ದೇವನಹಳ್ಳಿ, ಮಾರ್ಚ್ 28: ಸಿಲಿಕಾನ್ ಸಿಟಿ ಅಂದರೆ ಇತ್ತೀಚೆಗೆ ಟ್ರಾಪಿಕ್ನಿಂದಾಗಿ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಪೀಕ್ ಅವರ್ನಲ್ಲಿ ಪೀಣ್ಯ ಕಡೆಯಿಂದ ಹಾಸನ- ತುಮಕೂರು ಹೆದ್ದಾರಿ (highway) ತಲುಪಲು ಸವಾರರು ಹೈರಣಾಗುತ್ತಿದ್ದರು. ಆದರೆ ಈಗ ಸಿಟಿ ಹೊರ ವಲಯದಲ್ಲಿ ಜನರಿಗೆ ಸಂಚಾರಕ್ಕೆ ಹೈಟೆಕ್ ಹೈವೆ ಮುಕ್ತವಾಗಿದೆ. ಆ ಮೂಲಕ ಹೆದ್ದಾರಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವ ಜೊತೆಗೆ ಸುರಕ್ಷತೆಗೂ ಒತ್ತು ನೀಡಲಾಗಿದೆ. ಹೊಸಕೋಟೆಯಿಂದ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ದಾಬಸ್ ಪೇಟೆವರೆಗೂ ಹೆದ್ದಾರಿ ನಿರ್ಮಾಣವಾಗಿದೆ.
ಅಂದಹಾಗೆ ಇಷ್ಟು ದಿನ ಆಂಧ್ರದ ಚಿತ್ತೂರು ತಮಿಳುನಾಡಿನ ಚೆನೈನಿಂದ ಮಂಗಳೂರಿಗೆ ಹೋಗಲು ಬರ್ತಿದ್ದ ವಾಹನ ಸವಾರರು ಸಿಟಿ ಒಳಗಡೆ ಪ್ರವೇಶವಾಗಿ ಪೀಣ್ಯ ಫ್ಲೈ ಓವರ್ ಮೂಲಕ ನೆಲಮಂಗಲ ತಲುಪಿ ಹೆದ್ದಾರಿಯಲ್ಲಿ ಗಂಟೆ ಗಟ್ಟಲೆ ಕಾದು ತೆರಳುತ್ತಿದ್ದರು. ಆದರೆ ಇದೀಗ ಸಿಟಿ ಹೊರವಲಯದಲ್ಲಿ ನೂತನ ಹೆದ್ದಾರಿ ನಿರ್ಮಾಣವಾಗಿದ್ದು ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರವರೆಗೂ ಸಂಪೂರ್ಣ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.
ಇದನ್ನೂ ಓದಿ: ದೇವನಹಳ್ಳಿ: ಯೂಟ್ಯೂಬ್ ನೋಡಿ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ಭರ್ಜರಿ ಸೇಬು ಬೆಳೆದ ರೈತ
ಕೋಲಾರ ಬೆಂಗಳೂರು ಹೆದ್ದಾರಿಯಿಂದ ಆರಂಭವಾಗುವ ನೂತನ ಹೆದ್ದಾರಿ ದೇವನಹಳ್ಳಿ ದೊಡ್ಡಬಳ್ಳಾಪುರ ಮೂಲಕ ಪಟ್ಟಣಗಳನ್ನ ಪ್ರವೇಶಿಸದೆ ಹೊರವಲಯದ ಫ್ಲೈ ಓವರ್ಗಳ ಮೂಲಕ ಸಾಗಿದ್ದು ಎಲ್ಲೆಡೆ ಕಿಲೋ ಮೀಟರ್ಗೆ ಒಂದರಂತೆ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಜೊತೆಗೆ ಒಂದು ಬದಿಯಲ್ಲಿ ಎರಡು ಹಾಗೂ ಮೂರು ಪಥಗಳ ಹೆದ್ದಾರಿಯನ್ನ ಮಾಡಲಾಗಿದ್ದು ಇಷ್ಟು ದಿನ ಹೊಸಕೋಟೆಯಿಂದ ದಾಬಸ್ ಪೇಟೆಗೆ ಮೂರು ಗಂಟೆಗೂ ಹೆಚು ಕಾಲ ಸಂಚರಿಸುತ್ತಿದ್ದ ವಾಹನ ಸವಾರರು ಇದೀಗ ಒಂದು ಗಂಟೆಯಲ್ಲೆ ಹೊಸಕೋಟೆಯಿಂದ ದಾಬಸ್ ಪೇಟೆಯನ್ನ ತಲುಪುತ್ತಿದ್ದಾರೆ.
ನೂತನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್ನ್ನು ಸಹ ದೂರದಿಂದಲೆ ರೀಡ್ ಮಾಡಬಹುದಾದಂತ ಹೈಟೆಕ್ ಕ್ಯಾಮೆರಾಗಳನ್ನ ಅಳವಡಿಸಿದ್ದು ಟೋಲ್ ಪ್ಲಾಜಾ ಬಳಿ ಕೂತು ವಾಹನಗಳ
ಮೇಲೆ ಹದ್ದಿನ ಕಣ್ಣಿಡಬಹುದಾಗಿದೆ. ಜೊತೆಗೆ ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೂ ನೂತನ ಹೆದ್ದಾರಿ ಸಹಕಾರಿಯಾಗ್ತಿದೆ. ಜೊತೆಗೆ ಸಂಪೂರ್ಣ ಹೆದ್ದಾರಿಯ ಪ್ಲಾಜಾ ಕಛೇರಿ, ಸಿಸಿ ಕ್ಯಾಮರಾ ಹಾಗೂ ಬೀದಿ ದೀಪಗಳು ಸೋಲಾರ್ ಪವರ್ನಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಾಕಷ್ಟು ವಿದ್ಯುತ್ ಸಹ ಉಳಿತಾಯವಾಗುತ್ತಿದೆ.
ಇದನ್ನೂ ಓದಿ: Karaga: ಕರಗ ಹೊರಲು ಮೂರು ಗುಂಪುಗಳ ಕಿತ್ತಾಟ, ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ರದ್ದು
ರಾಜ್ಯದ ಮೊದಲ ಬೂತ್ ಲೆಸ್ ಟೋಲ್ ಪ್ಲಾಜಾ ಹೆದ್ದಾರಿ ಸಹ ಇದಾಗಿದ್ದು, ಸಿಲಿಕಾನ್ ಸಿಟಿಯಿಂದ ಧರ್ಮಸ್ಥಳ, ಮಂಗಳೂರು, ತುಮಕೂರು ಹೆದ್ದಾರಿ ತಲುಪುವ ವಾಹನ ಸವಾರರಿಗೆ ನೂತನ ಹೈಟೆಕ್ ಹೆದ್ದಾರಿ ಸಹಕಾರಿಯಾಗಿದ್ದು ನೂತನ ಹೆದ್ದಾರಿ ಬಗ್ಗೆ ವಾಹನ ಸವಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಗಂಟೆ ಗಟ್ಟಲೆ ಕಾದು ನಿಲ್ಲಬೇಕು ಅಂತ ಗೊಣಗಾಡುವ ವಾಹನ ಸವಾರರಿಗೆ ಇದೀಗ ಸಿಟಿ ಹೊರವಲಯ ಹೈವೆಗಳನ್ನ ತಲುಪಲು ನೂತನ ಹೆದ್ದಾರಿ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿರುವುದು ಖುಷಿ ತಂದಿಕೊಟ್ಟಿರುವುದಂತ್ತು ಸುಳ್ಳಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:55 pm, Thu, 28 March 24