ಧಾರವಾಡ, ನವೆಂಬರ್ 23: 545 ಪಿ.ಎಸ್.ಐ. ಹುದ್ದೆಗಳಿಗೆ ಮರು ಪರೀಕ್ಷೆ (PSI recruitment re exam) ನಡೆಸುವಂತೆ ಇತ್ತೀಚಿಗಷ್ಟೇ ಹೈಕೋರ್ಟ್ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಪರೀಕ್ಷೆ ನಡೆಸೋ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ನೀಡಿತ್ತು. ಪ್ರಾಧಿಕಾರ ಸರಿಯಾಗಿ ಇನ್ನು ಒಂದು ತಿಂಗಳಿಗೆ, ಡಿಸೆಂಬರ್ 23 ರಂದು ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಆದರೆ ಮರುಪರೀಕ್ಷೆಯನ್ನು ಸ್ವಾಗತಿಸಿದ್ದ ಅಭ್ಯರ್ಥಿಗಳು (Candidates) ಮುಂದಿನ ತಿಂಗಳು ಪರೀಕ್ಷೆ ನಡೆಸಲು ನಿರ್ಧರಿಸಿರೋ ಪ್ರಾಧಿಕಾರದ ತೀರ್ಮಾನವನ್ನು ವಿರೋಧಿಸಿದ್ದಾರೆ. ಇದಕ್ಕೆ ಕಾರಣವಾದರೂ ಏನು? ಇಲ್ಲಿದೆ ನೋಡಿ.
ಮೂರು ವರ್ಷಗಳ ಹಿಂದೆ ನಡೆದಿದ್ದ 545 ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಸಾಕಷ್ಟು ಒತ್ತಡ ಬಂದ ಬಳಿಕ ಸರಕಾರ ಈ ಬಗ್ಗೆ ತನಿಖೆ ನಡೆಸಿದಾಗ ಅನೇಕ ಅಧಿಕಾರಿಗಳು ಕೂಡ ಜೈಲು ಸೇರುವಂತಾಯಿತು. ಆಗ ಪರೀಕ್ಷೆ ನಡೆಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ ಸಾಕಷ್ಟು ಅಕ್ರೋಶವೂ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಅನೇಕ ಪರೀಕ್ಷಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದರು. ಅತ್ತ ಈ ಸಿಒಡಿ ತನಿಖೆ ನಡೆದು, ಈಗಾಗಲೇ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು, ಇತ್ತ ಅನೇಕರು ಹೈಕೋರ್ಟ್ ಮೊರೆ ಹೋಗಿದ್ದರಿಂದ, ಹೈಕೋರ್ಟ್ ಈ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವಂತೆ ಆದೇಶ ಮಾಡಿತ್ತು. ಆದರೆ ಈ ಬಾರಿ ಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆಯಿಂದ ನಡೆಸಲು ಸೂಚನೆ ನೀಡಿತ್ತು. ರಾಜ್ಯ ಸರಕಾರ ಇದರ ಹೊಣೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿತ್ತು. ಪರೀಕ್ಷಾರ್ಥಿಗಳು ಮರುಪರೀಕ್ಷೆಯನ್ನೇನೋ ಸ್ವಾಗತಿಸಿದ್ದಾರೆ. ಆದರೆ ಇದೀಗ ಡಿಸೆಂಬರ್ 23 ರಂದು ಪರೀಕ್ಷೆ ನಡೆಸೋ ನಿರ್ಧಾರವನ್ನು ವಿರೋಧಿಸಿದ್ದಾರೆ.
ಡಿಸೆಂಬರ್ 23 ಅಂದರೆ ತುಂಬಾನೇ ಕಡಿಮೆ ಅವಧಿ ಇದೆ. ಅಲ್ಲದೇ ನಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡೋ ಪ್ರಶ್ನೆ ಪತ್ರಿಕೆಯ ಮಾದರಿಯೂ ಗೊತ್ತಿಲ್ಲ. ಯಾವ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತೆ ಅನ್ನೋದನ್ನು ತಿಳಿಸಬೇಕು. ಅಲ್ಲದೇ ಪರೀಕ್ಷೆಗೆ ಮೂರು ತಿಂಗಳ ಕಾಲಾವಕಾಶ ನೀಡಬೇಕು. ನಾವು ಮರುಪರೀಕ್ಷೆಗಾಗಿ ಹೋರಾಟದಲ್ಲಿಯೇ ವೇಳೆಯನ್ನು ಕಳೆದಿದ್ದೇವೆ. ಹೋರಾಟ, ಪ್ರತಿಭಟನೆಗಾಗಿಯೇ ಸಾಕಷ್ಟು ಸಮಯ ವ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ನಮಗೆ ಅಭ್ಯಾಸ ಮಾಡಲು ಆಗಿಲ್ಲ. ಹೀಗಾಗಿ ಮೂರು ತಿಂಗಳು ಕಾಲಾವಕಾಶ ನೀಡಿ, ಬಳಿಕ ಪರೀಕ್ಷೆ ನಡೆಸಬೇಕು ಅನ್ನೋದು ಪರೀಕ್ಷಾರ್ಥಿಗಳ ಆಗ್ರಹ. ಅಲ್ಲದೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಶ್ಮಿ ಬುಧವಾರ ತಮ್ಮನ್ನು ಭೇಟಿಯಾದ ಪರೀಕ್ಷಾರ್ಥಿಗಳಿಗೆ, ಇಂಥ ದೊಡ್ಡಮಟ್ಟದ ಪರೀಕ್ಷೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆಗುತ್ತಿರುತ್ತವೆ ಅಂದಿದ್ದಾರೆ. ಇದನ್ನು ಕೂಡ ಪರೀಕ್ಷಾರ್ಥಿಗಳು ಖಂಡಿಸಿದ್ದಾರೆ. ಪರೀಕ್ಷೆಯಲ್ಲಿ ಎಳ್ಳಷ್ಟೂ ಅಕ್ರಮ, ಭ್ರಷ್ಟಾಚಾರ ನಡೆಯಲೇಬಾರದು. ಆದರೆ ರಶ್ಮಿ ಅವರು ಈ ರೀತಿ ಹೇಳಿದ್ದರಿಂದ ಆತಂಕ ಎದುರಾಗಿದೆ ಅನ್ನೋದು ಪರೀಕ್ಷಾರ್ಥಿಗಳ ಸಂಕಟ.
ಈ ಮಧ್ಯೆ ಮರು ಪರೀಕ್ಷೆ ನಡೆಸಬೇಕು ಅನ್ನೋ ಹೈಕೋರ್ಟ್ ಆದೇಶದ ವಿರುದ್ಧ ಕಳೆದ ಬಾರಿ ಆಯ್ಕೆಯಾಗಿದ್ದ ಅನೇಕರು ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ ಎನ್ನಲಾಗಿದೆ. ಆದರೆ ಇತ್ತ ಅದಾಗಲೇ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರಕಾರ ಮರುಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಇದೇ ವೇಳೆ ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುತ್ತಿರೋ ಹಿನ್ನೆಲೆಯಲ್ಲಿ ಅದೇ ಅಧಿವೇಶನದಲ್ಲಿ ಅಕ್ರಮ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳೋ ಕಾಯ್ದೆಯನ್ನು ತರಬೇಕು. ಆ ಬಿಲ್ ಇದೇ ಅಧಿವೇಶನದಲ್ಲಿ ಪಾಸ್ ಆಗಬೇಕು. ಬಳಿಕವಷ್ಟೇ ಈ ಮರು ಪರೀಕ್ಷೆ ನಡೆಸುವಂತೆಯೂ ಪರೀಕ್ಷಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಈ 545 ಹುದ್ದೆಗಳ ರಗಳೆ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.
ಏನಿದು ಪಿಎಸ್ಐ ಪರೀಕ್ಷೆಯ ಕರ್ಮಕಾಂಡ?
ಒಟ್ಟು 545 ಪಿಎಸ್ಐ ಹುದ್ದೆಗಳನ್ನು ತುಂಬಲು ಸರಕಾರ ನಿರ್ಧರಿಸಿತ್ತು. ಈ ಬಗ್ಗೆ ರಾಜ್ಯ ಸರಕಾರ 2020 ರಲ್ಲಿ ಅಧಿಸೂಚನೆ ಹೊರಡಿಸಿತು. ರಾಜ್ಯ ಸರಕಾರ ನೇಮಕಾತಿಯ ಜವಾಬ್ದಾರಿಯನ್ನು ಪೊಲೀಸ್ ನೇಮಕಾತಿ ಪ್ರಾಧಿಕಾರಕ್ಕೆ ನೀಡಿತು. 2021 ರ ಆಗಸ್ಟ್ ತಿಂಗಳಲ್ಲಿ ದೈಹಿಕ ಪರೀಕ್ಷೆಗಳು ಶುರುವಾಗದವು. ಬಳಿಕ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ 56 ಸಾವಿರ ಅಭ್ಯರ್ಥಿಗಳು ಅಕ್ಟೋಬರ್ 3, 2021 ರಲ್ಲಿ ಲಿಖಿತ ಪರೀಕ್ಷೆ ಬರೆದರು. ಜನವರಿ 19, 2022 ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಯಾವಾಗ ಫಲಿತಾಂಶ ಪ್ರಕಟವಾಯಿತೋ, ಅದರ ಮರುದಿನದಿಂದಲೇ ಹೋರಾಟವನ್ನು ಆರಂಭಿಸಲಾಯಿತು. ಏಕೆಂದರೆ ಈ ಆಯ್ಕೆಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಅನ್ನೋದೇ ಪ್ರಮುಖ ಕಾರಣವಾಗಿತ್ತು. ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ನೆಲೆಸಿರೋ ಅಭ್ಯರ್ಥಿಗಳು ಈ ಹೋರಾಟವನ್ನು ಆರಂಭಿಸಿದ್ದರು. ಈ ಪಟ್ಟಿಯಲ್ಲಿ ತಮಗೆ ಅನ್ಯಾಯವಾಗಿದೆ ಅಂತಾ ಆರೋಪಸಿದ ಸ್ಪರ್ಧಾಳುಗಳು ಈ ಪಟ್ಟಿಯನ್ನು ತಡೆಹಿಡಿಯುವಂತೆ ಸರಕಾರಕ್ಕೆ ಒತ್ತಾಯಿಸಿದರು. ಇದೇ ವೇಳೆ ಹೋರಾಟವೂ ಉಗ್ರಸ್ವರೂಪ ಪಡೆದುಕೊಳ್ಳುತ್ತಾ ಸಾಗಿತು. ಅಭ್ಯರ್ಥಿಗಳ ಒತ್ತಡಕ್ಕೆ ಮಣಿದ ಸರಕಾರ ಫೆಬ್ರವರಿ 7, 2023 ರಂದು ಈ ಪಟ್ಟಿಯನ್ನು ತಡೆ ಹಿಡಿಯಿತು.
ಯಾವಾಗ ಈ ಪಟ್ಟಿಯನ್ನು ಸರಕಾರ ತಡೆಹಿಡಿಯಿತೋ ಆಗ ಅಭ್ಯರ್ಥಿಗಳು ಮತ್ತಷ್ಟು ಹೋರಾಟ ಆರಂಭಿಸಿದರು. ಮಾರ್ಚ್ 23, 2023 ರಂದು ನೂರಾರು ಅಭ್ಯರ್ಥಿಗಳು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಗಲು-ರಾತ್ರಿ ಧರಣಿ ನಡೆಸಿ, ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಇದೇ ವೇಳೆ ಮಹತ್ವದ ಬೆಳವಣಿಗೆಯೊಂದು ನಡೆಯುತ್ತದೆ. ಅಕ್ರಮ ನಡೆದಿರೋ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದ ಅಭ್ಯರ್ಥಿಗಳಿಗೆ ಏಪ್ರಿಲ್ 4, 2023 ರಂದು ಪರೀಕ್ಷೆಯ ಓಎಂಆರ್ (ಆರ್ಟಿಕಲ್ ಮಾರ್ಕ್ ರಿಕಗ್ನೇಶನ್) ಶೀಟ್ ಸಿಗುತ್ತದೆ. ಈ ವೇಳೆ ಆರಂಭದಿಂದಲೂ ಹೋರಾಟ ನಡೆಸುತ್ತಾ ಬಂದಿದ್ದ ಯಾದಗಿರಿ ಮೂಲದ ರವಿಶಂಕರ ಪಾಟೀಲ್ ಇದನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಶೀಟ್ ನಲ್ಲಿ ಅಕ್ರಮ ನಡೆದಿದ್ದು ಖಚಿತವಾಗಿ ಹೋಗಿತ್ತು. ಆ ಶೀಟ್ನ್ನು ತೆಗೆದುಕೊಂಡು ರವಿಶಂಕರ್ ಪಾಟೀಲ್ ಆಗಿನ ಗೃಹ ಸಚಿವ ಅರಗ ಜಾನೇಂದ್ರ ಅವರನ್ನು ಭೇಟಿಯಾದರು. ಇದನ್ನು ನೋಡಿದ ಸಚಿವರಿಗೆ ಅಚ್ಚರಿ ಜೊತೆಗೆ ಆಘಾತವೂ ಆಗಿತ್ತು. ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡ ಸಚಿವರು, ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಿದರು. ಇದಾದ ಬಳಿಕ ಕೂಡಲೇ ಸರಕಾರ ಏಪ್ರಿಲ್ 29 ರಂದು ಮರುಪರೀಕ್ಷೆ ಮಾಡೋದಾಗಿ ಘೋಷಣೆ ಮಾಡಿತು.
ಇನ್ನು ಸಿಓಡಿ ತನಿಖೆಯಲ್ಲಿ ಅನೇಕ ಮಹತ್ವದ ಅಂಶಗಳು ಪತ್ತೆಯಾದವು. ಈ ಪ್ರಕರಣದಲ್ಲಿ ಪೊಲೀಸ್ ನೇಮಕಾತಿ ಪ್ರಾಧಿಕಾರದ ಮುಖ್ಯಸ್ಥ ಐಪಿಎಸ್ ಅಧಿಕಾರಿ ಅಮೃತ ಪಾಲ್ ಕೂಡ ಜೈಲು ಪಾಲಾದರು. ಇನ್ನು ಈ ಪ್ರಕರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಸೇರಿದಂತೆ ಒಟ್ಟು 110 ಆರೋಪಿಗಳು ಬಂಧಿತರಾದರು. ಈಗಾಗಲೇ ಆರೋಪಪಟ್ಟಿಯನ್ನು ಕೂಡ ಸಲ್ಲಿಸಿದ್ದು, ವಿಚಾರಣೆ ಮುಂದುವರೆದಿದೆ.
ಈ ಮಧ್ಯೆ ಆಯ್ಕೆಯಾಗಿದ್ದ ಅನೇಕರು ಕೋರ್ಟ್ ಮೊರೆ ಹೋದರು. ಇದೇ ವೇಳೆ ಆಯ್ಕೆಯಾಗದವರೂ ಕೂಡ ಕೋರ್ಟ್ ಮೊರೆ ಹೋದರು. ರಾಜ್ಯದಲ್ಲಿ ಹೊಸ ಸರಕಾರವೂ ಅಧಿಕಾರಕ್ಕೆ ಬಂತು. ಹೊಸ ಸರಕಾರ ಅಧಿಕಾರಿಕ್ಕೆ ಬಂದಿದ್ದರೂ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆದಿದ್ದರಿಂದ ಏನೂ ಮಾಡುವಂತಿರಲಿಲ್ಲ. ಇದೀಗ ಈ ಬಗ್ಗೆ ಸಂಪೂರ್ಣವಾಗಿ ವಿಚಾರಣೆ ನಡೆಸಿದ ಬೆಂಗಳೂರು ಹೈಕೋರ್ಟ್, ನವೆಂಬರ್ 10 ಕ್ಕೆ ತೀರ್ಪು ನೀಡಿದೆ. ಮರುಪರೀಕ್ಷೆ ನಡೆಸುವಂತೆ ಆದೇಶಿಸಿದರೋ ಕೋರ್ಟ್ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಯಾವಾಗ ಹೈಕೋರ್ಟ್ ಮರುಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆಯಿಂದ ನಡೆಸುವಂತೆ ಸೂಚಿಸಿತೋ ಆಗ ರಾಜ್ಯ ಸರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ಇದರ ಜವಾಬ್ದಾರಿಯನ್ನು ವಹಿಸಿದೆ. ಯಾವಾಗ ಈ ಜವಾಬ್ದಾರಿ ಕೆಇಎ ಹೆಗಲಿಗೆ ಬಂತೋ ಕೂಡಲೇ ಮರುಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿ ಡಿಸೆಂಬರ್ 23 ರಂದು ನಡೆಸಲು ನಿರ್ಧರಿಸಿದೆ. ಆದರೆ ಇದನ್ನು ಪರೀಕ್ಷಾರ್ಥಿಗಳು ವಿರೋಧಿಸುತ್ತಿದ್ದಾರೆ. ಏಕೆಂದರೆ ಫಲಿತಾಂಶ ಪ್ರಕಟವಾದಾಗಿನಿಂದ ನಾವೆಲ್ಲರೂ ಅನ್ಯಾಯ, ಅಕ್ರಮದ ವಿರುದ್ಧ ಹೋರಾಟವನ್ನು ನಡೆಸುತ್ತಲೇ ಬಂದಿದ್ದೇವೆ. ಹೀಗಾಗಿ ನಮಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಮಯವೇ ಸಿಕ್ಕಿಲ್ಲ. ಹೀಗಾಗಿ ಕನಿಷ್ಟ ನಮಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳು ಮೂರು ತಿಂಗಳ ಅವಕಾಶವನ್ನಾದರೂ ನೀಡಲೇಬೇಕು ಅಂತಾ ಒತ್ತಾಯಿಸುತ್ತಿದ್ದಾರೆ.
ಇನ್ನು ಇದೇ ವೇಳೆ ಮತ್ತೊಂದು ಅಂಶದ ಬಗ್ಗೆಯೂ ಪರೀಕ್ಷಾರ್ಥಿಗಳು ಆಕ್ಷೇಪವೆತ್ತಿದ್ದಾರೆ. ರಾಜ್ಯ ಸರಕಾರ ಪರೀಕ್ಷೆಯ ಜವಾಬ್ದಾರಿಯನ್ನು ಕೆಇಎಗೆ ನೀಡಿದ್ದು ಕೂಡ ಸರಿಯಾಗಿಲ್ಲ ಅನ್ನೋದು. ಏಕೆಂದರೆ ಇತ್ತೀಚಿಗೆ ನಡೆದ ಎಸ್ಡಿಎ ಹಾಗೂ ಎಫ್ಡಿಎ ಪರೀಕ್ಷೆಯಲ್ಲಿ ಮತ್ತೆ ಅಕ್ರಮದ ವಾಸನೆ ಕಂಡು ಬಂದಿದೆ. ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ನೇ ಇಲ್ಲಿಯೂ ಅಕ್ರಮ ಮಾಡಿದ್ದು ಬೆಳಕಿಗೆ ಬಂದಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ. ಆದರೆ ಈ ಪರೀಕ್ಷೆ ನಡೆಸೋ ಜವಾಬ್ದಾರಿಯನ್ನು ಹೊತ್ತಿದ್ದ ಕೆಇಎ ಅಧಿಕಾರಿಗಳೇಕೆ ಇಲ್ಲಿ ಅಕ್ರಮಗಳನ್ನು ತಡೆಯಲು ವಿಫಲರಾದರು ಅನ್ನೋದು ಪರೀಕ್ಷಾರ್ಥಿಗಳ ಪ್ರಶ್ನೆ. ಹೀಗಾಗಿ ಕೆಲವರು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇದರ ಜವಾಬ್ದಾರಿಯನ್ನು ನೀಡಿದರೆ ಒಳ್ಳೆಯದು ಎಂದರೆ ಮತ್ತೆ ಕೆಲವರು ಕೆಇಎ ನೇ ಇರಲಿ. ಆದರೆ ಅಕ್ರಮ ನಡೆಯದಂತೆ ಪರೀಕ್ಷೆ ನಡೆಸಬೇಕು ಅನ್ನೋದು ಅವರ ವಾದ.
ಇನ್ನು ಈ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಪಿಎಸ್ಐ ಹುದ್ದೆ ಪರೀಕ್ಷಾರ್ಥಿ ರವಿಶಂಕರ ಪಾಟೀಲ್, ಈ ಹೋರಾಟದ ಆರಂಭದಲ್ಲಿ ನಮಗೆ ಎಲ್ಲ ಕಡೆ ನಿರಾಸೆ ಕಂಡು ಬಂದಿತ್ತು. ಆದರೆ ಯಾವಾಗ ಹಿಂದಿನ ಸರಕಾರ ತನಿಖೆಯನ್ನು ಸಿಒಡಿಗೆ ವಹಿಸಿತೋ ಆಗ ನಮಗೆ ಕೊಂಚ ನೆಮ್ಮದಿಯಾಗಿತ್ತು. ಬಳಿಕ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸೇರಿದಂತೆ ಒಟ್ಟು 110 ಜನರನ್ನು ಬಂಧಿಸಿದ್ದನ್ನು ನೋಡಿದ ಮೇಲೆ ಇದರಲ್ಲಿ ಏನೆಲ್ಲ ನಡೆದಿರಬಹುದು ಅನ್ನೋದರ ಅಂದಾಜು ಗೊತ್ತಾಯಿತು. ಇದೀಗ ಹೈಕೋರ್ಟ್ ಮರುಪರೀಕ್ಷೆಗೆ ಆದೇಶಿಸಿದ್ದು ಸಮಾಧಾನ ತಂದಿದೆ. ನಮ್ಮ ಹೋರಾಟಕ್ಕೆ ಇಲ್ಲಿ ಜನರ ಸಿಕ್ಕಿದೆ. ಇದೇ ವೇಳೆ ಕೆಇಎ ಇಷ್ಟು ಬೇಗನೇ ಪರೀಕ್ಷೆ ಘೋಷಣೆ ಮಾಡಿದ್ದು ಸರಿಯಲ್ಲ. ಇದುವರೆಗೂ ನಾವೆಲ್ಲ ಬರೀ ಹೋರಾಟದಲ್ಲಿಯೇ ಕಾಲ ಕಡೆದಿದ್ದೇವೆ. ಒಂದೇ ತಿಂಗಳಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸೋದು ಕಷ್ಟ. ಹೀಗಾಗಿ ಕನಿಷ್ಟ ಮೂರು ತಿಂಗಳಾದರೂ ಸಮಯವನ್ನು ಕೊಡಬೇಕು ಅನ್ನುತ್ತಾರೆ.
ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಮತ್ತೊಬ್ಬ ಪರೀಕ್ಷಾರ್ಥಿ ಕುರುವಂತೆಪ್ಪ, ಇದೀಗ ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದೇ ಅಧಿವೇಶನದಲ್ಲಿ ಅಕ್ರಮ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳೋ ಕಾಯ್ದೆಯನ್ನು ತರಬೇಕು. ಅಕ್ರಮ ನಿಷೇಧ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಪಾಸ್ ಮಾಡಬೇಕು. ಬಳಿಕವಷ್ಟೇ ಮರು ಪರೀಕ್ಷೆ ನಡೆಸಬೇಕು. ಇನ್ನು ಕೆಇಎ ನಿರ್ದೇಶಕಿ ರಶ್ಮಿ ಅವರನ್ನು ಭೇಟಿಯಾಗಿರೋ ಪರೀಕ್ಷಾರ್ಥಿಗಳಿಗೆ ಅವರು, ದೊಡ್ಡ ದೊಡ್ಡ ಪರೀಕ್ಷೆಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ ಅಂದಿದ್ದಾರೆ. ಅಕ್ರಮ ಸಣ್ಣದಿದ್ದರೂ ಅಕ್ರಮವೇ. ಯಾವುದೇ ಕಾರಣಕ್ಕೂ ಸಣ್ಣ ಅಕ್ರಮವೂ ನಡೆಯದಂತೆ, ಕೊಂಚವೂ ಭ್ರಷ್ಟಾಚಾರ ನಡೆಯದಂತೆ ಎಲ್ಲವೂ ಪಾರದರ್ಶಕತೆಯಿಂದ ಪರೀಕ್ಷೆ ನಡೆಸಬೇಕು ಅಂತಾ ಆಗ್ರಹಿಸಿದ್ದಾರೆ.
ಇನ್ನು ಹಲವಾರು ವರ್ಷಗಳಿಂದ ಪರೀಕ್ಷೆಯ ಸಿದ್ಧತೆಯಲ್ಲಿರೋ ಅಭ್ಯರ್ಥಿ ಅರುಣ, ನಮಗೆ ಪರೀಕ್ಷಾ ಮಾದರಿ ಹೇಗಿರುತ್ತೆ ಅನ್ನೋದೇ ಗೊತ್ತಿಲ್ಲ. ಈ ಬಗ್ಗೆ ಕೆಇಎ ಅಧಿಕಾರಿಗಳನ್ನು ಕೇಳಿದರೆ ಅದನ್ನೆಲ್ಲ ಹೇಳಲು ಸಾಧ್ಯವಿಲ್ಲ ಅನ್ನುತ್ತಿದ್ದಾರೆ. ನಾವು ಪೊಲೀಸ್ ನೇಮಕಾತಿ ಪ್ರಾಧಿಕಾರದ ಮಾದರಿಯಲ್ಲಿ ಸಿದ್ಧತೆ ನಡೆಸಿದ್ದೇವೆ. ಆದರೆ ಇದೀಗ ಕೆಇಎ ಹೊಸ ಮಾದರಿ ಪ್ರಯೋಗ ಮಾಡಿದರೆ ಹೇಗೆ? ಅನ್ನುತ್ತಾರೆ. ಆದ್ದರಿಂದ ಮೂರು ತಿಂಗಳ ಅವಧಿಯೊಂದಿಗೆ ಮಾದರಿ ಯಾವ ರೀತಿ ಇರುತ್ತೆ ಅನ್ನೋದರ ಬಗ್ಗೆಯೂ ಕೆಇಎ ಸ್ಪಷ್ಟವಾದ ಮಾಹಿತಿ ನೀಡಲೇಬೇಕು. ಬಳಿಕವಷ್ಟೇ ಪರೀಕ್ಷೆ ನಡೆಸಲಿ ಅಂತಾ ಆಗ್ರಹಿಸುತ್ತಾರೆ.
.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Thu, 23 November 23