ದೀಪಾವಳಿ: ಪಟಾಕಿ ಬಳಕೆಗೆ ಜಿಲ್ಲಾಡಳಿತದಿಂದ ಹಲವು ನಿಯಮ; ಲೈಸನ್ಸ್​​ ಸಿಗದೆ ವ್ಯಾಪಾರಸ್ಥರು ಪರದಾಟ

| Updated By: ವಿವೇಕ ಬಿರಾದಾರ

Updated on: Nov 10, 2023 | 9:31 AM

ಧಾರವಾಡ ಜಿಲ್ಲೆಯಲ್ಲಿ ನಿಷೇಧಿತ ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಿಯಮ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ.

ದೀಪಾವಳಿ: ಪಟಾಕಿ ಬಳಕೆಗೆ ಜಿಲ್ಲಾಡಳಿತದಿಂದ ಹಲವು ನಿಯಮ; ಲೈಸನ್ಸ್​​ ಸಿಗದೆ ವ್ಯಾಪಾರಸ್ಥರು ಪರದಾಟ
ಪಟಾಕಿ
Follow us on

ಬೆಂಗಳೂರು ನ.10: ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ಎರಡು ಪಟಾಕಿ (Firecrackers) ದುರಂತದಿಂದ ಸಾವು-ನೋವುಗಳಾಗಿದ್ದವು. ಇದರಿಂದ ಎಚ್ಚತ್ತ ರಾಜ್ಯ ಸರ್ಕಾರ ದೀಪಾವಳಿ (Deepawali) ಹೊರತು ಪಡಿಸಿ ಉಳಿದ ಯಾವುದೇ ಸಭೆ-ಸಮಾರಂಭ, ರಾಜಕೀಯ ಕಾರ್ಯಕ್ರಮ, ರ‍್ಯಾಲಿಗಳಲ್ಲಿ ಪಟಾಕಿ ಹಾರಿಸುವುದನ್ನು ನಿಷೇಧಿಸಿದೆ. ಇನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿ ಹಾರಿಸಲು ಮಾತ್ರ ಅವಕಾಶ ನೀಡಿದೆ. ಒಂದು ವೇಳೆ ನಿಯಮ ಮೀರಿದರೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಪಟಾಕಿ ದುರಂತದ ಬಳಿಕ ಸರ್ಕಾರ ಪಟಾಕಿ ವ್ಯಾಪರಕ್ಕೆ ಕಟ್ಟುನಿಟ್ಟನ ಕ್ರಮಗಳನ್ನು ಜಾರಿಗೆ ಮಾಡಿದೆ. ಇದರಿಂದ ಪಟಾಕಿ ವ್ಯಾಪಾರಸ್ಥರಿಗೆ ಸಂಕಷ್ಟ ಶುರುವಾಗಿದೆ.

ಬೆಂಗಳೂರು ನಗರ ಪೊಲೀಸ್​ ಇಲಾಖೆ 320 ಪಟಾಕಿ ಅಂಗಡಿಗಳಿಗೆ ಮಾತ್ರ ಅನುಮತಿ ನೀಡಿದೆ. ಇಲಾಖೆ ನಿಗದಿಪಡಿಸಿದ 62 ಮೈದಾನಗಳಲ್ಲಿ ಮಾತ್ರ ಅಂಗಡಿಗಳನ್ನು ಹಾಕಬೇಕು. ಒಟ್ಟು 964 ಜನರು ಲೈಸೆನ್ಸ್​​ಗಾಗಿ ಅರ್ಜಿ ಹಾಕಿದ್ದರು. ಈ ಪೈಕಿ 263 ಜನರಿಗೆ ಲಾಟರಿ ಮೂಲಕ ಲೈಸೆನ್ಸ್ ನೀಡಲಾಗಿದೆ. ಉಳಿದವರು ಈ ಹಿಂದೆ (ಪಿಸೋ) ಮೂಲಕ ಲೈಸೆನ್ಸ್​​​​​ ಪಡೆದಿದ್ದರು.

ಅತ್ತಿಬೆಲೆ ಹಾಗೂ ಹೊಸುರು ರಸ್ತೆಯಲ್ಲಿ 140 ಪಟಾಕಿ ಅಂಗಡಿಗಳಿಗೆ ಮಾರಾಟಕ್ಕೆ ಅವಕಾಶ ಸಿಕ್ಕಿಲ್ಲ. ಪೊಲೀಸ್​​ರು ಅಂಗಡಿಗಳಿಗೆ ನೋಟಿಸ್ ನೀಡಿ ಸೀಜ್ ಮಾಡಿದ್ದಾರೆ. ಆದರೆ ಮಾರಟಗಾರರು ಕಳೆದ ಆರು ತಿಂಗಳ ಮೊದಲೆ, ಲಕ್ಷಂತಾರ ರೂಪಾಯಿ ಹೂಡಿಕೆ ಮಾಡಿ ಪಟಾಕಿ ಖರೀದಿ ಮಾಡಿದ್ದಾರೆ. ಆದರೆ ಈಗ ಸರ್ಕಾರ ಪಟಾಕಿ ಮಾರಟಕ್ಕೆ ಬ್ರೇಕ್ ಹಾಕಿದೆ. ಈ ಹಿನ್ನೆಲೆಯಲ್ಲಿ ವ್ಯಾಪರಸ್ಥರು ತಮಿಳುನಾಡಿಗೆ ಹೋಗಿ ಪಟಾಕಿ ಮಾರಟ ಮಾಡುತ್ತಿದ್ದಾರೆ.

ಆದರೆ ತಮೀಳುನಾಡಿನಲ್ಲೂ ಪಟಾಕಿ ಮಾರಟ ಮಾಡಲು ತಮಿಳನಾಡಿನ ವ್ಯಾಪರಸ್ಥರು ಬಿಡುತ್ತಿಲ್ಲ. ಹೀಗಾಗಿ ಸದ್ಯ ಖರೀದಿ ಮಾಡಿರುವ ಸ್ಟಾಕ್ ಕ್ಲೀಯರ್ ಮಾಡೋದಕ್ಕೆ ಆದರೂ ಮೂರೇ ಮೂರು ದಿನಗಳ ಕಾಲ ಅವಕಾಶ ನೀಡುವಂತೆ ಸರ್ಕಾರಕ್ಕೆ ಪಟಾಕಿ ವ್ಯಾಪಾರಸ್ಥರು ಮನವಿ ಸಲ್ಲಿಸಲಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ನಿಷೇಧಿತ ಪಟಾಕಿ ಮಾರಾಟ, ಬಳಕೆಗೆ ನಿರ್ಬಂಧ

ಧಾರವಾಡ: ಜಿಲ್ಲೆಯಲ್ಲಿ ನಿಷೇಧಿತ ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಿಯಮ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ. ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಹಸಿರು ಪಟಾಕಿ ಚಿಹ್ನೆ, ಕ್ಯೂಆರ್ ಕೋಡ್ ನೋಡಿ ಖರೀದಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಪಟಾಕಿ ಮಾರಾಟ ಮತ್ತು ಬಳಕೆಗೆ ಜಿಲ್ಲಾಡಳಿತದಿಂದ ಸುತ್ತೋಲೆ

ಮೈಸೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಯತ್ರಿಸುವ ಕುರಿತು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ಧ ಹಾಗು ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆ ಹಿನ್ನೆಲೆಯಲ್ಲಿ ಹಲವು ನಿಯಮ ಜಾರಿ ಮಾಡಿದೆ. ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರಿದೆ.

ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಜೊತೆಗೆ ಕ್ಯೂ ಅರ್ ಕೋಡ್ ಇರುತ್ತದೆ. ಈ ಪಟಾಕಿಗಳನ್ನೇ ಬಳಸಿ. ಸದರಿ ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯಲ್ಲ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದಿದೆ.

ಇದನ್ನೂ ಓದಿ: Deepavali 2023: ದೇಶಾದ್ಯಂತ ಪಟಾಕಿ ನಿಷೇಧಿಸಿ ಸುಪ್ರೀಂಕೋರ್ಟ್ ತೀರ್ಪು, ಹಸಿರು ಪಟಾಕಿಗೆ ಮಾತ್ರ ಅವಕಾಶ

ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಫೋಟಕ್ಕೆ ಸಂಪೂರ್ಣ ನಿರ್ಬಂಧಿಸಲಾಗಿದೆ. ಪಟಾಕಿಗಳು ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಡೆಸಿಬಲ್‌ಗಳಿಗಿಂತ ಅಥವಾ 145 ಡೆಸಿಬಲ್​ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ ಮಾರಾಟ ಹಾಗೂ ಬಳಕೆಗೆ ಬ್ರೇಕ್ ಹಾಕಿದೆ.

ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ. ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ಇತ್ಯಾದಿ ಸುತ್ತ ಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆ ಮಾಡುವಂತಿಲ್ಲ. ಯಾವುದೇ ಕ್ರಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆಯನುಸಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದೆ.

ದೀಪಾವಳಿ ಹಬ್ಬವನ್ನು ಸಿಡಿಮದ್ದು, ಪಟಾಕಿಗಳನ್ನು ಉಪಯೋಗಿಸದೇ, ಬೆಳಕಿನ ಹಬ್ಬವನ್ನಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹೊಸ ನಿಯಮಾವಳಿ ಹಾಕಿದ್ದು ಕಾಂಗ್ರೆಸ್​​ ಸರ್ಕಾರದ ಹುನ್ನಾರ: ಬಿಜೆಪಿ ಶಾಸಕ

ಮಂಗಳೂರು: ಪಟಾಕಿ ಮಳಿಗೆ ಹಾಕಲು ಹೊಸ ನಿಯಮಾವಳಿ ಹಾಕಿದ್ದು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಹುನ್ನಾರ ಎಂದು ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಗಂಭೀರ ಆರೋಪ ಮಾಡಿದ್ದಾರೆ. ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿ ಮಾಡಲಾಗುತ್ತಿದೆ. ಹಿಂದುಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿಯೇ ಅಡ್ಡಿ ಮಾಡುತ್ತಿದ್ದಾರೆ. ಈ ಮೂಲಕ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ ಎಂದು ವಾಗ್ದಾಳಿ ಮಾಡಿದರು.

ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಪಟಾಕಿ ವಿಷಯದಲ್ಲಿ ಇಲ್ಲ ಸಲ್ಲದ ನಿಯಮಾವಳಿ ಹೇರಲಾಗಿದೆ. ಹಿಂದೂ ಧಾರ್ಮಿಕ ಆಚರಣೆಗಳಿಗೆ ಹಂತ ಹಂತವಾಗಿ ಕಡಿವಾಣ ಹಾಕಲಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ. ಇನ್ನಿತರ ಯಾವುದೇ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಈ ನಿಯಮ, ಕಡಿವಾಣ ಚಾಲನೆಗೆ ಬರಲ್ಲ. ಏಕೆಂದರೆ ನಿಯಮಾವಳಿ ಹಾಕಲು ಕಾಂಗ್ರೆಸ್ ಸರ್ಕಾರಕ್ಕೆ ಧೈರ್ಯವೂ ಇಲ್ಲ. ಅವರ ಪೌರುಷ ಏನಿದ್ದರೂ ಕೇವಲ ಹಿಂದುಗಳ ಮೇಲೆ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಪಟಾಕಿ ವಿಷಯವನ್ನು ಮುನ್ನಲೆಗೆ ತಂದಿದೆ. ಜಿಲ್ಲೆಯಲ್ಲಿ ಪಟಾಕಿ ಮಳಿಗೆ ತೆರೆಯಲು ಈವರೆಗೂ ಇಲ್ಲದಿದ್ದ ಹೊಸ ನಿಯಮಗಳನ್ನು ಹೇರಲಾಗಿದೆ. ಈ ಬಾರಿ ಕೇವಲ ಮೂರ್ನಾಲ್ಕು ಮೈದಾನದಲ್ಲಿ ಮಾತ್ರ ಪಟಾಕಿ ಅಂಗಡಿ ಹಾಕಲು ಅವಕಾಶ ನೀಡಲಾಗಿದೆ ಆದರೆ ಎಷ್ಟೋ ಕಡೆಗಳಲ್ಲಿ ಮೈದಾನಗಳೇ ಇಲ್ಲ. ಈ ಹಿಂದೆ ಅಲ್ಲಿ ಪಟಾಕಿ ಅಂಗಡಿಗಳನ್ನು ಹಾಕುತ್ತಿದ್ದವರು ಈಗ ಎಲ್ಲಿ ಹೋಗಬೇಕು. ಅಗ್ನಿಶಾಮಕ, ಪೊಲೀಸ್, ಮಹಾನಗರ ಪಾಲಿಕೆಗಳಿಗೆ ಪಟಾಕಿ ಮಳಿಗೆ ಹಾಕುವವರು ಅಲೆಯುತ್ತಿದ್ದಾರೆ. ಒಂದೊಂದು ಕಚೇರಿ ಅಲೆದರೂ ಕೂಡ ತಾತ್ಕಾಲಿಕವಾಗಿ ಪಟಾಕಿ ಹಾಕುವವರ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆಲ್ಲ ನೇರ ಕಾರಣ ರಾಜ್ಯ ಸರ್ಕಾರ ಸೃಷ್ಟಿಸಿದ ಅನಗತ್ಯ ಗೊಂದಲ ಎಂದರು.

ತಾತ್ಕಾಲಿಕ ಪಟಾಕಿ ಅಂಗಡಿ ಹಾಕುವವರು ಸುರಕ್ಷತಾ ದೃಷ್ಟಿಯ ಎಲ್ಲಾ ನೀತಿ ನಿಯಮ ಪಾಲಿಸಲು ಸಿದ್ದರಿದ್ದಾರೆ. ಆದರೆ ಈವರೆಗೂ ಇಲ್ಲದ ಅವೈಜ್ಞಾನಿಕ ನೀತಿ ನಿಯಮಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಜಿಲ್ಲಾಡಳಿತ ಹೆಚ್ಚುವರಿ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:27 am, Fri, 10 November 23