ಭಾವಿ ಮಾವನ ಜತೆ ಆಗಾಗ ವಾದ ಮಾಡುವ ಕೆಎಲ್ ರಾಹುಲ್; ಕಾರಣವೇನು? ಎಲ್ಲವನ್ನೂ ಹೇಳಿಕೊಂಡ ಕ್ರಿಕೆಟ್ ತಾರೆ
KL Rahul | Athiya Shetty | Suniel Shetty: ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಶೆಟ್ಟಿ- ಕೆಎಲ್ ರಾಹುಲ್ ಆಗಾಗ ತಮಾಷೆಯ ಸಂಭಾಷಣೆಗಳನ್ನು ನಡೆಸುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ರಾಹುಲ್ ಭಾವಿ ಮಾವನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸುನೀಲ್ ಶೆಟ್ಟಿ ಜತೆ ವಾದ ಮಾಡುವ ಸಂದರ್ಭಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ತಾರೆ, ಲಕ್ನೋ ಸೂಪರ್ ಜೈಂಟ್ಸ್ ಕ್ರಿಕೆಟ್ ತಂಡದ ನಾಯಕ ಕೆ.ಎಲ್.ರಾಹುಲ್ (KL Rahul) ಕಳೆದ ಕೆಲವು ಸಮಯದಿಂದ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜತೆ ಸುತ್ತಾಡುತ್ತಿದ್ದಾರೆ. ಮೊದಮೊದಲು ಈರ್ವರೂ ತಮ್ಮ ಸಂಬಂಧವನ್ನು ಗುಟ್ಟಾಗಿಟ್ಟಿದ್ದರೂ ಕೂಡ, ಈಗ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವ್ಯಾಲಂಟೈನ್ಸ್ ಡೇ ದಿನ ಆಥಿಯಾ ಜತೆಗಿರುವ ಚಿತ್ರವನ್ನು ಹಂಚಿಕೊಂಡು ರಾಹುಲ್ ಶುಭಾಶಯ ಹೇಳಿದ್ದರು. ಆ ಮೂಲಕ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಆಥಿಯಾ ತಂದೆ ಸುನೀಲ್ ಶೆಟ್ಟಿ ಕನ್ನಡದಲ್ಲೂ ನಟಿಸಿದ್ದು, ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಅವರು ಹಲವು ಬಾರಿ ರಾಹುಲ್ ಹಾಗೂ ಆಥಿಯಾ ಗೆಳೆತನದ ಬಗ್ಗೆ ನಗುತ್ತಾ ಮಾತನಾಡಿದ್ದರು. ಇದೀಗ ರಾಹುಲ್ ಸರದಿ. ಸಾಮಾಜಿಕ ಜಾಲತಾಣದಲ್ಲಿ ಭಾವಿ ಮಾವ- ಅಳಿಯರಾದ ಸುನೀಲ್- ರಾಹುಲ್ ಆಗಾಗ ತಮಾಷೆಯ ಸಂಭಾಷಣೆಗಳನ್ನು ಕಾಮೆಂಟ್ಗಳ ಮೂಲಕ ನಡೆಸುತ್ತಿರುತ್ತಾರೆ. ಇದೀಗ ರಾಹುಲ್ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಅವರೊಂದಿಗೆ ಜತೆ ವಾದ ಮಾಡುವ ಸಂದರ್ಭಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ರಾಹುಲ್ಗೆ ಸದಾ ಫಿಟ್ನೆಸ್ ಬಗ್ಗೆ ಗಮನ ಹರಿಸುವಂತೆ ಹೇಳುತ್ತಿರುತ್ತಾರಂತೆ. ಸುನೀಲ್ ಶೆಟ್ಟಿಗೆ ಈಗ 60ರ ಪ್ರಾಯ. ಆದರೆ ಅವರು ಈ ವಯಸ್ಸಿನಲ್ಲಿ ಯುವಕರೂ ನಾಚುವಂತೆ ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಸಹಜವಾಗಿಯೆ ಫಿಟ್ನೆಸ್, ತಿನ್ನುವ ಆಹಾರ, ಜೀವನ ಶೈಲಿಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ. ರಾಹುಲ್ಗೂ ಈ ಬಗ್ಗೆ ಸುನೀಲ್ ಸದಾ ಎಚ್ಚರಿಸುತ್ತಿರುತ್ತಾರಂತೆ.
ಗೌರವ್ ಕಪೂರ್ರೊಂದಿಗಿನ ಸಂದರ್ಶನದಲ್ಲಿ ರಾಹುಲ್ ಈ ಬಗ್ಗೆ ಮಾತನಾಡಿದ್ದಾರೆ. ಸುನೀಲ್ ಶೆಟ್ಟಿಗಿರುವ ಕ್ರಿಕೆಟ್ ಜ್ಞಾನದ ಬಗ್ಗೆಯೂ ಮಾತನಾಡಿರುವ ರಾಹುಲ್, ‘‘ಇಲ್ಲ, ಅವರು ಕೇವಲ ಕ್ರಿಕೆಟ್ ಫ್ಯಾನ್ ಅಲ್ಲ. ಅವರಿಗೆ ಕ್ರಿಕೆಟ್ ಬಗ್ಗೆ ಆಳವಾದ ಜ್ಞಾನವಿದೆ. ಆಟವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಮ್ಮ ನಡುವೆ ಕ್ರಿಕೆಟ್ ಬಗ್ಗೆ ಚರ್ಚೆಗಳು ನಡೆಯುತ್ತವೆ. ಕೆಲವೊಮ್ಮೆ ವಾದಗಳೂ ನಡೆಯುತ್ತವೆ’’ ಎಂದಿದ್ದಾರೆ.
ಫಿಟ್ನೆಸ್ ಬಗ್ಗೆ ಸುನೀಲ್ ಸಲಹೆ:
ಕೆ.ಎಲ್.ರಾಹುಲ್ಗೆ ಫಿಟ್ನೆಸ್ ಬಗ್ಗೆ ಸುನೀಲ್ ಶೆಟ್ಟಿ ಹೇಳುತ್ತಲೇ ಇರುತ್ತಾರಂತೆ. ‘‘ನೀನು ಫಿಟ್ ಆಗಿರುವುದು ಸಾಲದು. ಆಗಾಗ ಗಾಯಕ್ಕೆ ತುತ್ತಾಗುತ್ತೀಯ. ಆರೋಗ್ಯಕ್ಕೆ ಅವಶ್ಯಕವಾಗಿದ್ದು ಹಾಗೂ ಅಗತ್ಯವಾಗಿದ್ದನ್ನು ನೀನು ತಿನ್ನುತ್ತಿಲ್ಲ’’ ಎಂದು ಕೆಎಲ್ಗೆ ಸುನೀಲ್ ಎಚ್ಚರಿಸುತ್ತಿರುತ್ತಾರಂತೆ. ‘‘ಸುನೀಲ್ ಶೆಟ್ಟಿಯವರಿಗೆ 60 ದಾಟಿದರೂ ಫಿಟ್ ಆಗಿ ವರ್ಕೌಟ್ ಮಾಡುತ್ತಾರೆ. ಅವರಿಗೆ ಸಾಧ್ಯವಿರುವುದು ನನಗೇಕೆ ಸಾಧ್ಯವಾಗಬಾರದು? ಎಂದು ನಾನು ಯೋಚಿಸುತ್ತಿರುತ್ತೇನೆ’’ ಎಂದಿದ್ದಾರೆ ರಾಹುಲ್.
ಶೆಟ್ಟಿ ಕುಟುಂಬದ ನಂಟಿನ ಬಗ್ಗೆ ಮಾತನಾಡಿರುವ ರಾಹುಲ್, ‘‘ನನ್ನ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ಖುಷಿ ಇದೆ. ಸರಳವಾಗಿ ಹೇಳುವುದಾದರೆ, ನನಗೇನು ಬೇಕೋ ಅದು ಆಗುತ್ತಿದೆ’’ ಎಂದು ಸಂತಸ ಹಂಚಿಕೊಂಡಿದ್ದಾರೆ.
ಕೆಲ ಸಮಯದ ಹಿಂದೆ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಮೊದಲ ಚಿತ್ರ ‘ತಡಪ್’ನ ಸ್ಕ್ರೀನಿಂಗ್ಗೆ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಹಿರಂಗವಾಗಿ ಈರ್ವರೂ ಜತೆಯಾಗಿ ಕಾಣಿಸಿಕೊಂಡಿದ್ದು ಅದೇ ಮೊದಲಾಗಿತ್ತು.
ಇದನ್ನೂ ಓದಿ: RRR Box Office Collection: ಬಾಕ್ಸಾಫೀಸ್ನಲ್ಲಿ ‘ಆರ್ಆರ್ಆರ್’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್ಗೆ ಇನ್ನೆಷ್ಟು ದೂರ?
ಬಿಗ್ ಬಾಸ್ ವೈಷ್ಣವಿ ಗೌಡ ಹೊಸ ಸಿನಿಮಾ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ಇದರಲ್ಲಿದೆ ಡಿಫರೆಂಟ್ ಕಾನ್ಸೆಪ್ಟ್