ಚುನಾವಣೆಗೋಸ್ಕರ ರಾಜಕಾರಣ ಮಾಡುವವರು ಬೆಕಾದಷ್ಟಿದ್ದಾರೆ ಎಂದು ಸಿಎಂ ಬೊಮ್ಮಾಯಿ, ಇದಕ್ಕೆ ‘ಅವರು ಕಳ್ಳರು ಕಳ್ಳರು’ ಎಂದ ಸಭಿಕ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಲೂಕು ಆಡಳಿತಸೌಧ, ಬಾಲಕಿಯರ ಹಾಸ್ಟೆಲ್, ವಸತಿ ಶಾಲೆ, ಪರಿವೀಕ್ಷಣಾ ಮಂದಿರ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮವು ಸಿಎಂ ಬೊಮ್ಮಾಯಿ ಮತ್ತು ಸಭಿಕರೊಬ್ಬರ ನಡುವಿನ ಹಾಸ್ಯ ಘಟನೆಗೆ ಸಾಕ್ಷಿಯೂ ಆಯಿತು.
ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರನ್ನು ಹೊಗಳುತ್ತಿದ್ದಾಗ ‘ಹೌದು ಹುಲಿಯಾ’ ಎಂದು ಕಾರ್ಯಕರ್ತನೊಬ್ಬ ಹೇಳಿರುವುದು ಭಾರೀ ವೈರಲ್ ಆಗಿತ್ತು. ಇದೀಗ ಇಂತಹದ್ದೇ ಪ್ರಸಂಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಕಾರ್ಯಕ್ರಮದಲ್ಲಿ ನಡೆದಿದೆ. ಆದರೆ ಇದು ರಾಜಕೀಯವಾಗಿ ತೆಗಳುತ್ತಿರುವಾಗ ಬಂದ ಸಭಿಕನಿಂದ ಬಂದ ಉತ್ತರವಾಗಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಿದ ನಂತರ ಭಾಷಣ ಮಾಡುತ್ತಿದ್ದ ಬೊಮ್ಮಾಯಿ, ಚುನಾವಣೆಗೋಸ್ಕರ ರಾಜಕಾರಣ ಮಾಡುವವರು ಬೇಕಾದಷ್ಟಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ನೆರೆದಿದ್ದ ಸಭೆಯಲ್ಲೊಬ್ಬ ‘ಅವರು ಕಳ್ಳರು ಕಳ್ಳರು’ ಎಂದು ಹೇಳಿದ್ದಾನೆ. ಇದಕ್ಕೆ ಹೌದು ಸರಿಯಾಗಿ ಹೇಳಿದೆ ಎಂದು ಸಿಎಂ ಮರು ಉತ್ತರಿಸಿದ ಪ್ರಸಂಗ ನಡೆಯಿತು.
ಚಿಕ್ಕನಾಯಕನಹಳ್ಳಿಯಿಂದ ದೊಡ್ಡನಾಯಕನನ್ನ ಆರಿಸಿ ತಂದ ನಿಮಗೆಲ್ಲರಿಗೂ ಧನ್ಯವಾದಗಳು. ನನ್ನ ಹಾಗೂ ಮಾಧುಸ್ವಾಮಿ ಸಂಬಂಧ ಸುಮಾರು 35-40 ವರ್ಷಗಳಿಂದ ಇದೆ. ಮಾಧುಸ್ವಾಮಿಯವರ ಬಳಿ ಒಂದು ಅಯಸ್ಕಾಂತವಿದೆ ಅನಿಸುತ್ತಿದೆ. ಅವರ ಮೇಲೆ ನನಗೆ ಅಪಾರವಾದ ಗೌರವ ಪ್ರೀತಿ ವಿಶ್ವಾಸವಿದೆ. ಜನಪರವಾದ ನಿಲುವನ್ನೇ ಅವರು ಸದಾ ತೆಗೆದುಕೊಂಡು ಜಯಶೀಲರಾಗಿದ್ದಾರೆ. ತಾಲ್ಲೂಕು ಆಡಳಿತ ಸೌಧ, ೫ ವಸತಿ ಶಾಲೆಗಳು, ನೀರಾವರಿ, ಆಂಜನೇಯ ಸ್ವಾಮಿ ದೇವಸ್ಥಾನ ಶಂಕುಸ್ಥಾಪನೆ ಹೀಗೆ ಹಲವು ಅಭಿವೃದ್ಧಿ ಕೆಲಸಕ್ಕೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುತ್ತಿದ್ದೇವೆ. ಅವರು ನಮ್ಮ ಕ್ಷೇತ್ರಕ್ಕೆ ಬರುವುದಿಲ್ಲವೇ ಅಂದರು. ಅವರು ಹೇಳಿದ ಮೇಲೆ ಬರದೇ ಇರಲು ಆಗುತ್ತಾ? ಅವರು ನಿಮ್ಮನ್ನ ಭೇಟಿಯಾಗುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: ಹಕ್ಕುಪತ್ರ ವಿತರಣಾ ಕಾರ್ಯಕ್ರದ ವೇಳೆ ಗುಡುಗು ಸಹಿತ ಮಳೆ; ಇದು ಶುಭ ಸಂಕೇತ ಎಂದ ಸಿಎಂ ಬೊಮ್ಮಾಯಿ
ರಾಜಕಾರಣದಲ್ಲಿ ಎರಡುತರದ ರಾಜಕರಣವಿದೆ. ಒಂದು ಪವರ್ ಪಾಲಿಟಿಕ್ಸ್. ಇನ್ನೊಂದು ಜನರ ರಾಜಕಾರಣ. ಜನಪರ ಕೆಲಸ ಮಾಡಿಕೊಂಡು ಬರುವುದು ಜನರ ರಾಜಕಾರಣವಾಗಿದೆ. ಮಾಧುಸ್ವಾಮಿಯವರು ಜನರ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರು ಸದಾ ಜನಪರವಾದ ನಿಲುವುಗಳನ್ನ ತೆಗೆದುಕೊಂಡು ಬಂದಿದ್ದಾರೆ. ಬಹಳ ಒರಟು ಸ್ವಭಾವ ಮಾಧುಸ್ವಾಮಿಯವರದ್ದು, ನನಗಿಂತ ಜಾಸ್ತಿ ಅನುಭವ ನಿಮಗೂ ಆಗಿರುತ್ತದೆ. ತಂದೆ ಮಕ್ಕಳ ಜೊತೆ ಮಾತನಾಡುವ ರೀತಿ ಮಾತಾಡುವುದು ಅವರ ಸ್ವಭಾವ ಎಂದರು.
ಮುಂದುವರೆದು ಭಾಷಣ ಮಾಡಿದ ಸಿಎಂ ಬೊಮ್ಮಾಯಿ, 4.5 ಟಿಎಂಸಿ ನೀರನ್ನ ಈ ಕ್ಷೇತ್ರದ ಕೆರೆಗಳಿಗೆ ತುಂಬಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸಣ್ಣನೀರಾವರಿಯ ಖಾತೆ ಮಾಧುಸ್ವಾಮಿಯರಿಗೆ ಸಿಕ್ಕಿದ ಮೇಲೆ ದೊಡ್ಡ ನೀರಾವರಿ ಕೆಲಸವನ್ನ ನಿಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ. ಇದರಿಂದ ಇನ್ನು ಹತ್ತಾರು ವರ್ಷ ಅಂತರಜಲ ಹೆಚ್ಚಾಗುತ್ತದೆ. ರೈತರಿಗೆ ಕುಡಿಯುವ ನೀರಿಗೆ ತುಂಬಾ ಅನುಕೂಲವಾಗಲಿದೆ. ಇದು ಒಬ್ಬ ಮುತ್ಸದ್ದಿ ನಾಯಕ ಮಾಡುವ ಕೆಲಸವಾಗಿದೆ. ಅವರನ್ನ ನಾನು ಜನಪ್ರಿಯ ಶಾಸಕ ಅಂತಾ ಹೇಳುವುದಿಲ್ಲ. ಏಕೆಂದರೆ ಅವರು ಜನೋಪಯೋಗಿ ಶಾಸಕ ಆಗಿದ್ದಾರೆ. ಈ ಹಿಂದೆ ಒಂದೂ ಹಾಸ್ಟೆಲ್ ಇರಲಿಲ್ಲ. ಆದರೀಗ ಮಕ್ಕಳ ವಿಧ್ಯಾಬ್ಯಾಸಕ್ಕೆ 5 ಹಾಸ್ಟೇಲ್ಗಳನ್ನ ಮಾಡಿದ್ದಾರೆ. ಇದರಿಂದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿಗೆ ಶಿಕ್ಷಣದ ಅನುಕೂಲವಾಗಿದೆ ಎಂದರು.
ಮಾಧುಸ್ವಾಮಿಯವರು ಈ ಕ್ಷೇತ್ರಕ್ಕಷ್ಟೇಲ್ಲ ಇಡೀ ರಾಜ್ಯದ ಎಲ್ಲಾ ವಿಷಯಗಳನ್ನ ತಿಳಿದುಕೊಂಡಿದ್ದಾರೆ. ನೀರಾವರಿಯಲ್ಲಿ ಸಮಗ್ರವಾಗಿ ತಿಳಿದುಕೊಂಡಿದ್ದಾರೆ. ಕಾನೂನು ಸಚಿವರಾಗಿ ಅವರು ನಮ್ಮ ಸರ್ಕಾರಕ್ಕೆ ದೊಡ್ಡ ಆಸ್ತಿ. ಹೇಮಾವತಿ ಯೋಜನೆ ಮಾಡಲು ದೊಡ್ಡ ಹೋರಾಟವನ್ನ ಮಾಡಿ ಮಾಡಲಾಯಿತು. ಈ ಭಾಗದ ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಟ್ಟೆವು. ಏಕೆಂದರೆ ತುಮಕೂರು ಕಲ್ಪವೃಕ್ಷ ನಾಡು. ತುಂಬಾ ಶ್ರೇಷ್ಠವಾದ ಮಣ್ಣು ಇದು. ಇಲ್ಲಿ ನೀರು ಸೇರಿದರೇ ಬಂಗಾರವಾಗುತ್ತದೆ. ತುಮಕೂರು ಅಭಿವೃದ್ಧಿಯಾದರೆ ರಾಜ್ಯದ ಜಿಡಿಪಿ ಹೆಚ್ಚಾಗುತ್ತದೆ. ಹೀಗಾಗಿ ತುಮಕೂರು ಅಭಿವೃದ್ಧಿ ಮಾಡುವ ಬಗ್ಗೆ ನನಗೆ ವಿಶೇಷವಾದ ಕಾಳಜಿ ಇದೆ. ತುಮಕೂರಿನ ಕೈಗಾರಿಕೆ ಅಭಿವೃದ್ಧಿ ಆಗಬೇಕು ಎಂದರು.
ಅದರ ಜೊತೆಗೆ ಮಲ್ಟಿ ಇಂಡಸ್ಟ್ರಿಯಲ್ ಪಾರ್ಕ್ ಆಗಿದೆ. ಕೈಗಾರಿಕಾ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ನಾವೂ ಪೂರಕವಾದ ಕಾನೂನು ಮಾಡುತ್ತಿದ್ದೇವೆ. ಬೆಂಗಳೂರು ನಂತರ ಅತ್ಯಂತ ಪ್ರಮುಖವಾದ ಜಿಲ್ಲೆ ತುಮಕೂರು. ಕರ್ನಾಟಕದ ಭವಿಷ್ಯ ಬರೆಯುವ ಜಿಲ್ಲೆ ಅದು ತುಮಕೂರು. ಇಲ್ಲಿ ತೆಂಗು ಅಡಿಕೆಗೆ ಮಾರುಕಟ್ಟೆ ಕೊಡುವ ಕೆಲಸ ಕೂಡ ಆಗುತ್ತದೆ. ನೀರು ತುಂವಿಸುವ ಕೆಲಸ ಕೂಡ ಆಗುತ್ತದೆ. ಎತ್ತಿನಹೊಳೆ ಯೋಜನೆ ಶೀಘ್ರದಲ್ಲಿ ಮುಗಿಯಲಿದೆ. ಜೂನ್ ವೇಳೆಗೆ ನಿಮ್ಮ ಕ್ಷೇತ್ರ ಹಾಗೂ ತಿಪಟೂರಿಗೆ ನೀರು ಬರಲಿದೆ. ಅಭಿವೃದ್ಧಿ ಪರವಾಗಿರುವ ನಮ್ಮ ಸರ್ಕಾರ ಇದೆ. ಕಳೆದ ಮೂರು ವರ್ಷದಲ್ಲಿ ತೆಗೆದುಕೊಂಡ ನಿರ್ಧಾರ ಬೇರೆ ಯಾವುದೇ ಸರ್ಕಾರ ತೆಗೆದುಕೊಂಡಿಲ್ಲ ಎಂದರು.
ನಮ್ಮ ನಾಯಕ ಯಡಿಯೂರಪ್ಪರು ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡಿದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಬೆಂಬಲ ಕೊಟ್ಟರು. ಪ್ರವಾಹ ಬಂದಾಗ 5 ಲಕ್ಷ ಕೊಟ್ಟು ಮನೆ ನಿರ್ಮಾಣ, ಬೆಳೆ ಹಾನಿಗೆ ದೊಡ್ಡಮಟ್ಟದ ಪರಿಹಾರ, 53 ಲಕ್ಷ ರೈತರಿಗೆ ಕಿಸಾನ್ ಯೋಜನೆ ಕೊಡಲಾಗಿದೆ, 89 ಕೋಟಿ ರೂಪಾಯಿ ನಿಮ್ಮ ಕ್ಷೇತ್ರದ 31 ಸಾವಿರ ರೈತರಿಗೆ ಸಿಕ್ಕಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಕಿತ್ತಾಟ
ತುಮಕೂರು ಜಿಲ್ಲೆ ಕೊರಟಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ನಡುವೆ ಕಿತ್ತಾಟ ನಡೆದಿದೆ. ಕೊರಟಗೆರೆ ಹೊರವಲಯದ ಬೈಪಾಸ್ನಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಆಕಾಂಕ್ಷಿಗಳಾದ ಲಕ್ಷ್ಮೀಕಾಂತ್ ಹಾಗೂ ಅನಿಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮುಖ್ಯಮಂತ್ರಿ ಬೊಮ್ಮಾಯಿ ಸ್ವಾಗತ ಕೋರಿ ಲಕ್ಷ್ಮೀಕಾಂತ್ ಕಟ್ಟಿದ್ದ ಫ್ಲೆಕ್ಸ್ಗಳನ್ನು ತೆರವುಗೊಳಿಸಿರುವ ಆರೋಪ ಸಂಬಂಧ ಅನಿಲ್ ಕುಮಾರ್ ಹಾಗೂ ಲಕ್ಷ್ಮೀಕಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ತಾಲೂಕು ಆಡಳಿತಸೌಧ, ಬಾಲಕಿಯರ ಹಾಸ್ಟೆಲ್, ವಸತಿ ಶಾಲೆ, ಪರಿವೀಕ್ಷಣಾ ಮಂದಿರ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರೆವೇರಿಸಲಾಯಿತು. ಸಮಾರಂಭದಲ್ಲಿ ಸಚಿವರಾದ ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.ನಾಗೇಶ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Thu, 16 March 23