ದಾವಣಗೆರೆ: ದೇವರ ಉತ್ಸವ ವಿಚಾರದಲ್ಲಿ 2 ಗ್ರಾಮಗಳ ನಡುವೆ ಮಾರಾಮಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು ಗಲಾಟೆಯಲ್ಲಿ 10 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬಸವನಹಳ್ಳಿ ಮತ್ತು ಮಾದನಬಾವಿ ಎಂಬ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿದೆ. ಯುಗಾದಿ ಹಬ್ಬದ ನಡೆಯುವ ಪೂಜೆ ಕಾರ್ಯಕ್ರಮದ ವೇಳೆ ಗಲಾಟೆ ನಡೆದಿದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಹಾಗೂ ಮಾದನಬಾವಿ ಗ್ರಾಮಗಳ ನಡುವೆ ತಿಕ್ಕಾಟವಾಗಿದೆ.ಪ್ರತಿ ಯುಗಾದಿಗೆ ಮಾದನಬಾವಿಯ ಬೀರದೇವರು ಬಸವನಹಳ್ಳಿ ಮಾರ್ಗವಾಗಿ ತೆರಳಿ ಗಡ್ಡೆರಾಮೇಶ್ವರದ ತುಂಗಭದ್ರ ನದಿಗೆ ಪೂಜೆ ಮಾಡಿ ಬರಬೇಕು. ಆದ್ರೆ ಬೀರದೇವರ ಪಲ್ಲಕ್ಕಿ ವಿಚಾರವಾಗಿ ಎರಡು ಗ್ರಾಮಗಳ ನಡುವೆ 20 ವರ್ಷಗಳ ಜಗಳವಿದೆ.ವಿಷ್ಯ ಏನಂದ್ರೆ, ಮಾದನಬಾವಿಯ ಬೀರದೇವರು ನಮ್ಮ ಗ್ರಾಮದ ಮಾರ್ಗವಾಗಿ ಹೋಗಬಾರದು ಅಂತಾ ಬಸವನಹಳ್ಳಿ ಗ್ರಾಮಸ್ಥರು ಕೋರ್ಟ್ನಲ್ಲಿ ದಾವೆ ಹೂಡಿದ್ರು. ಆದ್ರೆ, ಕೋರ್ಟ್ ಮಾದನಬಾವಿ ಬೀರದೇವರು ತೆರಳಲು ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಪ್ರತಿವರ್ಷ ಬೀರದೇವರು ಬಸವನಹಳ್ಳಿ ಗ್ರಾಮದ ಮೂಲಕ ಪೊಲೀಸ್ ಬಂದೋಬಸ್ತ್ನಲ್ಲಿ ತೆರಳುತ್ತಾನೆ. ಆದ್ರೆ ಹೀಗೆ ತೆರಳುವಾಗ ನಿನ್ನೆ ನಡೆದಿದ್ದೇ ಬೇರೆ.
ಬೀರದೇವರ ಪಲ್ಲಕ್ಕಿ ಬಸನಹಳ್ಳಿಗೆ ಬಂದಾಗ ಅದಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬುದು ಮಾದನಬಾವಿ ಗ್ರಾಮಸ್ಥರ ಆರೋಪ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡು ಗ್ರಾಮಸ್ಥರು ಕಲ್ಲು ತೂರಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ಪೊಲೀಸರಿಗೂ ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಾದನಬಾವಿ ಗ್ರಾಮಸ್ಥರು ಬಸವನಹಳ್ಳಿ ಹಾಗೂ ಗೋವಿನಕೊವಿ ಗ್ರಾಮದ ರಸ್ತೆ ಬಂದ್ ಮಾಡಿ ಧರಣಿ ಮಾಡುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ದಾವಣಗೆರೆ ಎಸ್ಪಿ ಸಿ.ಬಿ. ರಿಷ್ಯಂತ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಸುಖ-ದುಃಖದ ಸಂಕೇತವಾದ ಯುಗಾದಿಯಂದೇ ಗ್ರಾಮಸ್ಥರು ಹೀಗೆ ಕಚ್ಚಾಡಿಕೊಂಡಿದ್ದು ಮಾತ್ರ ವಿಪರ್ಯಾಸ
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
ಇದನ್ನೂ ಓದಿ: ಮಹಾರಾಷ್ಟ್ರದ ನಾಸಿಕ್ ಬಳಿ ಹಳಿತಪ್ಪಿದ ಲೋಕಮಾನ್ಯ ತಿಲಕ್-ಜಯನಗರ ಎಕ್ಸ್‌ಪ್ರೆಸ್ ರೈಲು; ಇಬ್ಬರಿಗೆ ಗಾಯ
ಭಾವಿ ಮಾವನ ಜತೆ ಆಗಾಗ ವಾದ ಮಾಡುವ ಕೆಎಲ್ ರಾಹುಲ್; ಕಾರಣವೇನು? ಎಲ್ಲವನ್ನೂ ಹೇಳಿಕೊಂಡ ಕ್ರಿಕೆಟ್ ತಾರೆ
Published On - 8:17 pm, Sun, 3 April 22