ರಾಜ್ಯದ ರೈತರಿಗೆ ಲೈಪ್ ಇನ್ಸೂರೆನ್ಸ್, ಮರಣ ಹೊಂದಿದರೆ 2 ಲಕ್ಷ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ

|

Updated on: Mar 17, 2023 | 9:58 PM

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಜವಾದ ಸಾಮಾಜಿಕ ನ್ಯಾಯ ಕೊಟ್ಟವರಾಗಿದ್ದಾರೆ. ಭಾಗ್ಯ ಲಕ್ಷ್ಮೀ ಯೋಜನೆ, ಕಾಗಿನೆಲೆ ಅಭಿವೃದ್ಧಿ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪನವರು ಎಂದು ಸಿಎಂ ಬೊಮ್ಮಾಯಿಯವರು ದಾವಣಗೆರೆಯಲ್ಲಿ ಯಡಿಯೂರಪ್ಪ ಅವರ ಸಾಧನೆಗಳನ್ನು ಹೊಗಳಿದರು.

ರಾಜ್ಯದ ರೈತರಿಗೆ ಲೈಪ್ ಇನ್ಸೂರೆನ್ಸ್, ಮರಣ ಹೊಂದಿದರೆ 2 ಲಕ್ಷ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಎಂಪಿ ರೇಣುಕಾಚಾರ್ಯ
Follow us on

ದಾವಣಗೆರೆ: ಈ ವರ್ಷ ಪ್ರತಿ ರೈತ ಕುಟುಂಬಕ್ಕೆ ಇನ್ಸೂರೆನ್ಸ್ ಮಾಡಿಸಲು ನಮ್ಮ ಸರ್ಕಾರ 180 ಕೋಟಿ ರೂ. ಹಣ ಕಾಯ್ದಿರಿಸಿದೆ. ಸಹಜ ಮರಣ ಹೊಂದಿದರೂ ಎರಡು ಲಕ್ಷ ರೂ. ಇನ್ಸೂರೆನ್ಸ್ ಹಣ ರೈತರಿಗೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಹೊನ್ನಾಳಿ ನಗರದಲ್ಲಿ ಶುಕ್ರವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಕೈಗೊಂಡಿರುವ ರೂ.1933 ಕೋಟಿ ಮೊತ್ತದ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ, ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಎಲ್ಲ ರಂಗಗಳಲ್ಲಿ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಡಿಸೈಲ್ ಸಬ್ಸಿಡಿ ಯೋಜನೆ ಜಾರಿಗೆ ತರಲಾಗಿದೆ. ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸಲಾಗಿದೆ ಎಂದರು.

ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ರಾಜ್ಯದ 25 ಲಕ್ಷ ಮನೆಗಳಿಗೆ ಮಾತ್ರ ನಳದ ನೀರು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ ನಮ್ಮ ಸರ್ಕಾರ ರಾಜ್ಯದ 40 ಲಕ್ಷ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿದೆ. ಬರುವ ದಿನಗಳಲ್ಲಿ 1.10 ಕೋಟಿ ಮನೆಗಳಿಗೆ ನಳದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಪ್ರತಿ ಮನೆಗೆ ಪ್ರತಿ ವ್ಯಕ್ತಿಗೆ 50 ಲೀಟರ್ ನೀರು ನೀಡುವುದಾಗಿ ಹೇಳಿದ್ದರು. ಇಂದು ಇಡಿ ದೇಶದಲ್ಲಿ 12 ಕೋಟಿ ಮನೆಗಳಿಗೆ ನಳದ ನೀರು ನೀಡಿದ್ದಾರೆ. ದೇಶದ 130 ಕೋಟಿ ಜನಸಂಖ್ಯೆಗೆ ಪ್ರತಿದಿನ ಪ್ರತಿ ಮನೆಗೆ ಕುಡಿಯುವ ನೀರು ಒದಗಸುವುದು ಕಷ್ಟವಾದ ಕೆಲಸವಾಗಿದರೂ ಕೊಟ್ಟ ಮಾತಿನಂತೆ ನಡೆದುಕೊಂಡು ಯಾವ ಪ್ರಧಾನಮಂತ್ರಿಗಳು ಮಾಡದ ಕೆಲಸವನ್ನು ಮೋದಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಚುನಾವಣೆಗೋಸ್ಕರ ರಾಜಕಾರಣ ಮಾಡುವವರು ಬೆಕಾದಷ್ಟಿದ್ದಾರೆ ಎಂದು ಸಿಎಂ ಬೊಮ್ಮಾಯಿ, ಇದಕ್ಕೆ ‘ಅವರು ಕಳ್ಳರು ಕಳ್ಳರು’ ಎಂದ ಸಭಿಕ

ಸ್ತ್ರೀ ಶಕ್ತಿ ಸಂಘಕ್ಕೆ ಸ್ತ್ರೀ ಶಕ್ತಿ ಸಾಮಥ್ರ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎರಡು ಸಂಘಗಳಿಗೆ 5ಲಕ್ಷ ರೂ. ನೀಡಿ ಉತ್ಪಾದನೆ, ಮಾರುಕಟ್ಟೆ ಹಾಗೂ ಮಾರಾಟ ಸೌಲಭ್ಯ ಒದಗಿಸಲಾಗಿದೆ. ಅದೇ ರೀತಿ ಯುವ ಶಕ್ತಿ ಯೋಜನೆಯಡಿ ಯುವಕ ಸಂಘಗಳಿಗೆ 5 ಲಕ್ಷ ರೂ. ನೀಡಲಾಗುತ್ತಿದೆ ಎಂದು ಸಿಎಂ ಹೇಳಿದರು. ರೈತರಿಗೆ ಮತ್ತು ರೈತ ಮಕ್ಕಳಿಗೆ ಶಕ್ತಿ ತುಂಬಲು ರಾಜ್ಯದ 13 ಲಕ್ಷ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಬ್ಯಾಂಕ್ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅತಿವೃಷ್ಟಿ ಬೆಳೆಹಾನಿ ಪರಿಹಾರ ದ್ವಿಗುಣ ಮಾಡಲಾಗಿದೆ. ನೀರಾವರಿ ಬೆಳೆಗೆ ಕೇಂದ್ರ 15 ಸಾವಿರ ರೂ., ರಾಜ್ಯ ಸರ್ಕಾರ 25 ಸಾವಿರ ರೂ. ನೀಡಿದೆ. ರಾಜ್ಯದ 4 ಲಕ್ಷ ರೈತರಿಗೆ 3 ಸಾವಿರ ಕೋಟಿ ರೂ. ಮೊತ್ತವನ್ನು ಒಂದು ತಿಂಗಳಲ್ಲಿ ನೀಡಿದ್ದು ಡಬಲ್ ಇಂಜಿನ್ ಸರ್ಕಾರ ಎಂದರು.

ನಿಜವಾದ ಸಾಮಾಜಿಕ ನ್ಯಾಯ ಕೊಟ್ಟವರು ಯಡಿಯೂರಪ್ಪ: ಸಿಎಂ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಜವಾದ ಸಾಮಾಜಿಕ ನ್ಯಾಯ ಕೊಟ್ಟವರಾಗಿದ್ದಾರೆ. ಭಾಗ್ಯ ಲಕ್ಷ್ಮೀ ಯೋಜನೆ, ಕಾಗಿನೆಲೆ ಅಭಿವೃದ್ಧಿ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪನವರು ಎಂದು ಸಿಎಂ ಬೊಮ್ಮಾಯಿ ಯಡಿಯೂರಪ್ಪ ಅವರ ಸಾಧನೆಗಳನ್ನು ಹೊಗಳಿದರು. ಅಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಿಸುವ ಸಂದರ್ಭದಲ್ಲಿ ಜೇನುಗೂಡಿಗೆ ಕೈಹಾಕಿದಂತೆ ಎಂದು ಹೇಳುತ್ತಿದ್ದರು. ಆದರೆ ಧ್ವನಿ ಇಲ್ಲದ ಹಾಗೂ ನೆಲೆ ಇಲ್ಲದ ಜನಾಂಗಕ್ಕೆ ಜೇನು ತುಪ್ಪ ಕೊಡುವ ದಿಟ್ಟ ಹೆಜ್ಜೆ ಇಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ನೋಡಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮತ ನೀಡಬೇಕು ಎಂದು ಹೇಳಿದರು.

ಇಂತಹ ದಾಖಲೆ ಮಾಡುವ ತಾಕತ್ತು ಹೊನ್ನಾಳಿ ಹುಲಿಗೆ ಮಾತ್ರ ಇದೆ: ಸಿಎಂ ಬೊಮ್ಮಾಯಿ

ಹೊನ್ನಾಳಿಯಲ್ಲಿ ಇವತ್ತು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಈ ಕ್ಷೇತ್ರದಲ್ಲಿ ರೇಣುಕಾಚಾರ್ಯರ ಪ್ರಯತ್ನದಿಂದ 1993 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದೊಂದು ದಾಖಲೆ. ಇಂತಹ ದಾಖಲೆ ಮಾಡುವ ತಾಕತ್ತು ಹೊನ್ನಾಳಿ ಹುಲಿಗೆ ಮಾತ್ರ ಇದೆ. ರೇಣುಕಾಚಾರ್ಯ ಈ ಕ್ಷೇತ್ರವನ್ನು ಮತ್ತು ಇಲ್ಲಿಯ ಜನರನ್ನು ಮಕ್ಕಳ ಪ್ರೀತಿ ಮಾಡುತ್ತಾರೆ. ಕೊರೋನಾ ಸಮಯದಲ್ಲಿ ನಿಮ್ಮೊಂದಿಗೆ ಇದ್ದು ಆತ್ಮಸ್ಥೈರ್ಯ ತುಂಬಿದ ನಾಯಕ. ಹೊನ್ನಾಳಿ-ನ್ಯಾಮತಿ ಚಿತ್ರಣ ಬದಲಾವಣೆ ಮಾಡಿದ್ದಾರೆ. ದಾಖಲೆ ಪ್ರಮಾಣದಲ್ಲಿ ಸೇವೆ ಮಾಡಿದ್ದಾರೆ. ಒಂದು ಹಳ್ಳಿಗೆ ಹತ್ತತ್ತು ಬಾರಿ ರೇಣುಕಾಚಾರ್ಯ ಬಂದಿದ್ದಾರೆ. ಇವರು ಜನೋಪಯೋಗಿ ಶಾಸಕರಾಗಿದ್ದಾರೆ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನನ್ನ ಹಾಗೂ ಬೊಮ್ಮಾಯಿ ಅವರ ಅವಧಿಯಲ್ಲಿ ಎಂ.ಪಿ. ರೇಣುಕಾಚಾರ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಿದ್ದು, ಸಾವಿರಾರು ಕೋಟಿ ತಂದು ಅಭಿವೃದ್ಧಿ ಮಾಡಿದ್ದಾರೆ. ಈ ಕ್ಷೇತ್ರದ ಜನತೆ ರೇಣುಕಾಚಾರ್ಯರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಗ್ರೀನ್ ಸಿಗ್ನಲ್

ರೇಣುಕಾಚಾರ್ಯ ಅವರು ಮಾತನಾಡಿ, ಈ ಕ್ಷೇತ್ರಕ್ಕೆ ರೂ.4,500 ಕೋಟಿ ಅನುದಾನ ತಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಅಭಿವೃದ್ಧಿ ಮಾಡಲಾಗಿದೆ. ಸೇತುವೆ, ಶಾಲೆ-ಕಾಲೇಜು, ಕುಡಿಯುವ ನೀರು, ಧೂಳು ಮುಕ್ತ ರಸ್ತೆ, ಚರಂಡಿಗೆ ಸಾವಿರಾರು ಕೋಟಿ ನೀರಿಗೆ ವೆಚ್ಚ ಮಾಡಲಾಗಿದೆ. ಅವಳಿ ತಾಲೂಕುಗಳಿಗೆ ಚುತುಸ್ಪಥ ರಸ್ತೆಯಾಗಿದೆ. ಸಿ.ಎಂ. ಬಸವರಾಜ ಬೊಮ್ಮಾಯಿ ಅವರು 250 ಹಾಸಿಗೆ ಆಸ್ಪತ್ರೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ ಶೇ.17ಕ್ಕೆ , ಪರಿಶಿಷ್ಟ ವರ್ಗ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ. ಸೇವಾಲಾಲ ಜಯಂತಿ, ವಾಲ್ಮೀಕಿ ಜಯಂತಿ ಹಾಗೂ ಕನಕ ಜಯಂತಿ ಘೋಷಣೆ ಮಾಡಿದ್ದು ಯಡಿಯೂರಪ್ಪನವರು. ಕಳೆದ ಸಾಲಿನಲ್ಲಿ ಯಡಿಯೂರಪ್ಪ ಅವರು ಮನೆಗಳಿಗೆ 5 ಲಕ್ಷ ಮತ್ತು 3 ಲಕ್ಷ ರೂ. ನೀಡಿದ್ದರು. ಈ ಸಾಲಿನಲ್ಲಿ ಬಸವರಾಜ ಬೊಮ್ಮಾಯಿ ಅವರು 4,500 ಮನೆಗಳಿಗೆ 151 ಕೋಟಿ ರೂ. ಅನುದಾನ ನೀಡಿದ್ದಾರೆ. ಅತಿವೃಷ್ಟಿ ಸಮಯದಲ್ಲಿ ನಾನು ಒಂದು ತಿಂಗಳು ಮಲಗಿಲ್ಲ, ಮನೆ ಮನೆಗೆ ಭೇಟಿ ನೀಡಿ ನೋಂದವರ ಕಣ್ಣೀರು ಒರೆಸಿದ್ದೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:53 pm, Fri, 17 March 23