ಧಾರವಾಡ: ಕಳೆದ ಒಂದೂವರೆ ವರ್ಷದಿಂದ ಕೊರೊನಾ (coronavirus) ಹಾವಳಿಯಿಂದಾಗಿ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಎರಡನೇ ಅಲೆ ಬಳಿಕ ಇದೀಗ ಎಲ್ಲವೂ ಒಂದು ಹಳಿಗೆ ಬರುತ್ತಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಲಾಕ್ಡೌನ್ ವೇಳೆಯಲ್ಲಿ ಹಬ್ಬಗಳಿಗೆ (festival) ಬ್ರೇಕ್ ಬಿದ್ದಿದ್ದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಕಳೆದ ವರ್ಷ ಎಲ್ಲ ಹಬ್ಬಗಳಿಗೂ ಬ್ರೇಕ್ ಬಿದ್ದಿದ್ದರಿಂದ ಜನರು ಹಬ್ಬದ ಸಂಭ್ರಮದಿಂದ ವಂಚಿತರಾಗಿದ್ದರು. ಅಷ್ಟೇ ಅಲ್ಲ, ಇದರಿಂದಾಗಿ ವ್ಯಾಪಾರಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಎರಡನೇ ಅಲೆಯ ಬಳಿಕ ನಿಧಾನವಾಗಿ ಕೊರೊನಾ ಹಾವಳಿ ಕಡಿಮೆಯಾಗಿದ್ದರಿಂದ ಈ ಬಾರಿಯ ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ಜನರು ಆಚರಿಸುವಂತಾಯಿತು. ಇದರಿಂದಾಗಿ ಒಂದು ಕಡೆ ಜನರಿಗೆ ಹಬ್ಬದ ಸಂಭ್ರಮವುಂಟಾದರೆ ಮತ್ತೊಂದು ಕಡೆ ವ್ಯಾಪಾರಿಗಳಿಗೆ ಮತ್ತೆ ಜೀವ ಬಂದಂತಾಗಿದೆ.
ನಿರೀಕ್ಷೆಗೂ ಮೀರಿದ ವ್ಯಾಪಾರ-ವಹಿವಾಟು
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಎರಡು ವರ್ಷಗಳಿಂದ ಮಂಕಾಗಿದ್ದ ವಹಿವಾಟು ಈ ವರ್ಷ ಪುಟಿದೆದ್ದಿದ್ದು, ಭರ್ಜರಿ ವ್ಯಾಪಾರ ನಡೆದಿದೆ. ಎರಡು ವರ್ಷಗಳ ಬಳಿಕ ಅವಳಿ ನಗರದಲ್ಲಿ ವಿಜಯ ದಶಮಿ ಮತ್ತು ದೀಪಾವಳಿಯಲ್ಲಿ ಹಣತೆಯಿಂದ ಹಿಡಿದು ಕಾರಿನವರೆಗೂ ಸರಿ ಸುಮಾರು 150-160 ಕೋಟಿ ವ್ಯಾಪಾರ ನಡೆದಿದೆ ಎಂದು ವರ್ತಕರು, ಲೆಕ್ಕಪರಿಶೋಧಕರು, ಉದ್ಯಮಿಗಳು ಅಂದಾಜಿಸಿದ್ದಾರೆ. ಆ ಮೂಲಕ ಆರ್ಥಿಕ ಚಟುವಟಿಕೆಗಳು ಮತ್ತೆ ಹಳಿಗೆ ಮರಳುತ್ತಿವೆ. ಎರಡು ವರ್ಷಗಳ ಬಳಿಕ ಇದೀಗ ಕೊರೊನಾ ಭಯದಿಂದ ಮುಕ್ತರಾಗಿ ಜನರು ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ನಗದು ಹರಿವು ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ. ಇದರೊಂದಿಗೆ ಆರ್ಥಿಕ ಚಟುವಟಿಕೆ ಮತ್ತೆ ಸಹಜ ಸ್ಥಿತಿಗೆ ಮರಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಇನ್ನು ಚಿನ್ನಾಭರಣ, ಅಟೋಮೊಬೈಲ್, ಜವಳಿ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಗೃಹೋಪಯೋಗಿ ವಸ್ತುಗಳ ವ್ಯಾಪಾರವೂ ಈ ಎರಡು ಹಬ್ಬಗಳಲ್ಲಿ ಭರ್ಜರಿಯಾಗಿದೆ. ಕಳೆದ ವರ್ಷ ಈ ಎರಡೂ ದೊಡ್ಡ ಹಬ್ಬಗಳಿಗೆ ಕೊರೊನಾ ಹಾವಳಿಯಿಂದ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ಕೊರೊನಾ ಹಾವಳಿ ಕಡಿಮೆಯಾಗಿದ್ದರಿಂದ ಹಬ್ಬ ಆಚರಿಸಲು ಅವಕಾಶ ದೊರೆತಿದ್ದರಿಂದ ಜನರು ಉತ್ಸಾಹದಿಂದ ಮಾರುಕಟ್ಟೆ ಕಡೆಗೆ ಮುಖ ಮಾಡಿದ್ದಾರೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆದಿದೆ.
ಎಲ್ಲ ಖರೀದಿಯಲ್ಲಿಯೂ ದುಪ್ಪಟ್ಟು
ಸರಕು, ಸಾರಿಗೆ ವ್ಯವಸ್ಥೆ, ದಿನಸಿ, ಕೈಗಾರಿಕೆ ವಲಯ, ಸ್ಟೀಲ್, ಹೂವು, ಹಣ್ಣು, ಕಾಯಿ ಹೀಗೆ ಎಲ್ಲ ವಸ್ತುಗಳ ಖರೀದಿ, ಮಾರಾಟ ವಹಿವಾಟಿನಲ್ಲಿ ದುಪ್ಪಟ್ಟು ಪ್ರಮಾಣ ಕಂಡು ಬಂದಿದೆ. ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ನಿರ್ಮಾಣದಲ್ಲೂ ನಾಗರಿಕರು ಉತ್ಸುಕತೆ ತೋರಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಅವಳಿ ನಗರ ಹಾಗೂ ಸುತ್ತಲಿನ ಜಿಲ್ಲೆಗಳ ನಾಗರಿಕರಿಂದ ಆಭರಣಗಳ ಖರೀದಿಯೂ ಜೋರಾಗಿದೆ. ನಿತ್ಯ ಸುಮಾರು ಒಂದೂವರೆಯಿಂದ ಎರಡು ಕೋಟಿ ರೂಪಾಯಿಗಳವರೆಗೆ ವಹಿವಾಟು ನಡೆದಿದೆ. ಈ ಸಲ ಗಟ್ಟಿ ಚಿನ್ನಕ್ಕಿಂತ ಆಭರಣ ಚಿನ್ನದ ಖರೀದಿ ಹೆಚ್ಚಾಗಿದೆ ಎಂದು ಉತ್ತರ ಕರ್ನಾಟಕ ಜ್ಯುವೆಲರಿ ಅಸೋಸಿಯೇಶನ್ ಮಹಾಸಭಾ ಅಧ್ಯಕ್ಷ ಗೋವಿಂದ ನಿರಂಜನ್ ಹೇಳಿದ್ದಾರೆ.
ಜವಳಿಯ ಹೋಲ್‌ಸೇಲ್, ರಿಟೇಲ್ ವ್ಯಾಪಾರದಲ್ಲೂ ಹೆಚ್ಚಳ ಕಂಡು ಬಂದಿದೆ. ದೊಡ್ಡ ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಬಟ್ಟೆ ಅಂಗಡಿಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ಪ್ರತಿನಿತ್ಯವೂ 4-5 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿದೆ ಎನ್ನುತ್ತಾರೆ ಜವಳಿ ವರ್ತಕ ಅಶೋಕ ಭಂಡಾರಿ.
ಇನ್ನು ಕೃಷಿ ಉತ್ಪನ್ನಗಳ ವಹಿವಾಟಿನಲ್ಲಿ ಈ ವರ್ಷ ರೈತರಿಗೆ ಲಾಭದಾಯಕ ಬೆಲೆ ಸಿಕ್ಕಿದೆ. ಎಪಿಎಂಸಿಗೆ ನಿರಂತರವಾಗಿ ಉತ್ಪನ್ನ ಬರುತ್ತಿದ್ದು, ಉತ್ತಮ ವಹಿವಾಟು ದಾಖಲಿಸುತ್ತಿದೆ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಸುರೇಶ ಕಿರೇಸೂರ.
ಇನ್ನು ಕಳೆದೊಂದು ತಿಂಗಳಿನಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆದ ವ್ಯಾಪಾರ-ವಹಿವಾಟಿನ ಬಗ್ಗೆ ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿನಯ ಜವಳಿ, ಒಂದೂವರೆ ವರ್ಷದಿಂದ ಕೊರೊನಾ ಭಯದಿಂದ ಕಳೆಗುಂದಿದ್ದ ಹುಬ್ಬಳ್ಳಿ-ಧಾರವಾಡ ಮಾರುಕಟ್ಟೆಯಲ್ಲಿ ಇದೀಗ ದೀಪಾವಳಿ ವೇಳೆಯಲ್ಲಿ ಉತ್ತಮ ವಹಿವಾಟು ದಾಖಲಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬದಲ್ಲಿ ಎಲ್ಲಾ ಕ್ಷೇತ್ರಗಳಿಂದ ಒಟ್ಟು 150-160 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದರಿಂದಾಗಿ ವ್ಯಾಪಾರಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ:
Demonetisation: ನೋಟು ನಿಷೇಧದಿಂದ ಈಗಾಗಲೇ ಸಿಕ್ಕ ಮತ್ತು ಇನ್ನೂ ಸಿಗದೇ ಉಳಿದ ಲಾಭಗಳು!
Tech Mahindra: ಟೆಕ್ ಮಹೀಂದ್ರಾ ಎರಡನೇ ತ್ರೈಮಾಸಿಕ ಲಾಭ ಶೇ 26ರಷ್ಟು ಹೆಚ್ಚಳ; 15 ರೂ. ವಿಶೇಷ ಡಿವಿಡೆಂಡ್ ಘೋಷಣೆ
Published On - 8:53 am, Wed, 10 November 21