ದಾವಣಗೆರೆಯಲ್ಲಿ ಲಕ್ಷ ಲಕ್ಷ ಗೋಲ್ ಮಾಲ್; ಪಿಡಿಓ ವಿರುದ್ಧ ಪೊಲೀಸ್ ಠಾಣೆಗೆ ಮೇಲಾಧಿಕಾರಿಯಿಂದ ದೂರು

| Updated By: ಆಯೇಷಾ ಬಾನು

Updated on: Oct 09, 2024 | 10:10 AM

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಪಂ ಪಿಡಿಓ ಟಿ. ಸಿದ್ದಪ್ಪ ಅವರ ವಿರುದ್ಧ ಹಣ ಅಕ್ರಮ ಆರೋಪ ಕೇಳಿ ಬಂದಿದೆ. ಈ ಹಿಂದೆ ಜಗಳೂರು ತಾಲೂಕಿನ ಬಿಳಿಚೋಡು ಹಾಗೂ ಬಸವನಕೋಟೆ ಗ್ರಾ.ಪಂ ಕಾರ್ಯದರ್ಶಿ ಇದ್ದಾಗ 27 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಈಗನ ಪಿಡಿಓಗಳು ದೂರು ನೀಡಿದ್ದಾರೆ.

ದಾವಣಗೆರೆಯಲ್ಲಿ ಲಕ್ಷ ಲಕ್ಷ ಗೋಲ್ ಮಾಲ್; ಪಿಡಿಓ ವಿರುದ್ಧ ಪೊಲೀಸ್ ಠಾಣೆಗೆ ಮೇಲಾಧಿಕಾರಿಯಿಂದ ದೂರು
ಪಿಡಿಓ ಟಿ. ಸಿದ್ದಪ್ಪ
Follow us on

ದಾವಣಗೆರೆ, ಅ.09: ಆತ ಮಹಾ ಪ್ರಚಂಡ ಅಧಿಕಾರಿ. ಯಾವುದೇ ಗ್ರಾ.ಪಂನಲ್ಲಿ ಅಧಿಕಾರ ನಡೆಸಲಿ. ಅಲ್ಲೊಂದು ಯಡವಟ್ಟು ಮಾಡಿಯೇ ಹೋಗುವುದು ಸಂಪ್ರದಾಯ ಆಗಿದೆ. ಈತನ ಕಾಟಕ್ಕೆ ಬೇಸತ್ತು ಆ ಪಂಚಾಯತ್​ನಿಂದ ಈ‌ ಪಂಚಾಯತ್. ಈ ಪಂಚಾಯತ್​ನಿಂದ ಆ ಪಂಚಾಯತ್​ಗೆ ವರ್ಗಾವಣೆ ಮಾಡುತ್ತಲೇ ಇದ್ದಾರೆ. ಆದರೆ ಆತ ತನ್ನ ಚಾಳಿ ಮಾತ್ರ ಬದಲಾಯಿಸುತ್ತಿಲ್ಲ. ಇದೀಗ ಈತನ ವಿರುದ್ಧ ಲಕ್ಷ ಲಕ್ಷ ಗೋಲ್ ಮಾಲ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇವರು ಮಾಡಿದ ಗೋಲ್ ಮಾಲ್ ಬಗ್ಗೆ ಇಲಾಖೆ ತನಿಖೆ ಮಾಡಿ ವರದಿ ಪಡೆದು‌ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ಹಾಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಪಂ ಪಿಡಿಓ ಟಿ. ಸಿದ್ದಪ್ಪ ಈ ಗೋಲ್ ಮಾಲ್​ನ ರೂವಾರಿ. ಇವರು ಅಧ್ಯಕ್ಷರ ಸಹಿ ತಾನೇ ಮಾಡಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದ್ದಾರೆ. ಆದರೆ ಈ ಹಣವನ್ನು ಗ್ರಾ.ಪಂ ಪಿಡಿಓ ಸಿದ್ದಪ್ಪ ನುಂಗಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ದಾವಣಗೆರೆ: ಸ್ನೇಹಿತನ ಜೊತೆ ಸೇರಿ ತನ್ನ ಮನೆಯಲ್ಲಿ ತಾನೇ ಕದ್ದು ಠಾಣೆಗೆ ದೂರು ನೀಡಿದ್ದ ಯುವತಿ; ಸಿಕ್ಕಿಬಿದ್ದಿದ್ದು ಹೇಗೆ?

ದೊಣ್ಣೆಹಳ್ಳಿ ಪಂಚಾಯಿತ್ ಪಿಡಿಓ ಆಗಿರುವ ಟಿ.ಸಿದ್ದಪ್ಪ ಈ ಹಿಂದೆ ಜಗಳೂರು ತಾಲೂಕಿನ ಬಿಳಿಚೋಡು ಹಾಗೂ ಬಸವನಕೋಟೆ ಗ್ರಾ.ಪಂ ಕಾರ್ಯದರ್ಶಿ ಇದ್ದಾಗ 27 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಿನ ಬಿಳಿಚೋಡು ಹಾಗೂ ಬಸವನಕೋಟೆ ಪಿಡಿಓಗಳು ವಂಚನೆ ಬಗ್ಗೆ ವರದಿ ನೀಡಿದ್ದಾರೆ. ಪಿಡಿಓ ಟಿ. ಸಿದ್ದಪ್ಪ ವಿರುದ್ಧ ಬಿಳಿಚೋಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜಗಳೂರು ತಾಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ಅವರಿಗೆ ಬಿಳಿಚೋಡು ಗ್ರಾ.ಪಂ ನಲ್ಲಿ ಕೆರೆ ಅಭಿವೃದ್ಧಿಗೆ 2.84 ಲಕ್ಷ ಹಣ ಬಂದಿತ್ತು. ಇದನ್ನ ಬೇರೆ ಕಾಮಗಾರಿ ಹೆಸರಿಗೆ ಹಾಕಿ ಟಿ.ಸಿದ್ಧಪ್ಪ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.

ಬಸವನಕೋಟೆ ಗ್ರಾ.ಪಂನಲ್ಲಿ ಅಧ್ಯಕ್ಷರ ಅಪ್ಪಣೆ ಇಲ್ಲದೇ ಲಕ್ಷಾಂತರ ರೂಪಾಯಿ ಗುತ್ತಿಗೆದಾರರಿಗೆ ಪಾವತಿ ಮಾಡಿದ್ದಾರೆ. ಸದ್ಯ ತನಿಖೆ ಮಾಡಿ ವರದಿ ನೀಡಿದ ಪ್ರಕಾರ ಒಟ್ಟು 27.51 ಲಕ್ಷ ರೂಪಾಯಿ ದುರುಪಯೋಗ ಪಡೆಸಿಕೊಂಡ ಆರೋಪ ಇವರ ಮೇಲಿದೆ. ಈ ಹಿಂದೆ ಕೂಡಾ ಇವರ ಮೇಲೆ ಹತ್ತಾರು ಆರೋಪಗಳು ಕೇಳಿ ಬಂದಿದ್ದವು.‌ ಆದರೆ ಅಧಿಕೃತವಾಗಿ ದೂರು ದಾಖಲಾಗಿರಲಿಲ್ಲ. ಈಗ ಪ್ರತಿ ಗ್ರಾಮ ಪಂಚಾಯತಿ ಲೆಕ್ಕ ಪರಿಶೀಲನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಿದ್ದಪ್ಪ ಮಾಡಿದ ಕರ್ಮಕಾಂಡಗಳು ಹೊರ ಬರುತ್ತಿವೆ. ಇತನ ವಿರುದ್ಧ ಇಲಾಖೆ ತನಿಖೆ ಕೂಡಾ ಶುರುವಾಗಿದೆ. ಸದ್ಯ ಪೊಲೀಸ್ ಠಾಣೆಗೆ ದೂರು ಮಾತ್ರ ದಾಖಲಾಗಿದೆ.‌ ಇನ್ನೂ ಎಫ್​ಐಆರ್ ದಾಖಲಾಗಿ ಪೊಲೀಸರು ತನಿಖೆ ಆರಂಭಿಸಿದ್ರೆ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವುದು ಖಚಿತ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ