ಧಾರವಾಡ: ಕನ್ನಡ ಚಲನಚಿತ್ರ ರಂಗದ ಯುವ ನಾಯಕ ನಟ ಚಿರಂಜೀವಿ ಸರ್ಜಾ ನಿನ್ನೆ ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಕೇವಲ 39 ವರ್ಷ ವಯಸ್ಸಿನಲ್ಲಿಯೇ ಅವರು ಹೃದಯಾಘಾತದಿಂದ ಚಿರನಿದ್ರೆಗೆ ಜಾರಿರೋದು ಚಿತ್ರರಂಗಕ್ಕೆ ದೊಡ್ಡ ನಷ್ಟವಾದಂತಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಕಲಾವಿದರೊಬ್ಬರು ವಿಭಿನ್ನವಾಗಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಧಾರವಾಡದ ಪ್ರಸಿದ್ಧ ಕಲಾವಿದ ಡಾ. ಮಂಜುನಾಥ ಬಾರಗೇರ ತಮ್ಮ ಹೊಗೆಯ ಕಲೆಯ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಂಜುನಾಥ ಹೊಗೆಯ ಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು. ಪೇಪರ್ಗೆ ಹೊಗೆ ಹತ್ತಿಸಿ ಬಳಿಕ ಅದರಲ್ಲಿ ಚಿತ್ರವನ್ನು ಅರಳಿಸೋದು ಅವರಿಗೆ ಸಿದ್ಧಿಸಿರೋ ವಿಭಿನ್ನ ಕಲೆ. ಹೀಗಾಗಿ ತಮ್ಮ ಕಲಾಸೇವೆಯ ಮೂಲಕ ಅಗಲಿದ ಕನ್ನಡದ ಯುವ ನಟನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಭಾವಚಿತ್ರವನ್ನು ಹೊಗೆಯಲ್ಲಿಯೇ ಅರಳಿಸಿ, ಮೃತನ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸೋ ಶಕ್ತಿಯನ್ನು ನೀಡಲಿ ಅಂತಾ ದೇವರಲ್ಲಿ ಪ್ರಾರ್ಥಿಸಿದ್ದಾರೆ.