ಧಾರವಾಡ: ವರ್ಗಾವಣೆ ನೀತಿಗೆ ಬೇಸತ್ತು ಸ್ವಯಂ ನಿವೃತ್ತಿಗೆ ಹೆಡ್ ಕಾನ್ಸ್ಟೇಬಲ್ ಮನವಿ, ರಾಜೀನಾಮೆ ಪತ್ರ ವೈರಲ್
Dharwad news: ವರ್ಗಾವಣೆಯಲ್ಲಿ ಆಗುತ್ತಿರುವ ಅನ್ಯಾಯದಿಂದ ಬೇಸತ್ತ ಹೆಡ್ ಕಾನ್ಸ್ಟೇಬಲ್ ಒಬ್ಬರು ಸ್ವಯಂ ನಿವೃತ್ತಿ ಮುಂದಾಗಿದ್ದಾರೆ. ಸದ್ಯ ಪೊಲೀಸ್ ಸಿಬ್ಬಂದಿಯ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಧಾರವಾಡ: ಡಿಸಿಆರ್‌ಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರು ವರ್ಗಾವಣೆ (Transfer) ನೀತಿಗೆ ಬೇಸತ್ತು ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಆರ್.ಎನ್. ಗೊರಗುದ್ದಿ ಸ್ವಯಂ ನಿವೃತ್ತಿಗೆ ಮುಂದಾದ ಸಿಬ್ಬಂದಿಯಾಗಿದ್ದಾರೆ. ಸದ್ಯ ಇವರ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.
ಡಿಸಿಆರ್‌ಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೊರಗುದ್ದಿ ಅವರನ್ನು ಐದು ವರ್ಷವಾಗುವ ಮೊದಲೇ ಅಳ್ನಾವರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಬಳಿಕವೂ ಡಿಪಿಒಗೆ ಕರ್ತವ್ಯದ ಮೇಲೆ ನಿಯೋಜನೆ ಮಾಡಲಾಗಿದೆ. ಇದರಿಂದ ರೋಸಿ ಹೋಗಿರುವುದಾಗಿ ಪತ್ರದಲ್ಲಿ ಅಳಲು ತೋಡಿಕೊಂಡಿದ್ದು, ರಾಜೀನಾಮೆ ಪತ್ರದಲ್ಲಿ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: KAS Officer Transfer: ಐಎಎಸ್, ಐಪಿಎಸ್ ಆಯ್ತು ಈಗ ಕೆಎಎಸ್ ಸರದಿ; 75 ಮಂದಿ ಅಧಿಕಾರಿಗಳ ವರ್ಗಾವಣೆ
ರಾಜೀನಾಮೆ ಪತ್ರದಲ್ಲಿ ಏನಿದೆ?
ಹೃದಯ ಸಂಬಂಧಿ ಖಾಯಿಲೆಯಿಂದ ನನ್ನ ತಂದೆ ಹಾಗೂ ರಕ್ತದೊತ್ತಡದಿಂದ ನನ್ನ ತಾಯಿ ಬಳಲುತ್ತಿದ್ದಾರೆ. ನಮ್ಮದು ಅವಿಭಕ್ತ ಕುಟುಂಬ. ಕುಟುಂಬದಲ್ಲಿ ನಾನೊಬ್ಬನೇ ಸರ್ಕಾರಿ ನೌಕರನಾಗಿದ್ದೇನೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲೆಯೇ ಇದೆ. ಕಿರಿಯ ನೌಕರರಾದ ನಾವು ತಮ್ಮ ಮುಂದೆ ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಕುಂದುಕೊರತೆಗಳನ್ನು ಹೇಳದಂತಹ ಸ್ಥಿತಿ ಇದೆ. ಕುಂದುಕೊರತೆಗಳನ್ನು ನಿಮ್ಮ ಮುಂದೆ ಹೇಳಲು ಬಂದಾಗ ತಾವು ಅಮಾನತು ಮಾಡುವ ಹಾಗೂ ಸೇವೆಯಿಂದ ವಜಾ ಮಾಡುವ ಮನೋಸ್ಥಿತಿ ಹೊಂದಿದ್ದರಿಂದ ಆ ಭಯಕ್ಕೆ ನಮ್ಮ ತೊಂದರೆಗಳನ್ನು ನಮ್ಮಲ್ಲಿಯೇ ಅನುಭವಿಸುತ್ತಾ ಸೇವೆ ಮಾಡಿಕೊಂಡು ಬಂದಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.
ಇಂತಹ ಪರಿಸ್ಥಿತಿಯಲ್ಲೂ ತಾವು ನನಗೆ ವರ್ಗಾವಣೆ ಮಾಡುವ ಸಮಯದಲ್ಲಿ ತಮಗಿಂದ ಹಿರಿಯ ಅಧಿಕಾರಿಗಳಿಂದಲೂ ನನ್ನ ಕುಂದು ಕೊರತೆಯ ಬಗ್ಗೆ ತಿಳಿಸಿದರೂ ನನಗೆ ನನ್ನ ಕುಟುಂಬದ ಜೊತೆಗೆ ಇಲಾಖೆಯ ಕರ್ತವ್ಯ ನಿಭಾಯಿಸಲು ಅನುಕೂಲ ಮಾಡಿಕೊಡದೇ ಇಲಾಖೆಯ ಮೇಲೆಯೇ ಅಸಹ್ಯ ಪಡುವಂತೆ ಮಾನಸೀಕ ಹಿಂಸೆ ಕೊಟ್ಟಿದ್ದೂ ಇದೆ. ಹೀಗಿದ್ದರೂ ಡಿಸಿಆರ್ಬಿ ವಿಭಾಗದಿಂದ ಅಳ್ನಾವರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಹೋಗಿ ನನ್ನ ಕರ್ತವ್ಯವನ್ನು ನಿಭಾಯಿಸಲು ಬಿಡದೇ ಮತ್ತೆ ಡಿಪಿಓಗೆ ಕೆಲವು ಪ್ರಕರಣಗಳ ಕರ್ತವ್ಯಕ್ಕೆ ಕರೆಸಿದ್ದರಿಂದ ಮತ್ತಷ್ಟು ಮಾನಸೀಕ ಹಿಂಸೆಯಾಗಿರುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ