ದಾವಣಗೆರೆ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಕಾಡುತ್ತಿದೆ ಜೀವ ಭಯ! ಯಾಕೆ ಹೀಗೆ?

| Updated By: ಸಾಧು ಶ್ರೀನಾಥ್​

Updated on: Mar 14, 2024 | 12:04 PM

ಬಡವರು ದಾವಣಗೆರೆ ಸರ್ಕಾರಿ ಜಿಲ್ಲಾಸ್ಪತ್ರೆಯನ್ನು ನಂಬಿಕೊಂಡು ರೋಗ ವಾಸಿ ಮಾಡಿಕೊಳ್ಳುವುದಕ್ಕೆ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿನ ವಾತಾವರಣ ನೋಡಿದರೆ ರೋಗ ವಾಸಿಮಾಡಿಕೊಳ್ಳುವುದಿರಲಿ, ಜೀವ ಉಳಿಸಿಕೊಂಡು ಹೋಗುವುದೇ ಕಷ್ಟವಾಗಿದೆ. ಹಾಗಾದ್ರೆ ಅದು ಏಕೆ ಅಂತೀರಾ ಈ ಸ್ಟೋರಿ ನೋಡಿ‌..

ಅದು ಮೂರ್ನಾಲ್ಕು ಜಿಲ್ಲೆಗಳಿಗ ಬಡ ರೋಗಿಗಳ ಜೀವನಾಡಿಯಾಗಿರುವ ಜಿಲ್ಲಾಸ್ಪತ್ರೆ, ಪ್ರತಿನಿತ್ಯ ಇಲ್ಲಿ ಸಾವಿರಾರು ಜನ ರೋಗಿಗಳು ಚಿಕಿತ್ಸೆಗೆಂದು (Treatment) ಬರುತ್ತಾರೆ. ಆದರೆ ಇಲ್ಲಿಗೆ ಬಂದ ರೋಗಿಗಳು (Patients) ಗುಣಮುಖರಾಗಿ ಹೋಗುವವರೆಗೂ ಜೀವಭಯದಲ್ಲೇ ಚಿಕಿತ್ಸೆ ಪಡೆಯ ಬೇಕಾದ ದುಃಸ್ಥಿತಿ ಬಂದಿದೆ. ಆಸ್ಪತ್ರೆಯಿಂದ‌ ಚಿಕಿತ್ಸೆ ಪಡೆದು ಜೀವಂತವಾಗಿ ಹೋದ್ರೆ ಸಾಕು ಎನ್ನುವ ಮಟ್ಟಿಗೆ ‌ರೋಗಿಗಳು ಹೆದರುವ ಪರಿಸ್ಥಿತಿ ಗೆ ಬಂದಿದೆ. ಹಾಗಾದ್ರೆ ಅದು ಏಕೆ ಅಂತೀರಾ ಈ ಸ್ಟೋರಿ ನೋಡಿ‌.. ರೋಗಿಗಳ ಮೇಲೆ ಕುಸಿದು ಬಿದ್ದಿರುವ ಮೇಲ್ಛಾವಣಿ, ಎಲ್ಲೆಂದರಲ್ಲಿ ಬಿರುಕು ಬಿಟ್ಟಿರುವ ಆಸ್ಪತ್ರೆಯ ಗೋಡೆಗಳು, ಆಸ್ಪತ್ರೆಯ ಕಟ್ಟಡದ ಗೋಡೆಗಳಲ್ಲಿ ಬೆಳೆದಿರುವ ಗಿಡಗಂಟಿಗಳು, ಅಸ್ಥಿಪಂಜರದ ರೀತಿ ಕಾಣುತ್ತಿರುವ ಕಟ್ಟಡ ಈ ದೃಶ್ಯಗಳೆಲ್ಲಾ ಕಂಡು ಬರುವುದು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ (Davangere District Hospital).

ಹೌದು ಮೂರ್ನಾಲ್ಕು ಜಿಲ್ಲೆಗಳಿಗೆ ಕೊಂಡಿಯಂತಿರುವ ಜಿಲ್ಲಾಸ್ಪತ್ತೆಯ ದು:ಸ್ಥಿತಿಯಲ್ಲಿದೆ. ಮಂಗಳವಾರ ರಾತ್ರಿ ವಾರ್ಡ್​​ ನಂಬರ್ 72 ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಹಾಗೂ ಅವರ ಅಕ್ಕಪಕ್ಕದಲ್ಲಿದ್ದವರ ಮೇಲೆ ಏಕಾಏಕಿ ಆಸ್ಪತ್ರೆಯ ಮೇಲ್ಚಾವಣಿಯ ಸಿಮೆಂಟ್ ಕುಸಿದು ಬಿದ್ದಿದೆ. ಇದರಿಂದಾಗಿ ಮಂಜುನಾಥ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಕೂಡಲೇ ಬೇರೆ ವಾರ್ಡಿಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು ಪ್ರತಿದಿನ ಜೀವ ಭಯದಲ್ಲೇ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆ ಪಡೆಯ ಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

Also Read: ಅದಿರು ಸಾಗಣೆಯ ದುಷ್ಪರಿಣಾಮ: ವಿಚಿತ್ರ ಪರಿಸ್ಥಿತಿಯಲ್ಲಿ ಚಿತ್ರದುರ್ಗ ತಾಲೂಕಿನ ಗ್ರಾಮಸ್ಥರು, ಲಾರಿ ಮಾಲೀಕರು! ಪರಿಹಾರವೇನು?

ಚಿಗಟೇರಿ ಜಿಲ್ಲಾಸ್ಪತ್ತೆಗೆ ಹಾವೇರಿ, ಚಿತ್ರದುರ್ಗ ಸೇರಿದಂತೆ ದಾವಣಗೆರೆ ಜಿಲ್ಲೆಯ ಸುತ್ತಮುತ್ತ ತಾಲೂಕಿನ ಜನರು ಚಿಕಿತ್ಸೆಗೆ ಆಗಮಿಸುತ್ತಾರೆ. ಪ್ರತಿನಿತ್ಯ ಸಾವಿರಾರು ಒಳ ಹಾಗೂ ಹೊರ ರೋಗಿಗಳು ಇಲ್ಲಿಗೆ ಬಂದು ಹೋಗುತ್ತಿದ್ದು ಪ್ರತಿನಿತ್ಯ ಜೀವ ಭಯದಲ್ಲೇ ಬಂದು ಚಿಕಿತ್ಸೆ ಪಡೆಯ ಬೇಕಾದ ದು:ಸ್ಥಿತಿ ನಿರ್ಮಾಣವಾಗಿದೆ. ಬಜೆಟ್ ನಲ್ಲಿ ಜಿಲ್ಲಾಸ್ಪತ್ರೆಯ ಉನ್ನತೀಕರಣಕ್ಕೆ ಕೋಟ್ಯಾಂತರ ರೂಪಾಯಿ ಮಂಡನೆ ಮಾಡುತ್ತಾರೆ..

ಆದರೆ ಅದು ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ ವಿನಹ ಅನುದಾನ ಬಂದಿಲ್ಲ.. ಹಣ ಇದ್ದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.. ಆದರೆ ಬಡವರು ಸರ್ಕಾರಿ ಆಸ್ಪತ್ರೆಯನ್ನು ನಂಬಿಕೊಂಡಿರುತ್ತಾರೆ.. ರೋಗ ವಾಸಿ ಮಾಡಿಕೊಳ್ಳುವುದಕ್ಕೆ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿನ ವಾತಾವರಣ ನೋಡಿದರೆ ರೋಗ ವಾಸಿಮಾಡಿಕೊಳ್ಳುವುದಿರಲಿ ಜೀವ ಉಳಿಸಿಕೊಂಡು ಹೋಗುವುದು ಕಷ್ಟವಾಗಿದೆ. ಕೂಡಲೇ ಸರಿಪಡಿಸಿ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಾಸ್ಪತ್ರೆಗೆ ಬರುವ ರೋಗಿಗಳು ಪ್ರತಿನಿತ್ಯ ಜೀವ ಭಯದಲ್ಲೇ ಕಾಲ ಕಳೆಯ ಬೇಕಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆಸ್ಪತ್ರೆಗೆ ಕಾಯಕಲ್ಪ ಕಲ್ಪಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Thu, 14 March 24