
ದಾವಣಗೆರೆ: ಜಾತ್ರೆ ಅಂದ್ರೆನೇ ಹಾಗೆ ಅಲ್ಲಿ ಸಡಗರ, ಸಂಭ್ರಮಕ್ಕೇನು ಕೊರತೆ ಇರಲ್ಲ. ಅದ್ಧೂರಿ ರಥೋತ್ಸವ, ವಿವಿಧ ಆಚರಣೆಗಳ ವೈಭವ ಎಲ್ಲರನ್ನೂ ಸೆಳೆಯುತ್ತೆ. ಇಲ್ಲೂ ಅಷ್ಟೇ.. ದುರ್ಗಮ್ಮ ದೇವಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.
ದೇಗುಲಕ್ಕೆ ಸರ್ವಾಲಂಕಾರ. ದೇವಿ ಸನ್ನಿಧಿಯಲ್ಲಿ ಭಕ್ತಿಯ ಝೇಂಕಾರ. ಸಾಗರೋಪಾದಿಯಲ್ಲಿ ಬಂದು ಭಕ್ತರು ಹೂ ಹಣ್ಣು, ಕಾಯಿ ಅರ್ಪಿಸಿ ಬೇಡಿಕೊಳ್ತಿದ್ರೆ, ದೇವಿ ಗುಡಿ ತುಂಬಿ ತುಳುಕುತ್ತಿತ್ತು.
ದಾವಣಗೆರೆ ನಗರದ ದುರ್ಗಾಂಬಿಕಾ ದೇವಿ ಜಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದು ಮತ್ತು ನಾಳೆ ಜಾತ್ರೆ ಅದ್ಧೂರಿಯಾಗಿ ನಡೀತಿದ್ದು, ನಗರದ ತುಂಬೆಲ್ಲಾ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಜಾತ್ರೆಯ ವಿಶೇಷ ಅಂದ್ರೆ, ಪ್ರಾಣಿಗಳನ್ನು ಬಲಿ ಕೊಡೋದು. ಹೌದು.. ಪ್ರಾಣಿ ಬಲಿ ಕೊಡೋದು ನಿಷೇಧವಿದೆ.
ಹೀಗಿದ್ರೂ ಈ ಜಾತ್ರೆಯಲ್ಲಿ ಕುರಿ ಮತ್ತು ಟಗರುಗಳನ್ನು ಬಲಿ ಕೊಡಲಾಗುತ್ತೆ. ಮನೆಗೊಂದು ಪ್ರಾಣಿಯಂತೆ ಭಕ್ತರು ಬಲಿ ಕೊಟ್ಟು ಇಷ್ಟಾರ್ಥಗಳು ಈಡೇರಲಿ ಅಂತಾ ಬೇಡಿಕೊಳ್ತಾರೆ. ಹಿಂದಿನಿಂದಲೂ ಈ ಪದ್ಧತಿ ರೂಢಿಯಲ್ಲಿದೆ. ಪ್ರಾಣಿ ಬಲಿ ಕೊಡೋದನ್ನು ತಡೆಯಲು ಪೊಲೀಸ್ರು ಸಜ್ಜಾಗಿದ್ದಾರೆ. ಹೀಗಾಗಿ, ಸಿರಿಂಜ್ ಮೂಲಕ ಪ್ರಾಣಿಯ ರಕ್ತ ತಂದು ದೇವಿಗೆ ಅರ್ಪಿಸಿ ಭಕ್ತಿ ಸಮರ್ಪಿಸುತ್ತಿದ್ದಾರೆ.
ಇನ್ನು, ತಳವಾರ ಕೇರಿ, ಹೊಂಡದ ಸರ್ಕಲ್, ಗಾಂಧಿನಗರ, ಶಿವಾಜಿನಗರ, ಬೂದಾಳ ರಸ್ತೆ, ಜಾಲಿನಗರ ಸೇರಿದಂತೆ ಹಲವೆಡೆ ಕುರಿ, ಟಗರುಗಳ ಹಿಂಡೇ ಕಾಣುತ್ತೆ. ಈ ವರ್ಷ ಸುಮಾರು 1 ಲಕ್ಷ ಕುರಿಗಳನ್ನು ದೇವಿಗೆ ಬಲಿ ಕೊಡಲಾಗುತ್ತೆ ಅಂತಾ ಅಂದಾಜಿಸಲಾಗಿದ್ದು, ಬಾಡೂಟ ಸವಿಯಲು ವಿವಿಧ ಊರುಗಳಿಂದ ಭಕ್ತಸಾಗರವೇ ಹರಿದು ಬರುತ್ತಿದೆ. ಈ ಜಾತ್ರೆಯ ಮತ್ತೊಂದು ವಿಶೇಷ ಅಂದ್ರೆ, ಟಗರಿನ ಕಾಳಗ. ಈ ರೋಚಕ ಕಾದಾಟದಲ್ಲಿ ನೂರಾರು ಟಗರುಗಳು ಭಾಗಿಯಾಗಲಿದ್ದು, ಎಲ್ಲರಲ್ಲೂ ಕುತೂಹಲ ಮೂಡಿದೆ.
ಒಟ್ನಲ್ಲಿ, ದಾವಣಗೆರೆ ದುರ್ಗಾಂಬಿಕಾ ದೇವಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ವಿವಿಧ ಕಡೆಯಿಂದ ಭಕ್ತರ ಸಾಗರವೇ ಹರಿದು ಬರುತ್ತಿದೆ.
Published On - 12:14 pm, Tue, 3 March 20