ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ; ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದ ಡಿಕೆ ಶಿವಕುಮಾರ್

| Updated By: Ganapathi Sharma

Updated on: Aug 16, 2023 | 7:03 PM

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ. ಹೊಸ ಪರಿಕಲ್ಪನೆಯಡಿ ಖಾಸಗಿ ಶಾಲೆಗಳು ಒಂದೊಂದು ಸರ್ಕಾರಿ ಶಾಲೆಯನ್ನು ದತ್ತುಪಡೆಯಲಿವೆ. ಅದರಂತೆ ತಾವೂ ಕೂಡ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ; ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಆಗಸ್ಟ್ 16: ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಫಂಡ್​​ನಿಂದ (CSR Fund) ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಶಾಲೆಗಳು ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಬೇಕು. ಹೀಗೊಂದು ಹೊಸ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ಪರಿಕಲ್ಪನೆಯನ್ನು ಹೇಗೆ ಜಾರಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನೂ ಕೂಡ ಮೂರು ಶಾಲೆಗಳ ಮಾಲೀಕ. ನಾನೂ ಪಂಚಾಯಿತಿ ಮಟ್ಟದಲ್ಲಿ 3 ಸರ್ಕಾರಿ ಶಾಲೆ ದತ್ತು ಪಡೆಯುವೆ ಎಂದು ಹೇಳಿದ್ದಾರೆ.

ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಬಿಡುಗಡೆ; ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

ಕೆಆರ್​​ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಪ್ರತಿಪಕ್ಷಗಳು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾಕೆ ನೀರು ಬಿಟ್ಟಿದ್ದೀರಿ ಎಂದು ನಮ್ಮನ್ನು ಪ್ರಶ್ನಿಸಲು ನಮ್ಮ ಬಳಿ ಡ್ಯಾಂನ ಬೀಗ ಇದೆಯಾ ಎಂದು ಮರು ಪ್ರಶ್ನೆ ಮಾಡಿದರು. ಕೆಆರ್​ಎಸ್ ಬೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಇದೆ, ಕೇಂದ್ರ ಸರ್ಕಾರದ ಬಳಿ‌ ಇದೆ ಎಂದು ಹೇಳಿದರು.

ರಾಜಕಾರಣವನ್ನು ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೂ ಕಾನೂನು ಗೊತ್ತಿದೆ. ನೀರು ಯಾರ ನಿಯಂತ್ರಣದಲ್ಲಿ ಇದೆ? ಇದೆಲ್ಲ ಈಗ ಚರ್ಚೆ ಮಾಡಲ್ಲ. 30-40 ವರ್ಷಗಳಲ್ಲಿ ಈಗಲೇ ರಾಜ್ಯದಲ್ಲಿ ಮಳೆ‌ ಕೊರತೆ ಆಗಿರೋದು. ನೀರು ಬಿಡಬೇಡಿ ಅಂತಾ ನಮ್ಮ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕೋರ್ಟ್ ಕೇಳಬೇಕಲ್ಲ, ರೈತರೂ ಕೋರ್ಟ್​​ಗೆ ಅರ್ಜಿ ಹಾಕಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: Cauvery Water Dispute: ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ; ಸುಪ್ರೀಂ ಕೋರ್ಟ್ ಮೊರೆಹೋದ ತಮಿಳುನಾಡು

ಸರ್ಕಾರ ನಡೆಸಬೇಕಾದರೆ ಎಲ್ಲರ ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಕಾನೂನು ಸಲಹೆಗಾರರು ಏನ್ ಹೇಳುತ್ತಾರೆ ಎಂಬುದನ್ನೂ ಸಹ ಕೇಳಬೇಕಲ್ಲ. ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದೆ. ತಮಿಳುನಾಡು ಸರ್ಕಾರ ಕೇಳಿದಷ್ಟು ನೀರು ನಾವು ಬಿಡ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ