ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಕಾರು ಸಹಿತ ಕಾಲುವೆಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

| Updated By: ರಮೇಶ್ ಬಿ. ಜವಳಗೇರಾ

Updated on: Nov 03, 2022 | 7:17 PM

ಚಂದ್ರಶೇಖರ್ ಸಾವಿನ ಸುತ್ತ ಅನುಮಾನದ ಹುತ್ತ ಮೂಡುತ್ತಿದ್ದು ಚಂದ್ರಶೇಖರ್ ಸಾವು ಕೊಲೆಯೋ? ಅಪಘಾತವೋ..? ಎನ್ನುವ ಹಲವು ಶಂಕೆಗಳು ವ್ಯಕ್ತವಾಗುತ್ತಿವೆ.

ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಕಾರು ಸಹಿತ ಕಾಲುವೆಯಲ್ಲಿ ಪತ್ತೆ:  ಸಾವಿನ ಸುತ್ತ ಅನುಮಾನದ ಹುತ್ತ
ಚಂದ್ರಶೇಖರ್‌ ಶವ ಕಾರು ಸಹಿತ ಕಾಲುವೆಯಲ್ಲಿ ಪತ್ತೆ
Follow us on

ದಾವಣಗೆರೆ: ಅಕ್ಟೋಬರ್ 30ರ ರಾತ್ರಿಯಿಂದ ಮನೆಯಿಂದ ಹೋಗಿದ್ದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ (24) ಐದು ದಿನಗಳ ಬಳಿಕ ಇಂದು(ನ.3) ಶವ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಕಾರು ಸಹಿತ ಚಂದ್ರಶೇಖರ್ ಶವ ಪತ್ತೆಯಾಗಿದೆ. ಇನ್ನು ಚಂದ್ರಶೇಖರ್ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ಹಲವು ಅನುಮಾನಗಳು

ನ್ಯಾಮತಿಯಿಂದ ಹೊನ್ನಾಳಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ನ್ಯಾಮತಿಯಿಂದ ಹೊನ್ನಾಳಿಗೆ ತೆರಳುತ್ತಿದ್ದಾಗ ಕಾರು ತಡೆಗೋಡೆಗೆ ಡಿಕ್ಕಿಯಾಗಿ ಬಳಿಕ ಕಾಲುವೆಗೆ ಉರುಳಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ತುಂಗಾ ಮುಖ್ಯ ಕಾಲುವೆ 20ಕ್ಕೂ ಹೆಚ್ಚು ಅಡಿ ಆಳವಿರುವುದರಿಂದ ಕಾರು ಬಿದ್ದಿರುವುದು ಯಾರಿಗೂ ಕಂಡಿಲ್ಲ. ಇನ್ನು ಶವ ಕೊಳೆತ ಸ್ಥಿತಿಯಲ್ಲಿರುವುದರಿಂದ ಅ. 30ರ ರಾತ್ರಿಯೇ ಕಾರು ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ನ್ಯಾಮತಿ ಕಡೆಯಿಂದ ಬರುತ್ತಿರುವಾಗ ಹೊನ್ನಾಳಿ ಕೇವಲ 5ಕಿ.ಮೀ. ದೂರದಲ್ಲಿ ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಕಾಲುವೆಗೆ ಬಿದ್ದಿರುವ ಸಾಧ್ಯತೆಗಳಿವೆ. ಇನ್ನು ಕಾರು ಅತಿ ವೇಗದಲ್ಲಿದ್ದು, ಬಳಿಕ ನಿಯಂತ್ರಣಕ್ಕೆ ಸಿಗದೆ ಕಾರು ಕಾಲುವೆಗೆ ನುಗ್ಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆಯೂ ಸಹ ಪೊಲೀಸರು ತನಿಖೆ ನಡೆಸಿದ್ದಾರೆ.

ಕಾಣೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವವಾಗಿ ಪತ್ತೆ

ಕಾರು ಕಾಲುವೆಗೆ ಬಿದ್ದಿದ್ದೇಗೆ? ಕಾರು ಪಲ್ಟಿಯಾಗಿ ಬಳಿಕ ಕಾಲುವೆಗೆ ಉರುಳಿತೇ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅದರಲ್ಲೂ ಮುಖ್ಯವಾಗಿ ಚಂದ್ರಶೇಖರ್ ಶವ ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಒಂದು ವೇಳೆ ಚಂದ್ರು ಸೀಟ್ ಬೆಲ್ಟ್ ಹಾಕಿದ್ದರೇ ಅವರು ಡ್ರೈವಿಂಗ್ ಸೀಟಿನಲ್ಲೇ ಇರುತ್ತಿದ್ದರು. ಅವರ ಮೃತ ದೇಹ ಹಿಂದಿನ ಸೀಟಿನಲ್ಲಿ ಪತ್ತೆಯಾಗಿದ್ದರಿಂದ ಬೇರೆಯವರು ಕಾರು ಡ್ರೈವಿಂಗ್ ಮಾಡಿದ್ರಾ? ಹೀಗೆ ಹತ್ತು ಹಲವು ಅನುಮಾನಗಳು ಪೊಲೀಸರಿಗೆ ಮೂಡಿದ್ದು, ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಅನುಮಾನ ವ್ಯಕ್ತಪಡಿಸಿದ ಶಾಸಕ

ಟಿವಿ9ಗೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರತಿಕ್ರಿಯಿಸಿದ್ದು,ಸ್ವಾಭಾವಿಕವಾಗಿ ಅಪಘಾತ ಸಂಭವಿಸಿದೆ ಎಂದು ಅನ್ನಿಸುತ್ತಿಲ್ಲ. ಎಷ್ಟೇ ವೇಗವಾಗಿ ಬಂದ್ರೂ ಕಾಲುವೆಗೆ ಪಲ್ಟಿಯಾಗುವ ಸಾಧ್ಯತೆ ಇಲ್ಲ. ಘಟನೆಯ ಹಿಂದೆ ಷಡ್ಯಂತ್ರ ನಡೆಸಿರುವ ಅನುಮಾನ ಬರುತ್ತಿದೆ. ಮೇಲ್ನೋಟಕ್ಕೆ ಈ ರೀತಿಯ ಅನುಮಾನ ಎಲ್ಲರಿಗೂ ಬಂದಿದೆ. ನಾನೂ ಪರಿಶೀಲಿಸಿದ್ದೇನೆ, ಅದು ಅಪಘಾತ ಸಂಭವಿಸುವ ಸ್ಥಳವಲ್ಲ. ಪೊಲೀಸರ ಮೇಲೆ ನಂಬಿಕೆ ಇದೆ, ತನಿಖೆ ಬಳಿಕ ಸತ್ಯಾಂಶ ಗೊತ್ತಾಗುತ್ತೆ ಎಂದು ಚಂದ್ರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದೊಂದು ಹೈ ಪ್ರೊಫೈಲ್ ಪ್ರಕರಣವಾಗಿದ್ದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮರಣತ್ತೋರ ಪರೀಕ್ಷೆ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ಬಗ್ಗೆ ಸತ್ಯಾಸತ್ಯತೆ ತಿಳಿಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ