್ರಜ್ಞೆ ತಪ್ಪಿ ವಾಲ್ ಚೇಂಬರ್ನಲ್ಲಿ ಮೋಹನ್ ಕುಸಿದುಬಿದ್ದಿದ್ದರು. BWSSB ನೀರಿನ ವಾಲ್ ತಿರುಗಿಸಲು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ದಾವಣಗೆರೆ: ಮಾಂಗಲ್ಯ ಕಸಿದು ಪರಾರಿ ಆಗುತ್ತಿದ್ದ 7 ಮಂದಿ ಬಂಧನ
ಮಹಿಳೆ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದವರನ್ನು ಬಂಧಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಕ್ರೂಸರ್ ವಾಹನದಲ್ಲಿ ಪರಾರಿಯಾಗುತ್ತಿದ್ದ 7 ಜನರನ್ನು ಬಂಧಿಸಲಾಗಿದೆ. ಲಿಂಗದಹಳ್ಳಿ ಬಳಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಲ್ಕುದುರೆ ಗ್ರಾಮದ ಬಳಿ ಮಹಿಳೆ ಸರ ಕದ್ದು ಆರೋಪಿಗಳು ಎಸ್ಕೇಪ್ ಆಗಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಬಳಿ ಘಟನೆ ನಡೆದಿತ್ತು.
ಬಳಿಕ ಆರೋಪಿಗಳನ್ನು ಬೆನ್ನಟ್ಟಿದ ಚನ್ನಗಿರಿ ಠಾಣೆಯ ಪೊಲೀಸರು, ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಂಧಿತ ಆರೋಪಿಗಳಿಂದ ಚಿನ್ನದ ಸರ, ನಕಲಿ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ದಂಡು ರೈಲ್ವೇ ಪೊಲೀಸರಿಂದ ಎರಡು ಪ್ರತ್ಯೇಕ ಪ್ರಕರಣದ ಆರೋಪಿಗಳ ಸೆರೆ
ರೈಲಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ರೈಲ್ವೇ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ದಂಡು ರೈಲ್ವೆ ಪೊಲೀಸರಿಂದ ಆರೋಪಿ ಬಂಧನವಾಗಿದೆ. ವ್ಯಕ್ತಿಯ ವಿಚಾರಣೆ ವೇಳೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ವಿಜಯ್‌ನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. 8 ತಿಂಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣ ಬಯಲಾಗಿದೆ. ಮಾ. 24 ರಂದು ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳತನ ಮಾಡಿ, 1.40 ಲಕ್ಷ ಮೌಲ್ಯದ ಚಿನ್ನದ ಚೈನು ಕಳ್ಳತನ ಮಾಡಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಯುವಕನನ್ನ ಹತ್ಯೆಗೈದಿದ್ದ ಆರೋಪಿಗಳನ್ನು ಬೆಂಗಳೂರು ದಂಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಸಾದಿಕ್ ಸೇರಿ ನಾಲ್ವರು ಆರೋಪಿಗಳ ಬಂಧನವಾಗಿದೆ. ನ.10 ರಂದು ಸುನಿಲ್ ಹತ್ಯೆ ಮಾಡಿದ್ದ ಹೈದರ್ & ಟೀಮ್, ಕೊಲೆ ಮಾಡಿ ಮೃತನನ್ನು ರೈಲ್ವೆ ಹಳಿ ಮೇಲೆ ಹಾಕಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ.
ನೆಲಮಂಗಲ: ಜೋಳದ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಗಳ ಸೆರೆ
ಜೋಳದ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿಗಳಿಬ್ಬರನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಭೈರೇಗೌಡನಹಳ್ಳಿಯಲ್ಲಿ ಹನುಮಂತರಾಯಪ್ಪ, ನಾಗರಾಜು ಎಂಬವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 2 ಕೆಜಿಗೂ ಹೆಚ್ಚು ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಡ್ಯಾಂ ಗೇಟ್ ತೆರೆಯುವಾಗ ನೀರಲ್ಲಿ ಕೊಚ್ಚಿಹೋದ ಕಾರ್ಮಿಕರು ಅದೃಷ್ಟವಷಾತ್ ಪಾರು
ಡ್ಯಾಂ ಗೇಟ್ ತೆಗೆಯುವಾಗ ಕಾರ್ಮಿಕರು ನೀರಲ್ಲಿ ಕೊಚ್ಚಿಹೋದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಬಳಿಯ ಮಾರ್ಕೋನಹಳ್ಳಿ ಡ್ಯಾಂ ಬಳಿ ನಡೆದಿದೆ. ಅದೃಷ್ಟವಶಾತ್ ಇಬ್ಬರು ಕಾರ್ಮಿಕರು ಕೂಡ ಅಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ತುಂಬಿದ ಮಾರ್ಕೋನಹಳ್ಳಿ ಜಲಾಶಯದ ಬಳಿ ದುರ್ಘಟನೆ ಸಂಭವಿಸಿದೆ.
ಮೈಸೂರು: ಸರ್ಕಾರಿ ಬಸ್‌ನಿಂದ ಬಿದ್ದು ವಿಕಲಚೇತನ ಯುವತಿ ಸಾವು
KSRTC ಬಸ್‌ನಿಂದ ಬಿದ್ದು ವಿಶೇಷಚೇತನ ಯುವತಿ ಸಾವನ್ನಪ್ಪಿದ ದುರ್ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿ ಯುವತಿ ಚಂದನಾ (17) ಸಾವನ್ನಪ್ಪಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಜನರ ಆಕ್ರೋಶ ಕೇಳಿಬಂದಿದೆ. ರಸ್ತೆ ತಡೆ ನಡೆಸಿ ಹುಸ್ಕೂರು ಗ್ರಾಮಸ್ಥರಿಂದ ಪ್ರತಿಭಟನೆ ಮಾಡಲಾಗಿದೆ.
ರಾಯಚೂರು: ಬಸ್ ಡಿಕ್ಕಿಯಾಗಿ ತಂದೆ ಮಗ ಸಾವು
ಬಸ್ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳ್ತಿದ್ದ ಅಪ್ಪ, ಮಗ ಸಾವನ್ನಪ್ಪಿದ ದಾರುಣ ಘಟನೆ ರಾಯಚೂರಿನ ಗಬ್ಬೂರ್ ಕ್ರಾಸ್ ಬಳಿ ನಡೆದಿದೆ. ಭೀಕರ ಅಪಘಾತದಲ್ಲಿ ವಿಜಯಾನಂದ (28) ಹಾಗೂ ಮಗ ಮಲ್ಲಿಕಾರ್ಜುನ (7) ಸಾವನ್ನಪ್ಪಿದ್ದಾರೆ. ಮೃತರು ರಾಯಚೂರು ತಾಲೂಕಿನ ಅತ್ತನೂರು ನಿವಾಸಿಗಳು ಎಂದು ತಿಳಿದುಬಂದಿದೆ. ರಾಯಚೂರಿನಿಂದ ಅತ್ತನೂರಿಗೆ ಹೊರಟಿದ್ದ ತಂದೆ, ಮಗನ ಬೈಕ್ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತ ಬಳಿಕ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮನೆ ಮನೆ ಸುತ್ತಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; ಬಂಧಿತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ
ಇದನ್ನೂ ಓದಿ: Crime News: ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ; 6 ಆರೋಪಿಗಳ ಬಂಧನ