ಕಮಿಷನ್ ದಂಧೆಗೆ ಮಗಳು ಮೊಮ್ಮಗ ಬಲಿ; ಇದಕ್ಕೆ ಕಾರಣರಾದವರನ್ನು ‌ಜೈಲಿಗೆ ಹಾಕಬೇಕು -ತೇಜಸ್ವಿನಿ ಕುಟುಂಬಸ್ಥರ ಆಕ್ರೋಶ

| Updated By: ಆಯೇಷಾ ಬಾನು

Updated on: Jan 11, 2023 | 7:06 AM

Metro Pillar collapsed: 20 ಲಕ್ಷ ಪರಿಹಾರ ಯಾರಿಗೆ ಬೇಕು? ಬಿಎಂಆರ್‌ಸಿಎಲ್ ಜೀವ ಕೊಡಲು ಆಗುತ್ತದೆಯೇ? ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಕಮಿಷನ್ ದಂಧೆಗೆ ಮಗಳು ಮೊಮ್ಮಗ ಬಲಿ; ಇದಕ್ಕೆ ಕಾರಣರಾದವರನ್ನು ‌ಜೈಲಿಗೆ ಹಾಕಬೇಕು -ತೇಜಸ್ವಿನಿ ಕುಟುಂಬಸ್ಥರ ಆಕ್ರೋಶ
ಮೃತ ತೇಜಸ್ವಿನಿ ತಂದೆ ಮನೆ
Follow us on

ದಾವಣಗೆರೆ: ಬೆಂಗಳೂರಿನ ನಮ್ಮ ಮೆಟ್ರೊ 2ನೇ ಹಂತದ ಕಾಮಗಾರಿ ನಡೆಯುತ್ತಿದ್ದ ನಾಗವಾರ ಬಳಿ‌ ಪಿಲ್ಲರ್‌ ಕುಸಿದು ಮೃತಪಟ್ಟ ಜಿ.ಎಂ. ತೇಜಸ್ವಿನಿ(29) ಅವರ ದಾವಣಗೆರೆಯ ತವರು ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ. ಮಗಳು, ಮೊಮ್ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಂದೆ ಮದನ್ ಹಾಗೂ ತಾಯಿ ರುಕ್ಷ್ಮಿಣಿ ಬಾಯಿ ಬೆಂಗಳೂರಿಗೆ ಧಾವಿಸಿದ್ದಾರೆ. ತೇಜಸ್ವಿನಿ ಅವರ ದೊಡ್ಡಪ್ಪ ರಾಘವೇಂದ್ರ ರಾವ್ ಹಾಗೂ ಕುಟುಂಬದವರ ಕಣ್ಣಾಲಿಗಳು ತುಂಬಿಕೊಂಡಿವೆ. 20 ಲಕ್ಷ ಪರಿಹಾರ ಯಾರಿಗೆ ಬೇಕು? ಬಿಎಂಆರ್‌ಸಿಎಲ್ ಜೀವ ಕೊಡಲು ಆಗುತ್ತದೆಯೇ? ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ತೇಜಸ್ವಿನಿ ಅವರ ತಂದೆ ಜಿ. ಮದನ್ ಅವರು ಕರೆಲಕ್ಕೇನಹಳ್ಳಿಯಲ್ಲಿ ಭವಾನಿ ನೋಟ್‌ ಬುಕ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಮಾಲೀಕರು. ತಾಯಿ ರುಕ್ಮಿಣಿ ಬಾಯಿ ಗೃಹಿಣಿ. ಸಿವಿಲ್ ಎಂಜಿನಿಯರ್ ಲೋಹಿತ್‌ಕುಮಾರ್ ಅವರ ಜೊತೆ 2017ರಲ್ಲಿ ಮೃತ ತೇಜಸ್ವಿನಿ ವಿವಾಹ ನಡೆದಿತ್ತು. ತೇಜಸ್ವಿನಿ ಅವರಿಗೆ ಇಬ್ಬರು ತಂಗಿಯರು ಹಾಗೂ ಒಬ್ಬ ತಮ್ಮ ಇದ್ದಾರೆ. ತಂಗಿ ಸುಶ್ಮಾ ಅವರ ವಿವಾಹ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಆಗಿತ್ತು. ತೇಜಸ್ವಿನಿ ಅವರ ತಂದೆ ಜಿ.ಮದನ್ ಅವರಿಗೆ ಮೂವರು ಅಣ್ಣಂದಿರು ಹಾಗೂ ಒಬ್ಬರು ತಂಗಿ ಇದ್ದಾರೆ. ಇವರದು ಕೂಡು ಕುಟುಂಬ.

ದಾವಣಗೆರೆಗೆ ಬಂದಿದ್ದ ತೇಜಸ್ವಿನಿ

ತೇಜಸ್ವಿನಿ, 10 ದಿನಗಳ ಹಿಂದೆ ದಾವಣಗೆರೆಯ ಬಸವೇಶ್ವರ ನಗರದ ಕುಂದವಾಡ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಬಂದು ಕುಟುಂಬದವರ ಜೊತೆ ಕಾಲ ಕಳೆದು ಹೋಗಿದ್ದರು. ‘ಮಕ್ಕಳನ್ನು ಪ್ಲೇ ಬಾಯ್‌ ಗ್ರೂಪ್ಸ್‌ಗೆ ಸೇರಿಸುವುದಾಗಿ ಹೇಳಿದ್ದಳು. ಮನೆಯ ಹತ್ತಿರವೇ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು, ಮೂರು ತಿಂಗಳ ಹಿಂದೆ ಹೊಸ ಮನೆಗೆ ಹೋಗಿದ್ದರು. ಮಕ್ಕಳ ಜನ್ಮದಿವನ್ನು ಆಚರಿಸಿದ್ದರು’ ತೇಜಸ್ವಿನಿ ಸಂತೋಷದ ಸುಂದರ ಜೀವನ ನಡೆಸುತ್ತಿದ್ದಳು. ಆದ್ರೆ ಸುಂದರ ಸಂಸಾರಕ್ಕೆ ಬಿಎಂಆರ್​ಸಿಎಲ್ ಎಳ್ಳು ನೀರು ಬಿಟ್ಟಿದೆ ಎಂದು ಮೃತ ತೇಜಸ್ವಿ ಅವರ ದೊಡ್ಡಪ್ಪ ರಾಘವೇಂದ್ರ ರಾವ್ ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Metro Pillar collapsed: ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ; BMRCLನ ಮುಖ್ಯ ಇಂಜಿನಿಯರ್ ಅಮಾನತು-ಸಿಎಂ ಆದೇಶ

ಬಿಎಂಆರ್‌ಸಿಎಲ್‌ ಎಂಡಿ ಬಂಧನಕ್ಕೆ ಆಗ್ರಹ

‘ಘಟನೆಗೆ ಕಾರಣರಾದ ಬಿಎಂಆರ್‌ಸಿಎಲ್‌ ಎಂಡಿ ಹಾಗೂ ಗುತ್ತಿಗೆದಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು’ ಎಂದು ಮೃತ ತೇಜಸ್ವಿನಿ ಅವರ ದೊಡ್ಡಪ್ಪ ರಾಘವೇಂದ್ರ ರಾವ್ ಒತ್ತಾಯಿಸಿದ್ದಾರೆ. ‘ಸಾರ್ವಜನಿಕರ ಹಣವನ್ನು ಸರ್ಕಾರ ಗುತ್ತಿಗೆದಾರರಿಗೆ ನೀಡುತ್ತಿದೆ. ಆದರೆ ಅವರ ನಿರ್ಲಕ್ಷ್ಯದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಗುತ್ತಿಗೆದಾರರು ತಮ್ಮ ಜವಾಬ್ದಾರಿಯನ್ನು ಅರಿತಿಲ್ಲ. ಅವರಿಗೆ ಸರ್ಕಾರ ಹಣವನ್ನು ಕೊಡಬಾರದು. ಇದರಿಂದ ಬೇರೆ ಗುತ್ತಿಗೆದಾರರು ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಹೇಳಿದರು.

ದಾವಣಗೆರೆಯ ತಂದೆ ಮನೆಗೆ ತಲುಪಿದ ತೇಜಸ್ವಿನಿ, ಮಗು ಮೃತದೇಹ

ಇನ್ನು ತೇಜಸ್ವಿನಿ ತಂದೆ ಮದನ್ ನಿವಾಸಕ್ಕೆ ವಾಹನದಲ್ಲಿ ಮೃತದೇಹ ಶಿಫ್ಟ್‌ ಮಾಡಲಾಗಿದೆ. ತಂದೆ ಮನೆಯಲ್ಲಿ ಬೆಳಗ್ಗೆ 9.45ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಬೆಳಗ್ಗೆ 10 ಗಂಟೆಗೆ ದಾವಣಗೆರೆಯ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:03 am, Wed, 11 January 23