ಕೋವಿಡ್‌-19 ಕಾರ್ಯಪಡೆ ಪುನಾರಚನೆ: ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವ, ಆರೋಗ್ಯ ಸಚಿವ ಡಾ ಸುಧಾಕರ್​ಗೆ ಹಿನ್ನಡೆ

| Updated By: Digi Tech Desk

Updated on: May 03, 2021 | 3:47 PM

ರಾಜ್ಯ ಸರಕಾರ ಕೊವಿಡ್​ ಕಾರ್ಯಪಡೆಯನ್ನು ಪುನಾರಚಿಸಿದ್ದು ಡಾ. ಸಿ.ಎನ್​ ಅಶ್ವತ್ಥನಾರಾಯಣ ಅವರಿಗೆ ಈ ಜವಾಬ್ದಾರಿ ನೀಡಿ, ಆರೋಗ್ಯ ಸಚಿವ ಡಾ. ಸುಧಾಕರ್​ ಅವರಿಗೆ ಒಂದು ಕಠಿಣ ಸಂದೇಶವನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೀಡಿದ್ದಾರೆ.

ಕೋವಿಡ್‌-19 ಕಾರ್ಯಪಡೆ ಪುನಾರಚನೆ: ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವ, ಆರೋಗ್ಯ ಸಚಿವ ಡಾ ಸುಧಾಕರ್​ಗೆ ಹಿನ್ನಡೆ
ಉಪ ಮುಖ್ಯಮಂತ್ರಿ, ಡಾ. ಸಿ.ಎನ್ ಅಶ್ವತ್ಥ್ ನಾರಾಯಣ (ಸಂಗ್ರಹ ಚಿತ್ರ)
Follow us on

ಕೊರೋನಾ ನಿಯಂತ್ರಣದಲ್ಲಿ ರಾಜ್ಯದಲ್ಲಿ ಅತ್ಯುನ್ನತ ಮಟ್ಟದ ಸಮಿತಿಯಾದ ಕೋವಿಡ್‌ ಕಾರ್ಯಪಡೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪುನಾರಚಿಸಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರನ್ನು ಕಾರ್ಯಪಡೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಲೋಕೋಪಯೋಗಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಈವರೆಗೂ ಈ ಕಾರ್ಯಪಡೆ ಅಧ್ಯಕ್ಷರಾಗಿದ್ದರು. ಪುನಾರಚನೆಗೊಂಡ ಈ ಕಾರ್ಯಪಡೆಯಲ್ಲಿ ಅಧ್ಯಕ್ಷರಾಗಿ ಡಾ.ಅಶ್ವತ್ಥನಾರಾಯಣ ಜತೆಯಲ್ಲಿ  ಸದಸ್ಯರಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.‌ಸುರೇಶ್‌ ಕುಮಾರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಸಚಿವ ಸಿ.ಸಿ.ಪಾಟೀಲ್‌ ಹಾಗೂ ಆರೋಗ್ಯ & ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್‌ ಇದ್ದಾರೆ.

ಇಡೀ ರಾಜ್ಯದ ಕೋವಿಡ್ ಪರಿಸ್ಥಿತಿಯ ಉಸ್ತುವಾರಿ ಜತೆಗೆ‌, ಉನ್ನತ ಮಟ್ಟದ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಈ ಕಾರ್ಯಪಡೆಗೆ ಇದೆ.

ಡಾ ಸುಧಾಕರ್​ಗೆ ಹಿನ್ನಡೆ?

ಕಳೆದ ವರ್ಷ ವೈದ್ಯಕೀಯ ಶಿಕ್ಷಣ ಖಾತೆಯನ್ನು ತೆಗೆದುಕೊಂಡು ಮಂತ್ರಿಗಿರಿಯನ್ನು ಪ್ರಾರಂಭಿಸಿದರು ಡಾ. ಕೆ. ಸುಧಾಕರ್​. ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಬಿ. ಶ್ರೀರಾಮುಲು ಅವರ ಬಳಿ ಇತ್ತು. ಮೊದಲ ಅಲೆ ಬಂದಾಗ, ಶ್ರೀರಾಮುಲು ವಿಫಲರಾಗಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ಮೇಲೆ ಒತ್ತಡ ಬಂತು. ಆಗ, ಅವರು ಡಾ. ಸುಧಾಕರ್​ ಅವರಿಗೆ ಈ ಜವಾಬ್ದಾರಿ ನೀಡಿದರು.

ಆ ನಂತರ, ಕರ್ನಾಟಕದಲ್ಲಿ ಕೊವಿಡ್​ ಎದುರಿಸುವಲ್ಲಿ ವಿಫಲವಾಗಿದೆ ಎಂಬ ಸಾಕ್ಷ್ಯಾಧಾರಗಳಿಲ್ಲದ ಆರೋಪ ಬಂದಿದ್ದರೂ, ಡಾ. ಸುಧಾಕರ್​ ಈ ಎಲ್ಲ ಟೀಕೆಗಳಿಂದ ಪಾರಾಗಿದ್ದರು. ಈಗ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಒಂದು ಕಠಿಣ ನಿರ್ಧಾರ ತೆಗೆದುಕೊಂಡು, ಕೊವಿಡ್​ ಕಾರ್ಯಪಡೆ ಪುನರಚಿಸಿದ್ದಾರೆ. ಪಕ್ಷದ ಮೂಲನಿವಾಸಿಯಾದ, ಡಾ ಸಿ.ಎನ್​. ಅಶ್ವತ್ಥನಾರಾಯಣ ಅವರಿಗೆ ಈ ಜವಾಬ್ದಾರಿ ವಹಿಸುವ ಮೂಲಕ ಡಾ ಸುಧಾಕರ್​ ಅವರಿಗೆ ಒಂದು ಸಂದೇಶ ನೀಡಿದ್ದಾರೆ. ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಮತ್ತು ಆರೋಗ್ಯ ಸಚಿವರಾಗಿ ಡಾ ಸುಧಾಕರ್​ ಅವರ ಕೆಲಸ  ಅಷ್ಟೇನು ಸಂತೃಪ್ತಿ ತಂದಿಲ್ಲ ಎಂಬ ಸಂದೇಶ ಡಾ. ಸುಧಾಕರ್​ಗೆ ಹೋಗಿದೆ ಎಂದು, ಹೆಸರು ಹೇಳಲಿಚ್ಚಿಸದ ಮಂತ್ರಿಯೋರ್ವರು ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ:

ಆಕ್ಸಿಜನ್ ವ್ಯತ್ಯಯ: 24 ಜನರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ ಎಂದ ಸಚಿವ ಸುರೇಶ್ ಕುಮಾರ್

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ; 4 ದಿನದಿಂದ ತುಮಕೂರಿನ ವ್ಯಕ್ತಿ ಪರದಾಟ

(DCM Dr CN Ashwath Narayan appointed Karnataka Covid Task Force and CM BS Yediyurappa sent strongl signal to health minister Dr K Sudhakar)