ಮಂಗನ ಕಾಯಿಲೆಗೆ ವೃದ್ಧ ಬಲಿ: ಆರೋಗ್ಯ ಇಲಾಖೆ ಹೈಅಲರ್ಟ್, ಮನೆ ಮನೆಗೆ ತೆರಳಿ ಔಷಧಿ ವಿತರಣೆ

| Updated By: ಆಯೇಷಾ ಬಾನು

Updated on: Feb 04, 2024 | 12:15 PM

ಕಾಫಿನಾಡಲ್ಲಿ ಕೊಂಚ ರಿಲೀಫ್ ಎನಿಸಿದ್ದ ಮಂಗನ ಕಾಯಿಲೆ ಭೀತಿ ಮತ್ತೆ ಹೆಚ್ಚಾಗಿದೆ. ಸರ್ಕಾರ ವ್ಯಾಕ್ಸಿನೇಷನ್ ನಿಲ್ಲಿಸಿದೆ. ಕಡಿಮೆಯಾಯ್ತು ಅನ್ನೋವಷ್ಟರಲ್ಲಿ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೂವರಲ್ಲಿ ಓರ್ವ ಸಾವನ್ನಪ್ಪಿದ್ರೆ ಮತ್ತಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯು KFD ಬಗ್ಗೆ ಅಲರ್ಟ್​ ಆಗಿದೆ.

ಮಂಗನ ಕಾಯಿಲೆಗೆ ವೃದ್ಧ ಬಲಿ: ಆರೋಗ್ಯ ಇಲಾಖೆ  ಹೈಅಲರ್ಟ್, ಮನೆ ಮನೆಗೆ ತೆರಳಿ ಔಷಧಿ ವಿತರಣೆ
ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ
Follow us on

ಚಿಕ್ಕಮಗಳೂರು, ಫೆ.04: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ (Monkey Pox) ವೃದ್ಧ ಬಲಿಯಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾದ್ಯಂತ ಆರೋಗ್ಯ ಇಲಾಖೆ (Health Departmnet) ಹೈಅಲರ್ಟ್ ಆಗಿದೆ. ಮೃತಪಟ್ಟಿರುವ ವೃದ್ಧ ಸೇರಿದಂತೆ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರಿಗಳು KFD (Kyasanur Forest Disease) ವಾರ್ಡ್ ತೆರೆದಿದ್ದಾರೆ. ಶೃಂಗೇರಿಯಲ್ಲಿ 1, ಕೊಪ್ಪ ತಾಲೂಕಿನಲ್ಲಿ ಇಬ್ಬರಲ್ಲಿ KFD ಸೋಂಕು ಪತ್ತೆಯಾಗಿದೆ.

ನಿನ್ನೆ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ವೃದ್ಧ(79) ಮೃತಪಟ್ಟಿದ್ದರು. ಮೃತ ವೃದ್ಧ ವಾಸಿಸುತ್ತಿದ್ದ ಶೃಂಗೇರಿ ತಾಲೂಕಿನ ಬೇಗನೆ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಶೃಂಗೇರಿ, ಕೊಪ್ಪ ತಾಲೂಕಿನ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅರಣ್ಯದಲ್ಲಿ ಕೆಎಫ್​ಡಿ ಸೋಂಕು ಹರಡದಂತೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಇನ್ನು ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡ್ತಿದ್ದಾರೆ. ಗ್ರಾಮದಲ್ಲಿ ಮೃತಪಟ್ಟಿರುವ ಮಂಗಗಳ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದ್ದಾರೆ.

ಹೆಮ್ಮಾರಿ KFD ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಮೂರು ತಾಲೂಕುಗಳಲ್ಲಿ ಆತಂಕ ಸೃಷ್ಟಿಸಿದೆ. ಶಿವಮೊಗ್ಗ-ಉತ್ತರಕನ್ನಡಕ್ಕೆ ಹೊಂದಿಕೊಂಡಂತಿರುವ ಕಾಫಿನಾಡ ಮಲೆನಾಡು ಭಾಗದಲ್ಲಿ ಪ್ರತಿ ವರ್ಷ KFD. ಆತಂಕ ಇದ್ದೇ ಇರುತ್ತೆ. ಆದರೆ ಎರಡು ವರ್ಷದಿಂದ ಕೊಂಚ ರಿಲೀಫ್ ಆಯ್ತು ಎನ್ನುವಷ್ಟರಲ್ಲಿ ಶೃಂಗೇರಿ ಒಂದು, ಕೊಪ್ಪ ತಾಲೂಕಿನಲ್ಲಿ ಎರಡು ಒಟ್ಟು ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಮೂವರಲ್ಲಿ ಶೃಂಗೇರಿಯ ಬೇಗಾನೆ ಗ್ರಾಮದ ಓರ್ವ ವೃದ್ಧ ಸಾವನ್ನಪ್ಪಿರೋದು ಮಲೆನಾಡನ್ನ ಆತಂಕಕ್ಕೆ ದೂಡಿದೆ. ಇನ್ನು ಎನ್.ಆರ್.ಪುರ ತಾಲೂಕಿನಲ್ಲಿಯೂ KFD ಭಯ ಇದ್ದೇ ಇದೆ. ಮಲೆನಾಡಲ್ಲಿ KFD ಕನ್ಫರ್ಮ್ ಆಗಿರೋ ಮೂವರಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ; ಜನರಲ್ಲಿ ಹೆಚ್ಚಿದ ಆತಂಕ

ಇನ್ನು ಆರೋಗ್ಯ ಇಲಾಖೆಯು KFD ಬಗ್ಗೆ ಅಲರ್ಟ್​ ಆಗಿದೆ. ಈಗಾಗಲೇ KFD ಪತ್ತೆಯಾದ ಕಡೆಗಳಲ್ಲಿ 2 ಕಿ.ಮೀ. ರೆಡ್ ಝೋನ್ ಮಾಡಲಾಗಿದ್ದು, ಅಲ್ಲಿ ಜ್ವರದಂತಹ ಲಕ್ಷಣವಿದ್ದರೇ ತಕ್ಷಣವೇ ಪರೀಕ್ಷೆಗೆ ಇಲಾಖೆ ಮುಂದಾಗಿದೆ. ಈಗ ಪತ್ತೆಯಾಗಿರುವವರಲ್ಲಿ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಕಾಡಿನೊಳಗೆ ಹೋಗಿರೋರು ಅಲ್ಲ. ಕಾಫಿ ತೋಟದ ಕಾರ್ಮಿಕರೂ ಅಲ್ಲ. ಎಲ್ಲಿಂದ ಬಂತು ಅನ್ನೋದು ಯಕ್ಷಪ್ರಶ್ನೆಯಾಗಿದೆ. 2 ವರ್ಷದ ಹಿಂದೆ ಮಂಗನಕಾಯಿಲೆ ಭೀತಿ ಕಡಿಮೆಯಾಗಿರೋದ್ರಿಂದ ಸರ್ಕಾರ ವ್ಯಾಕ್ಸಿನೇಷನ್ ಕೂಡ ನಿಲ್ಲಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ