ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಕಳೆದ ವರ್ಷ ಅವರ ಮಾಲಿಕತ್ವದ ಶೋ ರೂಮ್ ವೊಂದನ್ನು ಸರಕಾರಿ ಜಾಗ ಕಬಳಿಸಿ ಮಾಡಲಾಗಿದೆ ಅನ್ನೋ ದೂರು (BJP MLA Arvind Bellad Showroom controversy) ದಾಖಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಲೋಕಾಯುಕ್ತ ಪೊಲೀಸರು ತನಿಖೆ ಕೂಡ ನಡೆಸಿದ್ದಾರೆ. ಇದೀಗ ದೂರು ನೀಡಿದವರಿಗೇ ಮತ್ತೆ ನೋಟಿಸ್ ಕೊಟ್ಟು, ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಉತ್ತರ ಕೊಟ್ಟಿರೋ ಕಾಂಗ್ರೆಸ್ ಪಕ್ಷದ ನಾಯಕ, ಬೆಲ್ಲದ್ ಅವರ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿರೋ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಇದು ಧಾರವಾಡ ನಗರದ ರಾಯಾಪುರ ಬಡಾವಣೆಯಲ್ಲಿರೋ ಎಂ.ಜಿ. ಹೆಕ್ಟರ್ ವಾಹನದ ಶೋ ರೂಮ್. ಇದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸೇರಿದ್ದು. ಕಳೆದ ವರ್ಷ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹಾಗೂ ಸ್ಥಳೀಯರು ಈ ಶೋ ರೂಮ್ ಬರೋ ಸರ್ವೆ ನಂಬರ್ 31, 32, 33 ರಲ್ಲಿನ 24 ಮೀಟರ್ ಅಗಲ ಹಾಗೂ ಒಂದೂವರೆ ಕಿ.ಮೀ. ಉದ್ದದ ರಸ್ತೆ ಮಾಯವಾಗಿದೆ ಅಂತಾ ಲೋಕಾಯುಕ್ತ ಪೊಲೀಸರಿಗೆ (Lokayukta police) ದೂರು ನೀಡಿದ್ದರು (Hubballi-Dharwad Municipal Corporation).
ದೂರು ನೀಡಿದ ಬಳಿಕ ಲೋಕಾಯುಕ್ತ ಪೊಲೀಸರು ತನಿಖೆ ಶುರು ಮಾಡಿದ್ದರು. ಇದೀಗ ದೂರುದಾರ ನಾಗರಾಜ ಗೌರಿ ಅವರಿಗೆ ಲೋಕಾಯುಕ್ತರು ಪತ್ರವೊಂದನ್ನು ಕಳಿಸಿದ್ದು, ಅದರಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರು ಈ ಸಂಬಂಧ ಉತ್ತರವನ್ನು ಕೊಟ್ಟಿದ್ದಾರೆ. ಆ ಉತ್ತರದ ಪ್ರತಿಯನ್ನು ನಿಮಗೆ ಕಳಿಸಲಾಗಿದ್ದು, ಅದನ್ನು ನೋಡುವಂತೆ ಸೂಚಿಸಿದ್ದಾರೆ.
ಒಂದು ವೇಳೆ ಇದಕ್ಕೆ ನಿಮ್ಮಿಂದ ಯಾವುದೇ ಉತ್ತರ ಬರದೇ ಇದ್ದಲ್ಲಿ ಈ ಪ್ರಕರಣವನ್ನು ನಾವು ಇಲ್ಲಿಗೇ ಮುಕ್ತಾಯಗೊಳಿಸುತ್ತೇವೆ ಅಂತಾ ಬರೆದಿದ್ದಾರೆ. ಆದರೆ ಇದೀಗ ಉತ್ತರ ಕೊಟ್ಟಿರೋ ಪ್ರಾಧಿಕಾರದ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಏನೇನೋ ತಪ್ಪು ಮಾಹಿತಿಯನ್ನು ಲೋಕಾ ಪೊಲೀಸರಿಗೆ ನೀಡಿದ್ದಾರೆ ಅಂತಾ ಆರೋಪಿಸಿರೋ ನಾಗರಾಜ, ಇದೀಗ ಮತ್ತಷ್ಟು ದಾಖಲೆಗಳೊಂದಿಗೆ ಲೋಕಾ ಕಚೇರಿಗೆ ತಮ್ಮ ಪತ್ರವನ್ನು ನೀಡಿದ್ದಾರೆ.
ಇನ್ನು, ಈ ಮುಂಚೆ ನೀಡಿದ್ದ ದೂರಿನಲ್ಲಿ ಈ ಜಾಗೆಯಲ್ಲಿ ರಸ್ತೆ ಇತ್ತು. ಆದರೆ ಆ ರಸ್ತೆಯನ್ನು ಅತಿಕ್ರಮಿಸಿ ಬೆಲ್ಲದ್ ಅವರು ಶೋ ರೂಮ್ ನಿರ್ಮಿಸಿದ್ದಾರೆ ಅಂತಾ ಹೇಳಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಲೋಕಾ ಪೊಲೀಸರು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು, ಈ ಬಗ್ಗೆ ನಿಮ್ಮ ಬಳಿ ಇರೋ ದಾಖಲೆಗಳನ್ನು ನೀಡಿ ಅಂದಿದ್ದರು. ಅದಕ್ಕೆ ಉತ್ತರಿಸಿರೋ ಪ್ರಾಧಿಕಾರದ ಅಧಿಕಾರಿಗಳು, ಲೋಕಾ ಪೊಲೀಸರಿಗೆ ತಪ್ಪು ತಪ್ಪು ಮಾಹಿತಿ ನೀಡಿದ್ದಾರೆ ಅಂತಾ ನಾಗರಾಜ ಆರೋಪಿಸಿದ್ದಾರೆ.
ಲೋಕಾ ಪೊಲೀಸರು ದೂರುದಾರರ ಹೇಳಿರೋ ಹಾಗೆ ಅಲ್ಲಿ ಒಂದೂವರೆ ಕಿ.ಮೀ. ರಸ್ತೆ ಇತ್ತಾ ಅಂತಾ ಹೇಳಿದರೆ, ಅದಕ್ಕೆ ಅಷ್ಟು ಉದ್ದದ ರಸ್ತೆಯನ್ನು ಸ್ಥಳಾಂತರಿಸಿ ಸಂಜೀವಿನಿ ಪಾರ್ಕ್ ಹಿಂಭಾಗದಲ್ಲಿ ಮುಂದುವರೆಸಿ, ಅಲ್ಲಿಂದ ಮುಖ್ಯ ರಸ್ತೆಗೆ ಜೋಡಿಸಲಾಗಿದೆ ಅಂತಾ ಉತ್ತರ ನೀಡಿದ್ದಾರೆ. ಹೀಗಾಗಿ ಅಲ್ಲಿ ರಸ್ತೆ ಇದ್ದಿದ್ದು ಸತ್ಯ ಅನ್ನೋದು ಸ್ಥಳೀಯರ ಆರೋಪ.
ಇನ್ನು 24 ಮೀಟರ್ ಅಗಲದ ಮುಖ್ಯ ಸಂಪರ್ಕ ರಸ್ತೆಯನ್ನು ಸುತ್ತಮುತ್ತಲಿನ ಜಮೀನಿನವರು ಒತ್ತುವರಿ ಮಾಡಿದ್ದಾರಾ? ಅಂತಾ ಲೋಕಾ ಪೊಲೀಸರು ಕೇಳಿರೋ ಪ್ರಶ್ನೆಗೆ, 2019 ರಲ್ಲಿ ಅನುಮೋದಿಸಿದ ಅಂತಿಮ ಮಹಾಯೋಜನೆ ನಕ್ಷೆಯಲ್ಲಿ 24 ಮೀಟರ್ ಅಗಲದ ಉದ್ದೇಶಿತ ರಸ್ತೆಯನ್ನು ತೆಗೆದು ಹಾಕಲಾಗಿದ್ದು, ರಸ್ತೆ ಅತಿಕ್ರಮಣದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಅಂತಾ ಜಾಣ ಉತ್ತರ ಕೊಟ್ಟಿದ್ದಾರೆ. ಅಲ್ಲಿ ಕೆಲವೇ ವರ್ಷಗಳ ಹಿಂದೆ ರಸ್ತೆ ಇತ್ತು. ಆದರೆ ಇದೀಗ ಆ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಶೋ ರೂಮ್ ನಿರ್ಮಿಸಿದರೋದ್ರಿಂದ ತಮಗೆ ಓಡಾಡಲು ಸಾಕಷ್ಟು ಕಷ್ಟವಾಗಿದೆ ಅನ್ನುತ್ತಿದ್ದಾರೆ ಸ್ಥಳೀಯರು.
ಇನ್ನು ಈ ಬಗ್ಗೆ ಅರವಿಂದ ಬೆಲ್ಲದ್ ಹೇಳೋದೇ ಬೇರೆ. ಅವರು ನಮ್ಮ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಲೋಕಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವಂತೂ ಯಾವುದೇ ತಪ್ಪು ಮಾಡಿಲ್ಲ. ನಾವು ನೂರಕ್ಕೆ ನೂರರಷ್ಟು ಸರಿಯಾಗಿದ್ದೇವೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತೆ. ಪ್ರಕರಣದ ತನಿಖೆ ನಡೆಯುತ್ತಿರೋದ್ರಿಂದ ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲಾರೆ ಅಂತಾ ಪ್ರತಿಕ್ರಿಯಿಸಿದ್ದಾರೆ. ಇದೀಗ ಪ್ರಾಧಿಕಾರದ ಅಧಿಕಾರಿಗಳು ನೀಡಿರೋ ಮಾಹಿತಿ ಅಪೂರ್ಣ ಹಾಗೂ ಅಸತ್ಯದಿಂದ ಕೂಡಿದೆ ಅಂತಾ ಆರೋಪಿಸಿರೋ ದೂರುದಾರ ನಾಗರಾಜ ಮುಂದೆ ಯಾವ ಹೆಜ್ಜೆ ಇಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ